ಎಚ್ಡಿಕೆ ಪ್ರಮಾಣವಚನಕ್ಕೆ ಮುನ್ನ ಇದೇನು ಬಿಎಸ್ವೈ, ಸಿದ್ದರಾಮಯ್ಯ ಬಗ್ಗೆ ಹೇಳಿದ್ದು!
Recommended Video

ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರುತ್ತಿರುವ ಕೆಲವೇ ಕೆಲವು ಗಂಟೆ ಇರುವಾಗ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ನಿಯೋಜಿತ ಸಿಎಂ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ (ಮೇ 23) ಬೆಂಗಳೂರಿನ ಮೌರ್ಯ ವೃತ್ತದ ಬಳಿ ಕಾಂಗ್ರೆಸ್-ಜೆಡಿಎಸ್ ನಡುವಿನ ಮೈತ್ರಿ ಸರ್ಕಾರದ ವಿರುದ್ಧ ಕರಾಳ ದಿನದ ಪ್ರತಿಭಟನೆ ನಡೆಸಿ ಮಾತನಾಡುತ್ತಿದ್ದ ಯಡಿಯೂರಪ್ಪ, ರೈತರ ಸಾಲ ಮನ್ನಾ ಮಾಡದಿದ್ದರೆ ರಾಜ್ಯ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯ ವೇಳೆ ಯಡಿಯೂರಪ್ಪ ನೀಡಿದ ಮತ್ತೊಂದು ಹೇಳಿಕೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಯಡಿಯೂರಪ್ಪ ಮೃಧು ಧೋರಣೆ ತಾಳಲಾರಂಭಿಸಿದ್ದಾರಾ ಎನ್ನುವ ಅನುಮಾನ ಕಾಡುವಂತಿದೆ.
ಚುನಾವಣಾ ಫಲಿತಾಂಶ ಹೊರಬಿದ್ದ ನಂತರ, ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯನವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎನ್ನುವ ಹೇಳಿಕೆಯನ್ನು ಯಡಿಯೂರಪ್ಪ ನೀಡಿರುವುದು, ಹಲವು ಅಚ್ಚರಿಗಳಿಗೆ ಎಡೆಮಾಡಿಕೊಟ್ಟಿದೆ.
ಇದರ ಜೊತೆಗೆ, ಕಾಂಗ್ರೆಸ್ ಶಾಸಕರಿಗೂ ಬಿಜೆಪಿ ಸೇರುವಂತೆ ಯಡಿಯೂರಪ್ಪ ಆಹ್ವಾನ ನೀಡಿರುವುದು ಇದೇನು ಹೊಸ ಗೇಂ ಪ್ಲಾನ್ ಇರಬಹುದೇ ಎಂದು ಅನುಮಾನಿಸುವಂತಾಗಿದೆ. ಪ್ರತಿಭಟನೆಯ ವೇಳೆ, ಬಿಜೆಪಿಯ ಹಲವಾರು ಹಿರಿಯ ಮುಖಂಡರು ಪಾಲ್ಗೊಂಡಿದ್ದರು. ಯಡಿಯೂರಪ್ಪ ಹೇಳಿದ್ದೇನು?

24ಗಂಟೆಯಲ್ಲಿ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದ ಎಚ್ಡಿಕೆ
ಚುನಾವಣಾ ಪ್ರಚಾರದ ವೇಳೆ, ನಾನು ಮುಖ್ಯಮಂತ್ರಿಯಾದರೆ, 24ಗಂಟೆಯಲ್ಲಿ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದರು. ಈಗ ದೇವಾಲಯಕ್ಕೆ ಭೇಟಿ ನೀಡುವ ವೇಳೆ, ಇದಕ್ಕೆ ತದ್ವಿರುದ್ದವಾದ ಹೇಳಿಕೆಯನ್ನು ಕುಮಾರಸ್ವಾಮಿ ನೀಡುತ್ತಿದ್ದಾರೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ, ಕುಮಾರಸ್ವಾಮಿಯವರೇ ಎಚ್ಚರ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯನವರಿಗೆ ಬೆಲೆಕೊಡುತ್ತಿಲ್ಲ
ಪ್ರತಿಭಟನೆಯ ವೇಳೆ ಮಾತನಾಡುತ್ತಿದ್ದ ಯಡಿಯೂರಪ್ಪ, ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೇ ಕಾಂಗ್ರೆಸ್ ಹೈಕಮಾಂಡ್ ನಿಲುವು ಬದಲಾಗಿದೆ. "ಸೋನಿಯಾ ಗಾಂಧಿವರೇ, ಫಲಿತಾಂಶ ಬಂದ ನಂತರ ನೀವು ಸಿದ್ದರಾಮಯ್ಯನವರಿಗೆ ಬೆಲೆಕೊಡುತ್ತಿಲ್ಲ, ಕುರುಬ ಸಮುದಾಯ ಇದರಿಂದ ಎಷ್ಟು ನೋವು ಅನುಭವಿಸುತ್ತಿದೆ ಎನ್ನುವುದು ನಿಮಗೆ ಅರಿತಿದೆಯೇ" ಎಂದು ಯಡಿಯೂರಪ್ಪ ಹೇಳಿದ್ದಾರೆ.

