Janardhana Reddy; ಆಸ್ತಿ ಜಪ್ತಿ, ಸರ್ಕಾರದ ವಿರುದ್ಧ ಕೋರ್ಟ್ ಕಿಡಿ
ಬೆಂಗಳೂರು, ಜನವರಿ 11; ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸೇರಿದ 219 ಹೆಚ್ಚುವರಿ ಆಸ್ತಿಗಳ ಜಪ್ತಿ ಪ್ರಕ್ರಿಯೆ ಆರಂಭಕ್ಕೆ ವಿಶೇಷ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಸಿಬಿಐ ಸಲ್ಲಿಸಿರುವ ಮನವಿ ಪರಿಗಣಿಸದ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಸಿಬಿಐ ಮನವಿ ಸಲ್ಲಿಸಿ 5 ತಿಂಗಳು ಕಳೆದರೂ ಅದನ್ನು ಏಕೆ ಪರಿಗಣಿಸಿಲ್ಲ? ಎಂದು ಖಾರವಾಗಿ ಪ್ರಶ್ನಿಸಿದೆ.
ಆರೋಪಿ ಪ್ರಭಾವಿ ಎಂಬ ಮಾತ್ರಕ್ಕೆ ವಿಳಂಬ ಮಾಡುವುದು ಸರಿಯಲ್ಲ. ಸರ್ಕಾರದ ದೃಷ್ಟಿಯಲ್ಲಿ ಸಿಬಿಐ ಮನವಿ ಮೇಲೆ ಏನೊಂದು ನಿರ್ಧಾರ ಕೈಗೊಳ್ಳದೆ ಇರುವುದು ಒಂದು ಕ್ರಮ ಆಗಿರಬಹುದು. ಆದರೆ, ಆ ನಡೆಯನ್ನು ನ್ಯಾಯಾಲಯ ಒಪ್ಪುವುದಿಲ್ಲ ಎಂದು ಹೇಳಿದೆ.
ಆದ್ದರಿಂದ ಅರ್ಜಿಗೆ ಕರ್ನಾಟಕ ಸರ್ಕಾರ ತನ್ನ ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಿತು. ತಾನು ಸಲ್ಲಿಸಿರುವ ಮನವಿ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ಸಿಬಿಐ ಮನವಿ ಪರಿಗಣಿಸಲು ಯಾವ ಕಾರಣಕ್ಕೆ ವಿಳಂಬವಾಗಿದೆ ಎಂಬುದರ ಕುರಿತು ಸರ್ಕಾರದಿಂದ ಮಾಹಿತಿ ಪಡೆದು ತಿಳಿಸಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಬಹಳ ಅಘಾತಕಾರಿಯಾಗಿದೆ
ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಜನಾರ್ದನ ರೆಡ್ಡಿಗೆ ಸೇರಿದ ಸುಮಾರು 65 ಕೋಟಿ ರು. ಮೌಲ್ಯದ ಆಸ್ತಿಗಳ ಮುಟ್ಟುಗೋಲು ಪ್ರಕ್ರಿಯೆ ಆರಂಭಿಸಲು ಸಿಬಿಐಗೆ ಸರ್ಕಾರ ಈ ಹಿಂದೆ ಅನುಮತಿ ನೀಡಿದೆ. ಆದರೆ, ಇದೀಗ 19 ಕೋಟಿ ರು. ಮೌಲ್ಯದ ಆಸ್ತಿ ಜಪ್ತಿ ಮಾಡುವ ಪ್ರಕ್ರಿಯೆ ಆರಂಭಿಸಲು ಅನುಮತಿ ನೀಡಲು ಏಕೆ ವಿಳಂಬ ಮಾಡುತ್ತಿದೆ? ಎಂದು ಪ್ರಶ್ನಿಸಿದೆ. ಈ ರೀತಿಯ ಮನವಿಯೊಂದಿಗೆ ಸಿಬಿಐ ಹೈಕೋರ್ಟ್ ಮುಂದೆ ಬಂದಿರುವುದು ಬಹಳ ಅಘಾತಕಾರಿಯಾಗಿದೆ ಎಂದು ಕಟುವಾಗಿ ನುಡಿಯಿತು.

