ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಟ್ಟ ಶ್ರೀನಿವಾಸಗೌಡ: ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಜೆಡಿಎಸ್ ತಂತ್ರ

By ಲವ ಕುಮಾರ್‌
|
Google Oneindia Kannada News

ಬೆಂಗಳೂರು, ಜನವರಿ 12: ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ, ಅಹಿಂದ ನಾಯಕ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ ಆರಂಭವಾಗಿದೆ. ಎಲ್ಲರ ಚಿತ್ತ ಈಗ ಕೋಲಾರದತ್ತ ನೆಟ್ಟಿದೆ.

ವಿಧಾನಸಭಾ ಚುನಾವಣೆಗೆ ಇನ್ನು ಮೂರು ತಿಂಗಳಷ್ಟೇ ಬಾಕಿಯಿದ್ದು, ರಾಜಕೀಯ ಜಿದ್ದಾಜಿದ್ದಿ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಇದು ತಾರಕಕ್ಕೆ ಹೋಗಲಿದೆ. ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಿಸಿದ್ದರೆ, ಮತ್ತೆ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಾಗಿದೆ. ಕಾಂಗ್ರೆಸ್‌ನಲ್ಲಿ ಕೆಲವೊಂದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಬಹುತೇಕ ದೃಢವಾಗಿರುವುದರಿಂದ ಅವರೆಲ್ಲರೂ ಅಖಾಡಕ್ಕಿಳಿದಿದ್ದಾರೆ. ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿ ನಿರತವಾಗಿದೆ. ಹೀಗೆ ಪ್ರಮುಖ ಮೂರು ರಾಜಕೀಯ ಪಕ್ಷಗಳು ಗೆಲುವಿಗೆ ಬೇಕಾದ ತಂತ್ರಗಳನ್ನು ಆರಂಭಿಸಿವೆ.

ಈ ಮೂರು ಪಕ್ಷಗಳು ಚುನಾವಣೆಯಲ್ಲಿ ನಾವೇ ಗೆದ್ದು ಅಧಿಕಾರ ಹಿಡಿಯುವ ಕನಸು ಕಾಣುತ್ತಿವೆ. ಹೀಗಾಗಿ ಭರ್ಜರಿ ತಯಾರಿ ಮಾಡಿಕೊಂಡು ಅಖಾಡಕ್ಕಿಳಿಯುತ್ತಿವೆ. ವಿರೋಧ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಆಡಳಿತರೂಢ ಬಿಜೆಪಿಯನ್ನು ಬಗ್ಗು ಬಡಿಯಲು ಹಲವು ಅಸ್ತ್ರಗಳು ಸಿಗುತ್ತಿದ್ದರೂ ಅದನ್ನು ಬಳಕೆ ಮಾಡಿ ಯಶಸ್ವಿಯಾಗುವ ವೇಳೆಗೆ ಬಿಜೆಪಿ ಪ್ರತಿತಂತ್ರ ರೂಪಿಸುತ್ತಿರುವುದು ಇದೀಗ ಗೋಚರಿಸುತ್ತಿದೆ. ರಾಜಕೀಯವಾಗಿ ಇನ್ನೊಂದು ತಿಂಗಳಲ್ಲಿ ಹಲವಷ್ಟು ಬೆಳವಣಿಗೆಗಳು ನಡೆಯುವ ಸಾಧ್ಯತೆಗಳು ಕಂಡು ಬರುತ್ತಿವೆ.

ಸಿದ್ದರಾಮಯ್ಯರ ವಿರುದ್ಧ ತಂತ್ರಗಳು ಶುರು

ಇನ್ನು ಈ ಬಾರಿ ಏನೇ ಆಗಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲೇ ಬೇಕೆಂಬ ಹಠಕ್ಕೆ ಬಿಜೆಪಿ ಮತ್ತು ಜೆಡಿಎಸ್ ಬಿದ್ದಂತಿದೆ. ಸಿದ್ದರಾಮಯ್ಯರವರನ್ನು ಹಿಂದೂ ವಿರೋಧಿಯಂತೆ ಬಿಂಬಿಸುವ ಎಲ್ಲ ಕಾರ್ಯಗಳನ್ನು ಬಿಜೆಪಿ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈಗಾಗಲೇ ಇದನ್ನು ಬಿಜೆಪಿ ನಾಯಕರು ಬಹಿರಂಗವಾಗಿಯೇ ಹೇಳುತ್ತಿರುವುದು ಮಾತ್ರವಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ.

ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿ ಐದು ವರ್ಷಗಳ ಕಾಲ ಜೆಡಿಎಸ್ ನಲ್ಲಿದ್ದು, ಇದೀಗ ಕಾಂಗ್ರೆಸ್ ಏಳಿಗೆ ಬೆಳೆಸಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ತ್ಯಾಗ ಮಾಡಿರುವ ಶಾಸಕ ಶ್ರೀನಿವಾಸಗೌಡ ವಿರುದ್ಧ ಜೆಡಿಎಸ್ ನಾಯಕರು ಕುದಿಯುತ್ತಿದ್ದಾರೆ. ಇದರ ಸೇಡನ್ನು ತೀರಿಸಿಕೊಳ್ಳಬೇಕಾದರೆ ಸಿದ್ದರಾಮಯ್ಯ ಅವರು ಸೋಲು ಕಾಣಬೇಕು ಎಂಬುದು ಅವರ ಲೆಕ್ಕಾಚಾರವಾಗಿದೆ. ಈಗಾಗಲೇ ಶಾಸಕ ಶ್ರೀನಿವಾಸಗೌಡ ಕ್ಷೇತ್ರವನ್ನು ಬಿಟ್ಟುಕೊಟ್ಟು ಮುಂದೆ ಸಿದ್ದರಾಮಯ್ಯ ಗೆದ್ದರೆ ಎಂಎಲ್ಸಿಯಾಗುವ ಅಷ್ಟೇ ಅಲ್ಲದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ತಾವು ಸಚಿವರಾಗುವ ಒಪ್ಪಂದ ಮಾಡಿಕೊಂಡಿರುವ ಬಗೆಗಿನ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಕಲ್ಲಿಗೆ ಎರಡು ಹಕ್ಕಿಯ ಹೊಡೆಯಲು ಜೆಡಿಎಸ್‌ ತಂತ್ರ

ಕಲ್ಲಿಗೆ ಎರಡು ಹಕ್ಕಿಯ ಹೊಡೆಯಲು ಜೆಡಿಎಸ್‌ ತಂತ್ರ

ಇದು ಸತ್ಯವೋ? ಸುಳ್ಳೋ ಗೊತ್ತಿಲ್ಲ. ಆದರೆ ವಿಷಯ ಮಾತ್ರ ಕಾಡ್ಗಿಚ್ಚಿನಂತೆ ರಾಜಕೀಯ ವಲಯದಲ್ಲಿ ಹರಡುತ್ತಿರುವುದು ಮಾತ್ರ ಸತ್ಯ. ಬಿಜೆಪಿ ಇದನ್ನು ಇನ್ನಷ್ಟು ಪ್ರಚಾರ ಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಈ ವಿಷಯ ಬಿಜೆಪಿಗಿಂತ ಹೆಚ್ಚಾಗಿ ಜೆಡಿಎಸ್ ನಾಯಕರ ನಿದ್ದೆಗೆಡಿಸಿದೆ. ಕಾರಣ ತಮ್ಮದೇ ಪಕ್ಷದ ಒಬ್ಬ ಶಾಸಕ ಮತ್ತೊಂದು ಪಕ್ಷದ ನಾಯಕನಿಗೆ ಮಣೆ ಹಾಕಿ ಪಕ್ಷ ಗೆಲ್ಲಬಹುದಾದ ಕ್ಷೇತ್ರವನ್ನು ಕಳೆದುಕೊಳ್ಳುವಂತೆ ಅಥವಾ ತೀವ್ರ ಪೈಪೋಟಿ ಏರ್ಪಡುವಂತೆ ಮಾಡಿರುವುದು ದ್ರೋಹದಂತೆ ಕಾಣಿಸುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಸೋಲಿಸಿದರೆ ಒಂದೇ ಕಲ್ಲಿಗೆ ಎರಡು ಹಕ್ಕಿಯನ್ನು ಹೊಡೆಯುವ ತಂತ್ರಕ್ಕೆ ಜೆಡಿಎಸ್ ನಾಯಕರು ಇಳಿದರೂ ಅಚ್ಚರಿಪಡಬೇಕಾಗಿಲ್ಲ.

ಸಿದ್ದರಾಮಯ್ಯ ಸೋಲಿಸಲು ಬಿಜೆಪಿ ಜೆಡಿಎಸ್‌ ತಂತ್ರವೇನು..?

ಸಿದ್ದರಾಮಯ್ಯ ಸೋಲಿಸಲು ಬಿಜೆಪಿ ಜೆಡಿಎಸ್‌ ತಂತ್ರವೇನು..?

