ಶಿವಮೊಗ್ಗ, ಚನ್ನಪಟ್ಟಣದಲ್ಲಿ ಮುಂದುವರೆದ ಐಟಿ ಕಾರ್ಯಾಚರಣೆ
ಶಿವಮೊಗ್ಗ, ಮಂಡ್ಯ ಮಾರ್ಚ್ 29: ಶಿವಮೊಗ್ಗ ಹಾಗೂ ಚನ್ನಪಟ್ಟಣದಲ್ಲಿ ಇಂದೂ ಕೂಡ ಐಟಿ ಕಾರ್ಯಾಚರಣೆ ಮುಂದುವರೆದಿದೆ.
ಗುರುವಾರ ಜೆಡಿಎಸ್ ಸಚಿವ ಸಿಎಸ್ ಪುಟ್ಟರಾಜು, ಎಚ್‌ಡಿ ರೇವಣ್ಣ, ಬಿಎಂ ಫಾರೂಕ್ ಇನ್ನಿತರೆ 10 ಪ್ರಭಾವಿಗಳ ಮನೆ, ಕಚೇರಿ ಮೇಲೆ ದಾಳಿ ನಡೆದಿತ್ತು. ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಆದಿಯಾಗಿ ಬೆಂಗಳೂರಿನ ಐಟಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.
ಚನ್ನರಾಯಪಟ್ಟಣದ 3 ಕಡೆ ಐಟಿ ದಾಳಿ ಮುಂದುವರಿದಿದ್ದು, ಸಚಿವ ಎಚ್.ಡಿ. ರೇವಣ್ಣನವರ ಆಪ್ತ ಗುತ್ತಿಗೆದಾರರ ಮನೆಯಲ್ಲಿ ಶೋಧ ನಡೆಸಲಾಗುತ್ತಿದೆ. ಅಶ್ವಥ್ ನಾರಾಯಣ ಗೌಡ, ನಾರಾಯಣ ರೆಡ್ಡಿ, ರಾಯಿಗೌಡರ ಮಗ ತಿಮ್ಮೇಗೌಡರ ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ನಿನ್ನೆ ಬೆಳಗ್ಗೆ 5 ಗಂಟೆಯಿಂದ ಪರಿಶೀಲನೆ ನಡೆಸಲಾಗುತ್ತಿದೆ.

ಇಂದು ಕೂಡ ಬೆಂಗಳೂರು, ಹಾಸನ, ಮೈಸೂರು, ಮಂಡ್ಯದಲ್ಲಿ ಪರಿಶೀಲನೆ ನಡೆಸಲಾಗುವುದು. ಸಿಎಂ ಆಪ್ತ ಉದ್ಯಮಿಗಳು, ಗುತ್ತಿಗೆದಾರರ ಮೇಲೆ ಐಟಿ ದಾಳಿ ನಡೆಸಿದಾಗ ಚಿನ್ನಾಭರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಅಕ್ಕಸಾಲಿಗರಿಂದ ಆಭರಣಗಳ ತೂಕ ಮಾಡಿಸಿದ್ದಾರೆ. ಅಲ್ಲದೆ, ದಾಳಿ ವೇಳೆ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿದ್ದು, ಗುತ್ತಿಗೆದಾರರ ಅಕೌಂಟ್ಗೆ ರಾಜ್ಯ ಸರ್ಕಾರದ ಹಣ ರವಾನೆಯಾಗಿರುವುದು ಕಂಡುಬಂದಿದೆ.
ಶಿವಮೊಗ್ಗದಲ್ಲಿ ತಡರಾತ್ರಿವರೆಗೂ ಐಟಿ ದಾಳಿ ಮುಂದುವರಿದಿದೆ. ಶರಾವತಿ ನಗರದಲ್ಲಿರುವ ಶ್ರುತಿ ಮೋಟಾರ್ಸ್ ಮಾಲೀಕ ಡಿ.ಟಿ. ಪರಮೇಶ್ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗಿದ್ದು, ಬೆಳಗಿನ ಜಾವ 3 ಗಂಟೆಯವರೆಗೆ ಪರಿಶೀಲನೆ ನಡೆಸಲಾಗಿದೆ. ವಾಹನಗಳ ಮಾರಾಟಕ್ಕೆ ಸಂಬಂಧಪಟ್ಟ ದಾಖಲೆಗಳ ಪರಿಶೀಲನೆ ಮಾಡಲಾಗಿದೆ. ಮಾಜಿ ಪ್ರಧಾನಿ ದೇವೇಗೌಡ ಕುಟುಂಬಕ್ಕೆ ದೂರದ ಸಂಬಂಧಿ ಪರಮೇಶ್ವರ್ ಎನ್ನಲಾಗುತ್ತಿದೆ.












Click it and Unblock the Notifications