ಅನುಮತಿ ನೀಡಲು ವಿಳಂಬ
ಸಿಬಿಐ ಪರ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್, ಸುಪ್ರಿಂಕೋರ್ಟ್ ನಿರ್ದೇಶನದ ಮೇರೆಗೆ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೊಂಡಿದೆ. ಸರ್ಕಾರದ ಬೊಕ್ಕಸಕ್ಕೆ 198 ಕೋಟಿ ರು. ನಷ್ಟ ಉಂಟು ಮಾಡಿದ ಆರೋಪದ ಮೇಲೆ ಜನಾರ್ದನ ರೆಡ್ಡಿ ಮತ್ತಿತರ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಈ ಮೊದಲು ಜನಾರ್ದನ ರೆಡ್ಡಿಗೆ ಸೇರಿದ 65 ಕೋಟಿ ರು. ಮೌಲ್ಯದ ಆಸ್ತಿಯನ್ನು ಮುಟ್ಟಗೋಲು ಹಾಕಿಕೊಳ್ಳಲು ಸಿಬಿಐ ಗುರುತಿಸಿತ್ತು. ಅದನ್ನು ಮುಟ್ಟುಗೋಲು ಹಾಕಿಕೊಳ್ಳಲು ವಿಶೇಷ ನ್ಯಾಯಾಲಯದಿಂದ ಪ್ರಕ್ರಿಯೆ ಆರಂಭಿಸಲು ಸರ್ಕಾರ ಅನುಮತಿ ಸಹ ನೀಡಿತ್ತು ಎಂದು ವಿವರಿಸಿದರು.

ನ್ಯಾಯಪೀಠದ ಗಮನಕ್ಕೆ ತಂದರು
ನಂತರ ಹೆಚ್ಚುವರಿ ತನಿಖೆ ನಡೆಸಿ 19 ಕೋಟಿ ರು. ಮೌಲ್ಯದ 219 ಹೆಚ್ಚುವರಿ ಆಸ್ತಿ ಗುರುತಿಸಲಾಗಿದೆ. ಅದನ್ನು ಜಪ್ತಿ ಪ್ರಕ್ರಿಯೆ ಆರಂಭಿಸಲು ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಸರ್ಕಾರದ ಮುಖ್ಯ ಕಾಯದರ್ಶಿಗೆ 2022ರ ಆಗಸ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೂ ಆ ಮನವಿ ಸಂಬಂಧ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ. ಆ ಆಸ್ತಿಗಳನ್ನು ಮಾರಾಟ ಮಾಡಲು ಜನಾರ್ದನ ರೆಡ್ಡಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಸನ್ನ ಕುಮಾರ್ ನ್ಯಾಯಪೀಠ ಗಮನಕ್ಕೆ ತಂದರು.

ಪ್ರಕರಣದ ಹಿನ್ನೆಲೆ ಏನು?
ಅಕ್ರಮ ಗಣಿಕಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಜನಾರ್ದನ ರೆಡ್ಡಿ ಮತ್ತವರ ಕುಟುಂಬಸ್ಥರಿಗೆ ಸೇರಿದ ಹೆಚ್ಚುವರಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕಾಗಿ 2022ರ ಆಗಸ್ಟ್‌ನಲ್ಲಿ ಸಲ್ಲಿಸಿರುವ ಮನವಿಯನ್ನು ಶೀಘ್ರದಲ್ಲಿ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕೇಂದ್ರೀಯ ತನಿಖಾ ದಳ(ಸಿಬಿಐ) ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ರೆಡ್ಡಿ ಮತ್ತವರ ಕುಟುಂಬಸ್ಥರು ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅಕ್ರಮವಾಗಿ ಗಳಿಸಿರುವ ಆಸ್ತಿಗಳನ್ನು ಕ್ರಿಮಿನಲ್ ಕಾನೂನುಗಳ (ತಿದ್ದುಪಡಿ)ಸುಗ್ರೀವಾಜ್ಞೆ ಕಾಯಿದೆ 1994ರ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಈ ಸಂಬಂಧ ವಿಶೇಷ ನ್ಯಾಯಲದಲ್ಲಿ ಮನವಿ ಮಾಡಬೇಕಾಗಿದೆ. ಆದ್ದರಿಂದ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸಲು ಅನುಮತಿ ನೀಡುವಂತೆ 2022ರ ಆಗಸ್ಟ್ 30ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ ಇದನ್ನು ಪರಿಗಣಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.












Click it and Unblock the Notifications