Janardhana Reddy: ಶಾಸಕ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್‌ನಿಂದ ಬಿಗ್ ರಿಲೀಫ್‌

ಬೆಂಗಳೂರು, ಸೆಪ್ಟೆಂಬರ್ 30: ಗಂಗಾವತಿ ಕ್ಷೇತ್ರದ ಶಾಸಕ, ಬಿಜೆಪಿ ನಾಯಕ ಗಾಲಿ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಜನಾರ್ದನ ರೆಡ್ಡಿಗೆ ಜಾಮೀನು ನೀಡುವಾಗ ಕೋರ್ಟ್ ಬಳ್ಳಾರಿಗೆ ಭೇಟಿ ನೀಡದಂತೆ ನಿರ್ಬಂಧ ಹೇರಿತ್ತು. ಆದ್ದರಿಂದ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಬೆಂಗಳೂರಿನ 'ಪಾರಿಜಾತ' ನಿವಾಸದಲ್ಲಿಯೇ ವಾಸ್ತವ್ಯ ಹೂಡಿದ್ದರು.

ಜನಾರ್ದನ ರೆಡ್ಡಿ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟ್ ಬಳ್ಳಾರಿಗೆ ಭೇಟಿ ನೀಡದಂತೆ ಹಾಕಿದ್ದ ಷರತ್ತುಗಳನ್ನು ಸಡಿಲಿಸಿದೆ. ಆದ್ದರಿಂದ ಅವರು ಇನ್ನು ಮುಂದೆ ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಬಹುದು. ಅಲ್ಲಿರುವ ತಮ್ಮ ಐಷಾರಾಮಿ ನಿವಾಸದಲ್ಲಿ ವಾಸ್ತವ್ಯವನ್ನು ಹೂಡಬಹುದು.

Janardhana Reddy Ballari Visit Restrictions Removed By Supreme Court

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ 2011ರಲ್ಲಿ ಜನಾರ್ದನ ರೆಡ್ಡಿಯನ್ನು ಬಂಧಿಸಿತ್ತು. 2015ರಲ್ಲಿ ಅವರಿಗೆ ಸುಪ್ರೀಂಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಜಾಮೀನು ನೀಡುವ ವೇಳೆ ಬಳ್ಳಾರಿಗೆ ಭೇಟಿ ನೀಡುವಂತಿಲ್ಲ ಎಂಬ ಷರತ್ತು ಹಾಕಿತ್ತು. ಆದ್ದರಿಂದ ಕೋರ್ಟ್ ಅನುಮತಿ ಪಡೆದು ಅವರು ಬಳ್ಳಾರಿಗೆ ಭೇಟಿ ನೀಡಬೇಕಿತ್ತು.

ಹಲವು ಬಾರಿ ಅರ್ಜಿ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ನೀಡುವಾಗ ಸುಪ್ರೀಂಕೋರ್ಟ್ ವಿಧಿಸಿರುವ ಷರತ್ತುಗಳನ್ನು ಸಡಿಲಗೊಳಿಸಬೇಕು ಎಂದು ಕೋರಿ ಹಲವು ಬಾರಿ ಜನಾರ್ದನ ರೆಡ್ಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಬಳ್ಳಾರಿಗೆ ಭೇಟಿ ನೀಡುವ ಷರತ್ತು ಸಡಿಲಿಸಲು ಕೋರ್ಟ್ ನಿರಾಕರಿಸಿತ್ತು.

ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ವಿವಾಹದ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಅನುಮತಿ ಪಡೆದು ಬಳ್ಳಾರಿಯ ನಿವಾಸಕ್ಕೆ ಭೇಟಿ ನೀಡಿದ್ದರು. ವಿವಾಹದ ಕಾರಣ 10ಕ್ಕೂ ಹೆಚ್ಚು ದಿನಗಳ ಕಾಲ ಅವರು ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಲು ಕೋರ್ಟ್ ಅನುಮತಿ ನೀಡಿತ್ತು. ಬಳಿಕ ಬಳ್ಳಾರಿಗೆ ಭೇಟಿ ನೀಡಬಾರದು ಎಂಬ ಷರತ್ತು ಮತ್ತೆ ಮುಂದುವರೆದಿತ್ತು.

ಪುತ್ರಿ ಬ್ರಹ್ಮಣಿ ಹೆರಿಗೆ ಸಮಯದಲ್ಲಿ ಮತ್ತೆ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡುಲು ಅನುಮತಿ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆಗಲೂ ಸಹ ಕೋರ್ಟ್ ಕೆಲವು ದಿನಗಳ ಕಾಲ ಅವರು ಬಳ್ಳಾರಿಯಲ್ಲಿರಲು ಅವಕಾಶವನ್ನು ನೀಡಿತ್ತು.

ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದ ಬಳಿಕ ಜನಾರ್ದನ ರೆಡ್ಡಿ ರಾಜ್ಯ ರಾಜಕೀಯದಲ್ಲಿ 2022ರಲ್ಲಿ ಸಕ್ರಿಯರಾದರು. 2022ರ ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದರು. ಪಕ್ಷದಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದರು.

ಚುನಾವಣೆಯಲ್ಲಿ 66,213 ಮತಗಳನ್ನು ಪಡೆದು, ಕಾಂಗ್ರೆಸ್‌ನ ಇಕ್ಬಾಲ್ ಅನ್ಸಾರಿ (57947 ಮತಗಳು) ಸೋಲಿಸಿ ಶಾಸಕರಾಗಿ ಆಯ್ಕೆಯಾದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜನಾರ್ದನ ರೆಡ್ಡಿ ಬಿಜೆಪಿ ಸೇರಲು ಹೈಕಮಾಂಡ್ ಒಪ್ಪಿಗೆ ನೀಡಿತು. 2024ರ ಮಾರ್ಚ್‌ನಲ್ಲಿ ಅವರು ಬಿಜೆಪಿ ಸೇರಿದರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸಿದರು.

ಸುಪ್ರೀಂಕೋರ್ಟ್ ಷರತ್ತಿನ ಹಿನ್ನಲೆಯಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಗಂಗಾವತಿಯಲ್ಲಿಯೇ ಮನೆ ಮಾಡಿಕೊಂಡು ವಾಸ್ತವ್ಯ ಹೂಡಿದ್ದಾರೆ. ಈಗ ಅವರು ಬಳ್ಳಾರಿಗೆ ಭೇಟಿ ನೀಡದಂತೆ ವಿಧಿಸಿದ್ದ ಷರತ್ತು ಸಡಿಲಗೊಳಿಸಿರುವ ಹಿನ್ನಲೆಯಲ್ಲಿ ಬಳ್ಳಾರಿಗೆ ಯಾವಾಗ ಬೇಕಾದರೂ ಭೇಟಿ ನೀಡಬಹುದಾಗಿದೆ. ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮತ್ತು ಅವರ ಆಪ್ತ ಸ್ನೇಹಿತ ಬಿ. ಶ್ರೀರಾಮುಲು ಐಷಾರಾಮಿ ಬಂಗಲೆಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+