ಖರ್ಗೆ ಸಮ್ಮುಖದಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು, ಏಪ್ರಿಲ್ 17; ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಬಳಿಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಅವರು ಕಾಂಗ್ರೆಸ್ ಸೇರಿದರು.
ಕಾಂಗ್ರೆಸ್ ಶಾಲು ಹಾಕುವ ಮೂಲಕ, ಕೆ. ಸಿ. ವೇಣುಗೋಪಾಲ್ ಕಾಂಗ್ರೆಸ್ ಧ್ವಜ ನೀಡುವ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

"ಕಳೆದ ಆರು ತಿಂಗಳಿನಿಂದ ನನ್ನನ್ನು ಕಡೆಗಣಿಸಲಾಗಿದೆ. ಶೆಟ್ಟರ್ ನಿಮಗೆ ಟಿಕೆಟ್ ನೀಡುವುದಿಲ್ಲ ಎಂದು 15 ದಿನಗಳ ಮುಂಚೆ ಹೇಳಬಹುದಿತ್ತು. ಆದರೆ ಕೊನೆ ಕ್ಷಣದಲ್ಲಿ ನಡೆಸಿಕೊಂಡ ರೀತಿ ಸರಿ ಇಲ್ಲ. ಎರಡು ಪಟ್ಟಿ ಬಂದರೂ ನಿಮ್ಮ ಹೆಸರಿಲ್ಲ ಎಂದು ಅಭಿಮಾನಿಗಳು, ಕಾರ್ಯಕರ್ತರು ಕೇಳಲು ಆರಂಭಿಸಿದರು. ಹಿರಿಯ ನಾಯಕನಾದ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನಾನು ಪಕ್ಷವನ್ನು ಬಿಡುವ ತೀರ್ಮಾನ ಮಾಡಿದೆ" ಎಂದು ಜಗದೀಶ್ ಶೆಟ್ಟರ್ ಹೇಳಿದರು.
"ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ನಾನು ಕಟ್ಟಿದ ಪಕ್ಷದಿಂದಲೇ ನನ್ನನ್ನು ಹೊರ ಹಾಕುವ ಪ್ರಯತ್ನ ನಡೆಯಿತು. ಇಂತಹ ಬೆಳವಣಿಗೆ ಇಂದ ನನಗೆ ಬಹಳ ನೋವಾಯಿತು. ಕರ್ನಾಟಕದಲ್ಲಿ ಬಿಜೆಪಿ ಪಕ್ಷ ವ್ಯಕ್ತಿ ಕೇಂದ್ರಿತವಾಗುತ್ತಿದೆ" ಎಂದು ಜಗದೀಶ್ ಶೆಟ್ಟರ್ ಆರೋಪಿಸಿದರು.
ಮಲ್ಲಿಕಾರ್ಜುನ ಖರ್ಗೆ ಹೇಳಿಕೆ; "ರಾಹುಲ್ ಗಾಂಧಿ ಅವರು ನಮಗೆ 150 ಸೀಟು ಗೆಲ್ಲಬೇಕು ಎಂದು ಹೇಳಿದ್ದರು. ಜಗದೀಶ್ ಶೆಟ್ಟರ್ ಸೇರ್ಪಡೆಯಾದ ಮೇಲೆ ನಮಗೆ ನಂಬಿಕೆ ಬಂದಿದೆ. ಅವರು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಹುಬ್ಬಳ್ಳಿ-ಧಾರವಾಡ ಕೇಂದ್ರ, ಪೂರ್ವ, ಪಶ್ಚಿಮ ಎಲ್ಲಾ ಕ್ಷೇತ್ರಗಳಲ್ಲಿಯೂ ನಮಗೆ ಸಹಕಾರಿಯಾಗಲಿದೆ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದಾರೆ. "ನಾನು ಹೆಚ್ಚಾಗಿ ಮಾತನಾಡುವುದಿಲ್ಲ. ಡಿ. ಕೆ. ಶಿವಕುಮಾರ್ ಅವರು ಹಲವಾರು ವಿಚಾರಗಳನ್ನು ನಿಮ್ಮ ಮುಂದೆ ಇಟ್ಟಿದ್ದಾರೆ" ಎಂದರು.
"ಜಗದೀಶ್ ಶೆಟ್ಟರ್ ಅವರ ಪಕ್ಷ ಸೇರ್ಪಡೆಯಿಂದಾಗಿ ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಪಕ್ಷಕ್ಕೆ ಶಕ್ತಿ ಹೆಚ್ಚಾಗಲಿದೆ. ಶೆಟ್ಟರ್‌ಗೆ ಪಕ್ಷದ ತತ್ವ, ಸಿದ್ಧಾಂತ ತಿಳಿದಿದೆ. ಅವರ ಜೊತೆ ಹಲವಾರು ಜನರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
"ಕರ್ನಾಟಕ ರಾಜ್ಯಕ್ಕೆ ವಿಶೇಷವಾದ ದಿನ. ಕರ್ನಾಟಕವನ್ನು ಒಗ್ಗೂಡಿಸುವ ದಿನ. ನಮ್ಮನ್ನು ಉದ್ದೇಶಿಸಿ ಮಾತನಾಡಲು ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಿದ್ದಾರೆ ಎಲ್ಲರಿಗೂ ನಾನು ಸ್ವಾಗತ ಕೋರುತ್ತೇನೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
"ಸರಳ ಸಜ್ಜನ ರಾಜಕಾರಣಿ, 6 ಬಾರಿ ಶಾಸಕರಾಗಿದ್ದಾರೆ. ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದಿದ್ದಾರೆ. ಯಾವುದೇ ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿ. ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ" ಎಂದು ಡಿ. ಕೆ. ಶಿವಕುಮಾರ್ ಜಿಗದೀಶ್ ಶೆಟ್ಟರ್‌ರನ್ನು ಸ್ವಾಗತಿಸಿದರು.
