"ಜೈ ಶ್ರೀ ರಾಮ್" ಎಂದರೆ ನಿಮ್ಮ ಪಾಪಗಳು ತೊಳೆದು ಹೋಗಲ್ಲ ಎಂದ ಪ್ರಿಯಾಂಕ್ ಖರ್ಗೆ, ಹೇಳಿದ್ದು ಯಾರಿಗೆ
ವಿರೋಧಿ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ನಡುವೆ ಟ್ವಿಟ್ಟರ್‌ನಲ್ಲಿ ವಾಕ್ಸಮರ ಮುಂದುವರಿದಿದೆ. ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ವಿಷಯಾಂತರ ಮಾಡುವುದರಲ್ಲಿ ಬಿಜೆಪಿಯವರೇ ನಿಸ್ಸಿಮರು ಎನ್ನುವುದು ಜಗತ್ತಿಗೇ ಗೊತ್ತಿರುವ ವಿಚಾರ. ಆರ್. ಅಶೋಕ್ ಅವರೇ ನನ್ನ ಹೇಳಿಕೆ ಸ್ಪಷ್ಟವಾಗಿದೆ. ನೀವು ಜೈ ಶ್ರೀ ರಾಮ್ ಎಂದು ಹೇಳುವುದರಿಂದ ನಿಮ್ಮ ಪಾಪಗಳನ್ನು ತೊಳೆದು ಹೋಗುವುದಿಲ್ಲ ಎಂದಿದ್ದಾರೆ.
ಮುಂದುವರಿದು ನಮ್ಮದು ಬದುಕು ಕಟ್ಟುವ ರಾಜಕೀಯ, ಬಿಜೆಪಿಯದ್ದು ಭಾವನೆ ಪ್ರಚೋದಿಸುವ ರಾಜಕೀಯ. ನಮ್ಮದು ಮನೆಗಳಲ್ಲಿ ದೀಪ ಹಚ್ಚುವ ಯೋಜನೆಗಳು, ಬಿಜೆಪಿಯವರದ್ದು ಸಮಾಜದಲ್ಲಿ ಬೆಂಕಿ ಹಚ್ಚುವ ಸಂಚುಗಳು ಎಂದಿದ್ದಾರೆ. ಅಲ್ಲದೇ ಸರ್, ತಾವು ಕಾಂಗ್ರೆಸ್ ಪಕ್ಷ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಚಿಂತಿಸುವ ಬದಲು ನಿಮ್ಮ ಪಕ್ಷದ ಸಮಸ್ಯೆಗಳನ್ನು ಗಮನಿಸಿದರೆ ಕ್ಷೇಮ.

ಒಕ್ಕಲಿಗರು, ದಲಿತರ ಬಗ್ಗೆ ಅವಹೇಳನ ಮಾಡಿದ ಹಾಗೂ ನಿಮಗೇ HIV ಇಂಜೆಕ್ಷನ್ ಚುಚ್ಚಲು ಸಂಚು ರೂಪಿಸಿದ್ದ ಮುನಿರತ್ನರಿಗೆ ಕನಿಷ್ಠ ಒಂದು ಶೋಕಾಸ್ ನೋಟಿಸ್ ನೀಡುವುದಕ್ಕೂ ಸಾಮ್ರಾಟರಿಂದ ಸಾಧ್ಯವಾಗಿಲ್ಲ ಎಂದು ಜನಸಾಮಾನ್ಯರು ಮಾತಾಡಿಕೊಂಡು ನಗುತ್ತಿದ್ದಾರೆ ಎಂದು ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ.
ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲದ ನಿಮ್ಮಿಂದ ಕುದಿಯುತ್ತಿರುವ ತಮ್ಮ ಪಕ್ಷದ ಜ್ವಾಲಾಮುಖಿಯನ್ನು ತಣಿಸಲು ಸಾಧ್ಯವೇ ಎಂದು ಪ್ರಶ್ನೆ ಮಾಡಿರುವ ಅವರು, ಮುಳುಗುತ್ತಿರುವ ಕರ್ನಾಟಕದ ಬಿಜೆಪಿಯನ್ನು ಪ್ರಭು ಶ್ರೀರಾಮ ಬಂದರೂ ಉಳಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಮುಂದುವರಿದು, ಮಾನ್ಯ ವಿರೋಧ ಪಕ್ಷದ ನಾಯಕರೇ ಚನ್ನಗಿರಿಯಲ್ಲಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎಂದು ನಿಮ್ಮದೇ ಪಕ್ಷದ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರನ್ನು ಕೇಳುವುದು ಸೂಕ್ತ. ಅವರ ಅವಧಿಯಲ್ಲಿನ ಬೆಳವಣಿಗೆಗಳ ಬಗ್ಗೆ ಅವರಿಗೇ ಹೆಚ್ಚು ತಿಳಿದಿರುತ್ತದೆ ಎಂದಿದ್ದಾರೆ.
