Janardhana Reddy; ಹೊಸ ಪಕ್ಷ ಘೋಷಣೆ, ಪತ್ರಿಕಾಗೋಷ್ಠಿ highlights
ಬೆಂಗಳೂರು, ಡಿಸೆಂಬರ್ 25; ಮಠಗಳಿಗೆ ಭೇಟಿ, ದೇವಾಲಯಗಳಲ್ಲಿ ವಿಶೇಷ ಪೂಜೆ, ವಿವಿಧ ಜಿಲ್ಲೆಗಳಲ್ಲಿ ಸಂಚಾರ, ಅಭಿಮಾನಿಗಳ ಭೇಟಿ. ಒಂದು ವಾರದ ಕೂತೂಹಲಕ್ಕೆ ತೆರೆಬಿದ್ದಿದೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿದ್ದಾರೆ.
ಕಳೆದ ವಾರವೇ ಘೋಷಣೆ ಮಾಡಿದಂತೆ ಭಾನುವಾರ ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಪತ್ರಿಕಾಗೋಷ್ಠಿ ನಡೆಸಿದರು. "ನಾನು ಕೆಲಸ ಮಾಡಿದ ಪಕ್ಷದಿಂದ ಸ್ಥಾನಮಾನ ಸಿಗದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕಲ್ಯಾಣ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಮುಂದೆ ಹೆಜ್ಜೆ ಹಾಕುತ್ತೇನೆ" ಎಂದು ಹೇಳಿದರು.
2023ರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಮಾಜಿ ಸಚಿವ ಜನಾರ್ದನ ರೆಡ್ಡಿ, 'ಕರ್ನಾಟಕ ರಾಜ್ಯ ಪ್ರಗತಿ ಪಕ್ಷ' ಎಂಬ ಹೊಸ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಈಗಾಗಲೇ ಗಂಗಾವತಿಯಲ್ಲಿ ಮನೆ ಮಾಡಿರುವ ಅವರು ಕೊಪ್ಪಳ ಜಿಲ್ಲೆಯ ಅದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ಜನಾರ್ದನ ರೆಡ್ಡಿ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ, ಕೇಂದ್ರ ಗೃಹ ಸಚಿವ ಅಮಿತ್ ಶಾ, ದಿ. ಸುಷ್ಮಾ ಸ್ವರಾಜ್ ಸೇರಿದಂತೆ ಹಲವು ನಾಯಕರನ್ನು ನೆನಪು ಮಾಡಿಕೊಂಡರು. ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು ಇಲ್ಲಿವೆ...

ಸಾರ್ವಜನಿಕ ಬದುಕಿಗೆ ಬರಬೇಕು ಎಂದು ತೀರ್ಮಾನ
"ಕಾಯಕವೇ ಕೈಲಾಸ ಎಂದು ನಂಬಿದವನು ನಾನು. ಬಸವಣ್ಣನವರು ಹೇಳಿದ ಹಾಗೆ ಯಾವುದೇ ಜಾತಿ, ಮತ ಭೇದ ಇಲ್ಲದ ಹಾಗೆ ಮತ್ತು ಮೇಲು ಕೀಳು ಇಲ್ಲದ ಹಾಗೆ ಕೆಲಸ ಮಾಡಲು ನಿರ್ಧರಿಸಿದ್ದೇನೆ. ನಾನು ಕೆಲಸ ಮಾಡಿದ ಪಕ್ಷದಿಂದ ಸ್ಥಾನಮಾನಗಳು ಸಿಗದ ಕಾರಣ ಇಂದು ವಾಜಪೇಯಿ ಅವರನ್ನು ನೆನಪು ಮಾಡಿಕೊಳ್ಳುತ್ತಾ ಸಾರ್ವಜನಿಕ ಬದುಕಿಗೆ ಬರಬೇಕು ಎಂದು ತೀರ್ಮಾನ ಕೈಗೊಂಡಿದ್ದೇನೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿ ಮುಂದಿನ ರಾಜಕೀಯ ಹೆಜ್ಜೆ ಹಾಕುತ್ತೇನೆ" ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಘೋಷಣೆ ಮಾಡಿದರು.