ಸಿದ್ದರಾಮಯ್ಯ ಪ್ರಭಾವಿ ನಾಯಕರಾಗಿದ್ದು, ಎಲ್ಲಿ ನಿಂತರೂ ಗೆಲ್ಲುವ ಶಕ್ತಿ ಅವರಿಗೆ ಇದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅವರು ಮೈತುಂಬಾ ಶತ್ರುಗಳು ಮಾತ್ರವಲ್ಲದೆ ಹಿತಶತ್ರುಗಳನ್ನು ಕೂಡ ಎಳೆದುಕೊಂಡಿರುವುದರಿಂದ ಅವರು ಕೋಲಾರದಲ್ಲಿ ಗೆಲುವಿಗಾಗಿ ಶ್ರಮಪಡಲೇ ಬೇಕಾದ ಅಗತ್ಯತೆಯಿದೆ. ಸಿದ್ದರಾಮಯ್ಯ ಅವರು ಕೇವಲ ತಮ್ಮ ಕ್ಷೇತ್ರದಲ್ಲಿ ಅಡ್ಡಾಡಿಕೊಂಡು ಇರುವ ಪರಿಸ್ಥಿತಿ ಈಗ ರಾಜ್ಯದಲ್ಲಿಲ್ಲ. ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯದಾದ್ಯಂತ ಅಪಾರ ಬೆಂಬಲಿಗರನ್ನು ಹೊಂದಿ ಪ್ರಭಾವಿ ನಾಯಕರಾಗಿರುವುದರಿಂದ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಬೇಕಾಗಿದೆ. ಸಮಾವೇಶ, ಚುನಾವಣಾ ಪ್ರಚಾರಗಳನ್ನು ಕೈಗೊಳ್ಳಬೇಕಾಗಿದೆ. ಪಕ್ಷಕ್ಕಾಗಿ ಹೆಚ್ಚಿನ ಸಮಯ ಕೊಡಬೇಕಾಗಿರುವುದರಿಂದ ಕ್ಷೇತ್ರದತ್ತ ಹೆಚ್ಚಿನ ನಿಗಾ ವಹಿಸುವುದು ಕಷ್ಟವಾಗಬಹುದು. ಇದನ್ನು ಬಿಜೆಪಿ ಮತ್ತು ಜೆಡಿಎಸ್ ಬಳಸಿಕೊಳ್ಳಬಹುದು.

ಕೋಲಾರ ಸ್ಪರ್ಧೆ ಎನ್ನುವುದು ಕೇವಲ ಗಿಮಿಕ್

ಕೋಲಾರ ಸ್ಪರ್ಧೆ ಎನ್ನುವುದು ಕೇವಲ ಗಿಮಿಕ್

ಇಷ್ಟಕ್ಕೂ ಕೇವಲ ಘೋಷಣೆಯೇ ಅಂತಿಮವಾಗಲಾರದು. ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡುವ ವೇಳೆಗೆ ಬದಲಾವಣೆಯಾದರೂ ಅಚ್ಚರಿ ಪಡಬೇಕಾಗಿಲ್ಲ. ಆದರೆ ಸಿದ್ದರಾಮಯ್ಯ ಅವರು ಕೋಲಾರದಿಂದಲೇ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ ಬಳಿಕ ಹಿಂದೆ ಸರಿಯಲಾರರು ಎಂಬುದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿರುವ ಮಾತು. ಕೋಲಾರದಿಂದ ಸ್ಪರ್ಧೆ ಎನ್ನುವುದು ಕೇವಲ ಗಿಮಿಕ್ ಎಂದು ಹೇಳುವವರೂ ಇದ್ದಾರೆ. ಆದರೆ ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಅಭ್ಯರ್ಥಿಗಳ ಘೋಷಣೆ ಆಗುವ ತನಕ ಇದು ಸತ್ಯ ಅಥವಾ ಅದು ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ.

ಹೈವೋಲ್ಟೇಜ್ ಕ್ಷೇತ್ರವಾದ ಕೋಲಾರ

ಹೈವೋಲ್ಟೇಜ್ ಕ್ಷೇತ್ರವಾದ ಕೋಲಾರ

ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡುತ್ತಾರೆ ಎಂಬ ಒಂದೇ ಕಾರಣಕ್ಕೆ ಗಮನಸೆಳೆಯುವುದರೊಂದಿಗೆ ರಾಜ್ಯರಾಜಕೀಯದಲ್ಲಿ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಹೈವೋಲ್ಟೇಜ್ ಕ್ಷೇತ್ರವಾಗಿಯೂ ಬದಲಾಗಿರುವುದರಿಂದ ಜನ ಅತ್ತ ದೃಷ್ಟಿ ನೆಟ್ಟಿದ್ದಾರೆ. ಚುನಾವಣೆ ಹತ್ತಿರವಾದಂತೆಲ್ಲ ಇನ್ನಷ್ಟು ರಾಜಕೀಯ ಬೆಳವಣಿಗೆಗಳು, ತಂತ್ರಪ್ರತಿತಂತ್ರಗಳು ನಡೆಯಲಿದ್ದು, ಕಾದು ನೋಡುವುದು ಅನಿವಾರ್ಯವಾಗಿದೆ.

English summary
karnataka assembly elections 2023: Siddaramaiah decide to contestant in Kolar constituency. JDS and BJP Plan to defeat Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X