ಅಪವಿತ್ರ ಮೈತ್ರಿಗೆ ಮುಂದಾದವರಿಗೆ ಸರಿಯಾದ ಪಾಠ ಕಲಿಸೋಣ
ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಅಸಮಾಧಾನ ಹೊಂದಿದ್ದಾರೆ ಎನ್ನುವ ಮಾಹಿತಿ ನಮಗಿದೆ. ಎಲ್ಲಾ ಶಾಸಕರಿಗೆ ಬಿಜೆಪಿಗೆ ಸೇರುವಂತೆ ನಾನು ಆಹ್ವಾನ ನೀಡುತ್ತಿದ್ದೇನೆ. ಬನ್ನಿ ನಮ್ಮ ಪಕ್ಷಕ್ಕೆ, ಹೊಸ ಶಕ್ತಿಯೊಂದಿಗೆ ರಾಜ್ಯ ಕಟ್ಟೋಣ. ಅಪವಿತ್ರ ಮೈತ್ರಿಗೆ ಮುಂದಾದವರಿಗೆ ಸರಿಯಾದ ಪಾಠ ಕಲಿಸೋಣ - ಯಡಿಯೂರಪ್ಪ.

ಅಧಿಕಾರಕ್ಕಾಗಿ ಕೀಳು ರಾಜಕಾರಣ
ನಿನ್ನೆಮೊನ್ನೆಯವರೆಗೂ ಬದ್ಧವೈರಿಗಳಂತಿದ್ದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಇಂದು ಅಧಿಕಾರಕ್ಕಾಗಿ ಕೀಳು ರಾಜಕಾರಣ ಮಾಡುತ್ತಿವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅನುಕೂಲಸಿಂಧು ರಾಜಕಾರಣ ಮಾಡುತ್ತಿರುವ ಈ ಎರಡೂ ಪಕ್ಷಗಳ ಬಗ್ಗೆ ಜನರು ಆಕ್ರೋಶಗೊಂಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆದ್ದು ಪ್ರಧಾನಿ ಮೋದಿಯವರ ಕೈ ಬಲಪಡಿಸುವುದಾಗಿ ಯಡಿಯೂರಪ್ಪ ಹೇಳಿದರು.

ರಾಜ್ಯ ಬಂದ್ ಮಾಡಬೇಕಾಗುತ್ತದೆ
ಬಿಜೆಪಿ ಮುಖಂಡರಾದ ಆರ್. ಅಶೋಕ್, ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ತಾರಾ ಅನೂರಾಧ, ಅರವಿಂದ ಲಿಂಬಾವಳಿ, ಎನ್.ರವಿಕುಮಾರ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇನ್ನೊಂದು ವಾರದ ಗಡುವು ನೀಡುತ್ತೇವೆ, ಕುಮಾರಸ್ವಾಮಿಯವರು ಇನ್ನೊಂದು ವಾರದಲ್ಲಿ ಸಾಲಮನ್ನಾ ಮಾಡದೇ ಇದ್ದಲ್ಲಿ, ರೈತರೊಂದಿಗೆ ಬೀದಿಗಿಳಿಯಬೇಕಾಗುತ್ತದೆ, ರಾಜ್ಯ ಬಂದ್ ಮಾಡಬೇಕಾಗುತ್ತದೆ ಎಂದು ಬಿಎಸ್ವೈ ಎಚ್ಚರಿಕೆ ನೀಡಿದರು.












Click it and Unblock the Notifications