ಬಿಜೆಪಿಗೆ 130 ಸ್ಥಾನಗಳು ಬರುತ್ತಿದ್ದವು
2018ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿ. ಶ್ರೀರಾಮುಲು ಪರವಾಗಿ ಪ್ರಚಾರ ಮಾಡಿದ ಸಂದರ್ಭ ನೆನಪು ಮಾಡಿಕೊಂಡ ಜನಾರ್ದನ ರೆಡ್ಡಿ,"ಚುನಾವಣೆಯಲ್ಲಿ ನನ್ನನ್ನು ಚಿತ್ರದುರ್ಗದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಸೀಮಿತಗೊಳಿಸದೇ ಇಡೀ ರಾಜ್ಯದಲ್ಲಿ ಸಕ್ರಿಯವಾಗಿರಲು ಅವಕಾಶ ಕೊಟ್ಟಿದ್ದರೆ ಬಿಜೆಪಿ ಪಕ್ಷಕ್ಕೆ 130ಕ್ಕೂ ಅಧಿಕ ಸ್ಥಾನಗಳು ಬರುತ್ತಿದ್ದವು" ಎಂದರು.
ಚುನಾವಣಾ ಫಲಿತಾಂಶದ ಬಗ್ಗೆಯೂ ಮಾತನಾಡಿದ ಅವರು,"ಚುನಾವಣೆಯಲ್ಲಿ ಬಿಜೆಪಿಗೆ 104 ಸ್ಥಾನ ಬಂದಿತು. ಆಗಲೂ ನಾನು ಅಮಿತ್ ಶಾ ಸಂಪರ್ಕ ಮಾಡಲು ಪ್ರಯತ್ನ ನಡೆಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಮಾಧ್ಯಮಗಳು ಜನಾರ್ದನ ರೆಡ್ಡಿಯನ್ನು ಬಿಜೆಪಿ ಸರಿಯಾಗಿ ನೆಡೆಸಿಕೊಳ್ಳಲಿಲ್ಲ ಎಂದು ವರದಿ ಮಾಡಿದವು. ನಾನು 2018ರಲ್ಲಿಯೇ ಸ್ವಂತ ತೀರ್ಮಾನ ಕೈಗೊಳ್ಳಬೇಕಿತ್ತು. ಆದರೆ ತೆಗೆದುಕೊಳ್ಳಲಿಲ್ಲ" ಎಂದು ಜನಾರ್ದನ ರೆಡ್ಡಿ ಹೇಳಿದರು.

ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿದೆ
ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಜನಾರ್ದನ ರೆಡ್ಡಿ ನೆನಪು ಮಾಡಿಕೊಂಡರು. "ಜೈಲಿನಿಂದ ಬಿಡುಗಡೆ ಆದ ಮೇಲೆ ರಾಜಕೀಯ ಬೇಡ ಎಂದು ನಿರ್ಧರಿಸಿದೆ. ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ ಬಿಜೆಪಿಗೂ ಜನಾರ್ದನ ರೆಡ್ಡಿಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದರು. ಇದನ್ನು ಮಾಧ್ಯಮಗಳಲ್ಲಿ ನೋಡಿ ನಾನು, ನನ್ನ ಶ್ರೀಮತಿ ನೊಂದು ಕೊಂಡೆವು. ಅದು ಆದ ಎರಡು ದಿನಕ್ಕೆ ಶ್ರೀ ರಾಮುಲು ದೆಹಲಿಗೆ ಬಂದು ಅಮಿತ್ ಶಾ ಭೇಟಿ ಮಾಡುವಂತೆ ಕರೆದರು" ಎಂದು ಜನಾರ್ದನ ರೆಡ್ಡಿ ಹೇಳಿದರು.
"ದೆಹಲಿಯಲ್ಲಿ ನನ್ನ ಮಾತಿಗೆ ನೊಂದುಕೊಳ್ಳ ಬೇಡಿ. ಬಿ. ಶ್ರೀರಾಮುಲು ಮೊಳಕಾಲ್ಮೂರಿಗೆ ಹೋಗುತ್ತಾರೆ. ನೀವು ಹೋಗಿ ಸಹಾಯ ಮಾಡಿ. ಚುನಾವಣೆ ಮುಗಿದ ಮೇಲೆ ಉತ್ತಮ ಸ್ಥಾನಮಾನ ಕೊಡುತ್ತೇವೆ ಎಂದು ಭರವಸೆಯನ್ನೂ ನೀಡಿದರು. ಆದ್ದರಿಂದ ನಾನು ಪ್ರಚಾರದಲ್ಲಿ ಸಕ್ರಿಯನಾಗಿ ಪಾಲ್ಗೊಂಡೆ" ಎಂದು ಜನಾರ್ದನ ರೆಡ್ಡಿ ವಿವರಣೆ ನೀಡಿದರು.