ನಿಮ್ಮ ಹಿತಕ್ಕಾಗಿ ನನ್ನದೊಂದು ಸಲಹೆ ಇದೆ. ಕಳಪೆ ಮತ್ತು ವಿಷಯ ರಹಿತ ಪೋಸ್ಟ್ ಗಳಿಂದ ನಿಮ್ಮ ಸಾಮಾಜಿಕ ಜಾಲತಾಣದ ನಿರ್ವಾಹಕರು ನಿಮ್ಮ ಇಮೇಜ್ ಡ್ಯಾಮೇಜ್ ಮಾಡುತ್ತಿದ್ದಾರೆ. ಬಹುಶಃ ವೇತನ ಕಡಿಮೆಯಾಗಿದ್ದಕ್ಕೆ ಅವರು ನಿಮ್ಮ ಮೇಲೆ ಕೋಪಗೊಂಡಿರಬಹುದು,
ಅವರ ವೇತನ ಏರಿಕೆ ಮಾಡಿ ಎಂದು ಅಶೋಕ್ ಅವರ ಕಾಲೆಳೆದಿದ್ದಾರೆ.
ಕಳೆದ ಎರಡು ದಿನಗಳಿಂದ ಆರ್. ಅಶೋಕ್ ಹಾಗೂ ಪ್ರಿಯಾಂಕ್ ಅವರ ನಡುವೆ ಟ್ವೀಟ್ ವಾರ್ ಮುಂದುವರಿದಿದೆ. ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವುದು ಬಿಟ್ಟು ನೀವು ಅಸಂಬದ್ಧವಾಗಿ ತಲೆಬುಡ ಇಲ್ಲದೆ ಏನೇನೋ ತಡಬಡಾಯಿಸಿದ್ದೀರಿ ಎಂದು ಆರ್. ಅಶೋಕ್ ಅವರು ಖರ್ಗೆ ಹೇಳಿದ್ದರು. ಅಲ್ಲದೇ ನಾನು ಕೇಳಿದ ಯಾವ ಪ್ರಶ್ನೆಗಳಿಗೂ ನಿಮ್ಮ ಬಳಿ ಉತ್ತರ ಇಲ್ಲ ಎನ್ನುವುದು ನೀವು ಕೊಡುತ್ತಿರುವ ಅಸಂಬದ್ಧ ಉತ್ತರವೇ ಸಾಕ್ಷಿ ಎಂದಿದ್ದರು.
ಅಲ್ಲದೇ ಹೋಗ್ಲಿ ಬಿಡಿ, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾ* ಘೋಷಣೆ ಕೂಗಿದ ದೇಶದ್ರೋಹಿಗಳನ್ನು ಸಮರ್ಥನೆ ಮಾಡಿಕೊಳ್ಳುವ ಬಾಯಿಂದ ಜೈ ಶ್ರೀರಾಮ್ ನಾಮ ಜಪ ಬಂದಿದೆಯಲ್ಲ ಅದೇ ಅದೇ ದೊಡ್ಡ ಸಮಾಧಾನ ಎಂದು ಹೇಳಿದ್ದರು.
ಮುಂದುವರಿದು ತಮ್ಮ ತಂದೆಯವರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಕೇಳಿರುವ ಸಚಿವರ ಸಾಧನೆಯ ರಿಪೋರ್ಟ್ ಕಾರ್ಡ್ ಕೊಟ್ಟಿದ್ದೀರಾ ಇಲ್ಲ ಎಐಸಿಸಿ ಅಧ್ಯಕ್ಷರ ಸುಪುತ್ರರು (ಮಗ) ಎನ್ನುವ ಕಾರಣಕ್ಕೆ ನಿಮಗೆ ವಿಶೇಷ ವಿನಾಯಿತಿ ಏನಾದರೂ ಇದೆಯಾ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಇದೀಗ ಪ್ರಿಯಾಂಕ್ ಅವರು ಉತ್ತರ ನೀಡಿದ್ದಾರೆ.












Click it and Unblock the Notifications