ಕಾಂಗ್ರೆಸ್ ಶಾಸಕನ ಮನೆಮೇಲೆ ದಾಳಿ, ಅಪಾರ ಧನಕನಕ ಪತ್ತೆ

Written By: Ramesh
Subscribe to Oneindia Kannada

ಬೆಂಗಳೂರು, ಫೆಬ್ರವರಿ. 12 : ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಂ.ಟಿ.ಬಿ. ನಾಗರಾಜ್‌ ಅವರ ಮನೆಯಲ್ಲಿ ಫೆಬ್ರವರಿ 09ರಂದು ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳ ದಾಳಿ ಸಂದರ್ಭದಲ್ಲಿ ಬರೋಬ್ಬರಿ 10 ಕೆ.ಜಿ ಚಿನ್ನ ಮತ್ತು ದಾಖಲೆಗಳಿಲ್ಲದ 120 ಕೋಟಿ ರು. ಹಣ ಪತ್ತೆಯಾಗಿದೆ.

ಮುಖ್ಯಮಂತ್ರಿ ಆಪ್ತವಲಯದಲ್ಲಿ ನಾಗರಾಜ್‌ ಗುರುತಿಸಿಕೊಂಡಿದ್ದು, ಬೆಂಗಳೂರಿನ ಮಹದೇವಪುರದ ಗರುಡಾಚಾರ್ ಪಾಳ್ಯದಲ್ಲಿರುವ ಮನೆ ಮೇಲೆ ಫೆಬ್ರವರಿ 9ರಂದು ಐ.ಟಿ ಅಧಿಕಾರಿಗಳು ದಾಳಿ ನಡೆಸಿದ್ದರು. [ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು ಮನೆ ಮೇಲೆ ಐಟಿದಾಳಿ]

ನಾಗರಾಜ್‌ ಅವರ ಒಡೆತನದಲ್ಲಿರುವ 3,500 ಆಸ್ತಿಗಳ ದಾಖಲೆ ಪತ್ರಗಳೂ ಪತ್ತೆಯಾಗಿವೆ. ಈ ಎಲ್ಲ ದಾಖಲೆಗಳು ಸಿಕ್ಕಿದ್ದು ಸುಮಾರು 560 ಎಕರೆ ಜಮೀನು ಇರುವುದು ಬೆಳಕಿಗೆ ಬಂದಿದೆ. ಅಲ್ಲದೆ 1.1 ಕೋಟಿ ರು. ಹೊಸ ನೋಟುಗಳು ಪತ್ತೆಯಾಗಿವೆ.

IT detects huge wealth in Hoskote Congress MLA MTB Nagaraj's house

ಆಸ್ತಿ ಮಾಲೀಕತ್ವ ಮತ್ತು ಬಂಡವಾಳ ಹೂಡಿಕೆಗೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನು ದಾಳಿ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಅವುಗಳ ಪರಿಶೀಲನೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

ನಾಗರಾಜ್‌ ಮತ್ತು ಅವರ ಕುಟುಂಬದ ಸದಸ್ಯರು 120 ಕೋಟಿಗೂ ಅಧಿಕ ಆಸ್ತಿ ಮೌಲ್ಯ ಹೊಂದಿದ್ದಾರೆ ಎಂದು ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಆಸ್ಪತ್ರೆ, ವಾಸದ ಮನೆ ಮೇಲೆ ಭಾರಿ ಮೊತ್ತದ ಹಣ ಹೂಡಿಕೆ ಮಾಡಿರುವ ಅವರು, ತೆರಿಗೆ ತಪ್ಪಿಸುವ ಉದ್ದೇಶದಿಂದ ಯಾವುದೇ ಭದ್ರತೆ ಇಲ್ಲದ ನಕಲಿ ಸಾಲ ಪತ್ರ ಸೃಷ್ಟಿಸಿರುವುದು ಗೊತ್ತಾಗಿದೆ.

ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಸೇರಿದಂತೆ ಆಸ್ತಿ ವ್ಯವಹಾರದಲ್ಲಿ ನಾಗರಾಜ್‌ ಅವರು ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿದ್ದಾರೆ.

ಅಲ್ಲದೆ, ವಿವಿಧ ಭೂ ಮಾಲೀಕರು 70 ಕೋಟಿಗೂ ಹೆಚ್ಚು ಹಣ ಮರು ಪಾವತಿಸಿರುವ ದಾಖಲೆಗಳೂ ಮನೆಯಲ್ಲಿ ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ನಾಗರಾಜ್‌ ಅವರು ವಿಶೇಷ ಆರ್ಥಿಕ ವಲಯ (ಎಸ್‌ಇಝೆಡ್) ಸ್ಥಾಪಿಸುವ ಉದ್ದೇಶದಿಂದ ಹಲವು ವರ್ಷಗಳ ಹಿಂದೆ 125 ಕೋಟಿಗೂ ಹೆಚ್ಚು ಮೊತ್ತಕ್ಕೆ ತೆರಿಗೆ ವಿನಾಯಿತಿ ಪಡೆದಿರುವ ದಾಖಲೆ ಪತ್ತೆಯಾಗಿದೆ.

ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇನ್ನು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Over 3,500 property documents of over 560 acres, undisclosed income of Rs 120 crore and seizure of Rs 1.1 crore in new currencies found in three-day search at the residential premises of Congress MLA from Hoskote,MTB Nagaraju, by income tax department.
Please Wait while comments are loading...