ಸುಷ್ಮಾ ಸ್ವರಾಜ್‌ಗೆ ಸಹಾಯ ಮಾಡಿದೆ
ಅಕ್ರಮ ಗಣಿಗಾರಿಕೆ ಪ್ರಕರಣ, ಜೈಲು ವಾಸದ ಬಗ್ಗೆ ಮಾತನಾಡಿದ ಜನಾರ್ದನ ರೆಡ್ಡಿ, "ನಾನು ಅಕ್ರಮ ಗಣಿಗಾರಿಕೆ ಮಾಡಿಲ್ಲ. ಸಕ್ರಮವಾಗಿಯೇ ಗಣಿಗಾರಿಕೆ ಮಾಡಿದೆ. ಕೋರ್ಟ್‌ಗಳಲ್ಲಿ ಕೇಸುಗಳು ನಡೆಯುತ್ತಿವೆ. ನಾನು ನಿರ್ದೋಷಿಯಾಗಿ ಹೊರಬರುತ್ತೇನೆ. ನನ್ನ ಏಳಿಗೆ ಸಹಿಸದ ರಾಜಕೀಯ ವಿರೋಧಿಗಳು ನಮ್ಮ ಗಣಿಗಾರಿಕೆ, ಉದ್ಯಮದ ಕುರಿತು ಅಪ ಪ್ರಚಾರ ಮಾಡಿದರು. ನನ್ನನ್ನು ಬಂಧನ ಮಾಡಲು ಬಂದವರು ಆಕ್ರಮಣಕಾರಿಯಾಗಿ ಬಂಧಿಸಿದರು. ಸುಷ್ಮಾ ಸ್ವರಾಜ್‌ಗೆ ಸಹಾಯ ಮಾಡಿದ ಕಾರಣ ನನ್ನನ್ನು ಬಂಧಿಸಿದರು. ರಾಜ್ಯ ರಾಜಕೀಯದಲ್ಲಿ ನನ್ನವರೇ ಎಂದು ನಾನು ಹಲವರನ್ನು ಮರೆಸಿದರೂ ನಾನು ಮೋಸ ಹೋದೆ. ನಾನು ಚೆನ್ನಾಗಿ ಇದ್ದಾಗ ಎಲ್ಲರೂ ಹೊಗಳಿದರು. ಆದರೆ ಕಷ್ಟ ಕಾಲದಲ್ಲಿ ಬಿ. ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಬಿಟ್ಟು ಯಾರೂ ಸಹ ಬಂದು ಧೈರ್ಯ ತುಂಬಲಿಲ್ಲ" ಎಂದು ವಿವರಿಸಿದರು.

ವಿಜಯೇಂದ್ರಗೆ ಟಿಕೆಟ್ ನೀಡಬೇಕಿತ್ತು
ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಬಗ್ಗೆ ಮಾತನಾಡಿದ ಜನಾರ್ದನ ರೆಡ್ಡಿ, "2018ರ ಚುನಾವಣೆಯಲ್ಲಿ ನನ್ನನ್ನು ಮೊಳಕಾಲ್ಮೂರು ಕ್ಷೇತ್ರಕ್ಕೆ ನನ್ನನ್ನು ಸೀಮಿತಗೊಳಿಸಿದೇ ಇದ್ದಲ್ಲಿ ಮತ್ತು ವಿಜಯೇಂದ್ರಗೆ ವರುಣಾದಲ್ಲಿ ಟಿಕೆಟ್ ಕೊಟ್ಟಿದ್ದರೆ ಬಿಜೆಪಿ ಚುನಾವಣೆಯಲ್ಲಿ ಇನ್ನಷ್ಟು ಸ್ಥಾನಗಳಿಸುತ್ತಿತ್ತು" ಎಂದು ಹೇಳಿದರು.
"ವರುಣಾ ಕ್ಷೇತ್ರದಲ್ಲಿ ಬಿ. ವೈ. ವಿಜಯೇಂದ್ರ ಕೆಲಸ ಮಾಡಿದ್ದರು. ನಾಮಪತ್ರ ಸಲ್ಲಿಕೆ ಮಾಡುವುದಕ್ಕೆ ರೆಡಿ ಆಗಿದ್ದರು. ಹೈಕಮಾಂಡ್ ಮೊದಲೇ ಟಿಕೆಟ್ ಕೊಡುವುದಿಲ್ಲ ಎಂದು ಹೇಳಬೇಕಿತ್ತು. ವೇದಿಕೆ ಮೇಲೆ ಯಡಿಯೂರಪ್ಪ ವಿಜಯೇಂದ್ರ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದರು. ಹೀಗೆ ಹೇಳಲು ಯಾರೋ ಒತ್ತಡ ಹಾಕಿದ್ದಾರೆ ಎಂದು ಅನಿಸಿತು. ತಂದೆಯ ಬಾಯಿಯಲ್ಲಿ ಹೀಗೆ ಹೇಳಿಸೋಕೆ ಏನೆಲ್ಲ ಒತ್ತಡಗಳಿತ್ತೋ?" ಎಂದು ತಿಳಿಸಿದರು.












Click it and Unblock the Notifications