ಕರ್ನಾಟಕದ ರಾಜಕೀಯದಲ್ಲಿ ಸೋಮವಾರ ಮಹತ್ವದ ಬೆಳವಣಿಗೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ, ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಏಪ್ರಿಲ್ 20 ಕೊನೆಯ ದಿನವಾಗಿದೆ.
ಬಿಜೆಪಿಗೆ ಶೆಟ್ಟರ್ ರಾಜೀನಾಮೆ; ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸಹ ಅವರು ರಾಜೀನಾಮೆ ನೀಡಿದ್ದು, ಆಪ್ತ ಸಹಾಯಕನ ಮೂಲಕ ಬಿಜೆಪಿ ಕಚೇರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.
ಸೋಮವಾರ ಬೆಳಗ್ಗೆ ರಿಚ್‌ಮಂಡ್ ಟೌನ್‌ನಲ್ಲಿರುವ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಫ್ಲಾಟ್‌ನಿಂದ ಜಗದೀಶ್ ಶೆಟ್ಟರ್ ಕೆಪಿಸಿಸಿ ಕಚೇರಿಗೆ ಆಗಮಿಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮುಂತಾದ ನಾಯಕರು ಕೆಪಿಸಿಸಿ ಕಚೇರಿಗೆ ಆಗಮಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾರೆ. ಇದರಲ್ಲಿ ಪಾಲ್ಗೊಳ್ಳಲು ಜಗದೀಶ್ ಶೆಟ್ಟರ್ ಆಗಮಿಸಿದರು.
#WATCH | Former Karnataka CM Jagadish Shettar reaches Congress office in Bengaluru.
— ANI (@ANI) April 17, 2023
Jagadish Shettar is likely to join the Congress party after he resigned from BJP yesterday. pic.twitter.com/8xT6J1aubC
ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, "ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೆ ಯಾವುದೇ ಷರತ್ತು ಹಾಕಿಲ್ಲ. ಕರಡಿ ಸಂಗಣ್ಣ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೋ, ಇಲ್ಲವೋ ತಿಳಿದಿಲ್ಲ" ಎಂದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, "ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಕುರಿತು ತಿಳಿದುಕೊಳ್ಳಲು ಕೆಲವೇ ಕ್ಷಣ ಕಾಯಿರಿ. ಬಿಜೆಪಿ ಲಿಂಗಾಯತ ಸಮುದಾಯವನ್ನು ಕಡೆಗಣಿಸುತ್ತಿದೆ. ಯಡಿಯೂರಪ್ಪ, ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಅವರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ? ಎಂಬುದು ಎಲ್ಲರಿಗೂ ತಿಳಿದಿದೆ" ಎಂದರು.
ಮಲ್ಲಿಕಾರ್ಜುನ ಖರ್ಗೆ ಪತ್ರಿಕಾಗೋಷ್ಠಿ ಹಿನ್ನಲೆಯಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್ ಜೊತೆ ಕೆಪಿಸಿಸಿ ಕಚೇರಿಗೆ ತೆರಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅವರು ಪಾಲ್ಗೊಳ್ಳಲಿದ್ದು, ಕಾಂಗ್ರೆಸ್ ಸೇರುವ ಕುರಿತು ಅಧದಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳಲು ಬಿಜೆಪಿ ನಾಯಕರು ಭಾನುವಾರವೂ ಪ್ರಯತ್ನ ನಡೆಸಿದರು. ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಿಜೆಪಿ ಕಚೇರಿಯಲ್ಲಿ ಭಾನುವಾರ ತಡರಾತ್ರಿ ತನಕ ಸಭೆ ನಡೆಸಿದರು. ಅವರು ಬಿಜೆಪಿ ಬಿಟ್ಟರೆ ಆಗುವ ಪರಿಣಾಮಗಳ ಕುರಿತು ಚರ್ಚೆ ನಡೆಸಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್ ಜೊತೆಗೆ ಜಗದೀಶ್ ಶೆಟ್ಟರ್ ಕೆಪಿಸಿಸಿ ಕಚೇರಿಗೆ ಆಗಮಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಕಚೇರಿಗೆ ಆಗಮಿಸುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಪತ್ರಿಕಾಗೋಷ್ಠಿ ಆರಂಭವಾಗುವ ನಿರೀಕ್ಷೆ ಇದೆ.












Click it and Unblock the Notifications