ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಅಮಿತ್ ಶಾ ರಣತಂತ್ರ 'ಉತ್ತರ'ವೇ?

By ಬಿಎಂ ಲವಕುಮಾರ್
|
Google Oneindia Kannada News

ಮೈಸೂರು, ಸೆಪ್ಟೆಂಬರ್ 20: ಮುಂದಿನ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗ ಈಗಿನಿಂದಲೇ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಚಟುವಟಿಕೆಯನ್ನು ಆರಂಭಿಸಿವೆ. ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಹೋಲಿಸಿದರೆ ಹೆಚ್ಚಿನ ರಣೋತ್ಸಾಹ ಇರುವುದು ಬಿಜೆಪಿಯ ನಾಯಕರಲ್ಲಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಇದೆ; ಜತೆಗೆ ಬಿಜೆಪಿಗೂ ಇರುವ ಗಟ್ಟಿ ನೆಲೆ ಕರ್ನಾಟಕ ಮಾತ್ರ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಹೇಗಾದರೂ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಎಂಬುದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‍ ಶಾ ಅವರ ಉದ್ದೇಶವಾಗಿದೆ. ಹೀಗಾಗಿಯೇ ಅವರು ಕರ್ನಾಟಕದತ್ತ ಹೆಚ್ಚಿನ ನಿಗಾ ವಹಿಸಿದ್ದಾರೆ. ಅಷ್ಟೇ ಅಲ್ಲದೆ ಹಲವು ತಂತ್ರಗಳನ್ನೂ ಹೆಣೆಯುತ್ತಿದ್ದಾರೆ.

ಉತ್ತರ ಕರ್ನಾಟಕದಿಂದ ಬಿಎಸ್‌ವೈ ಸ್ಪರ್ಧೆ, ಓದುಗರ ಅಭಿಮತಉತ್ತರ ಕರ್ನಾಟಕದಿಂದ ಬಿಎಸ್‌ವೈ ಸ್ಪರ್ಧೆ, ಓದುಗರ ಅಭಿಮತ

ಈಗ ಇರುವ ಪ್ರಶ್ನೆ ಚುನಾವಣಾ ಚಾಣಾಕ್ಯ ಅಮಿತ್ ಶಾರ ತಂತ್ರಗಳು ಕರ್ನಾಟಕದಲ್ಲಿ ಯಶಸ್ವಿಯಾಗುತ್ತಾ ಎಂಬುದು.

ಕ್ಷೇತ್ರ ಬದಲಾವಣೆ ತಂತ್ರ

ಕ್ಷೇತ್ರ ಬದಲಾವಣೆ ತಂತ್ರ

ಈಗಾಗಲೇ ಶಿಕಾರಿಪುರ ಬಿಟ್ಟು ಹೊರ ನಡೆಯುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಸೂಚನೆ ನೀಡಲಾಗಿದೆ. ಅವರೂ ವಿಜಯಪುರ, ಬಾಗಲಕೋಟೆಯಲ್ಲಿ ಕ್ಷೇತ್ರಗಳನ್ನು ತಲಾಷ್ ಮಾಡುತ್ತಿದ್ದಾರೆ.

2014ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಇದೇ ರೀತಿ ಗುಜರಾತಿನ ವಡೋದರವಲ್ಲದೆ ಉತ್ತರ ಪ್ರದೇಶದ ವಾರಣಾಸಿಯಿಂದಲೂ ಸ್ಪರ್ಧಿಸಿದ್ದರು. ಇದರಿಂದ ಉತ್ತರ ಪ್ರದೇಶದಲ್ಲಿ ಮೋದಿ ವರ್ಚಸ್ಸು ಬಲು ಬೇಗ ಹರಡಿ 80ರಲ್ಲಿ 71 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಳ್ಳಲು ಸಹಾಯಕವಾಗಿತ್ತು.

ಇದೇ ರೀತಿ ಯಡಿಯೂರಪ್ಪ ಕೂಡಾ ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸಿದರೆ ಬಿಜೆಪಿಗೆ ಗೆಲುವು ದಕ್ಕಬಹುದು ಎಂಬುದು ಅಮಿತ್ ಶಾ ತಂತ್ರವಾಗಿದೆ.

ಕ್ಷೇತ್ರ ಬದಲಾಯಿಸಲಿದ್ದಾರೆ ಡಜನ್ ಗಟ್ಟಲೆ ನಾಯಕರು?

ಕ್ಷೇತ್ರ ಬದಲಾಯಿಸಲಿದ್ದಾರೆ ಡಜನ್ ಗಟ್ಟಲೆ ನಾಯಕರು?

ಯಡಿಯೂರಪ್ಪ ಮಾತ್ರವಲ್ಲ ಇನ್ನೂ ಹಲವು ಬಿಜೆಪಿ ನಾಯಕರಿಗೆ ಕ್ಷೇತ್ರ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಕೆಲವೇ ದಿನಗಳಲ್ಲಿ ಸೂಚನೆ ನೀಡಲಿದೆ ಎನ್ನಲಾಗುತ್ತಿದೆ.

ಹಿರಿಯ, ಒಂದಷ್ಟು ಪ್ರಭಾವಿ, ಪರಿಚಿತ ಮುಖಗಳನ್ನು ಬಿಜೆಪಿ ಪ್ರಾಬಲ್ಯವಿಲ್ಲದ ಕಡೆ ಅಖಾಡಕ್ಕಿಳಿಸಿದರೆ ಅವರವರ ಸ್ವ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುತ್ತದೆ; ಜತೆಗೊಂದು ಕ್ಷೇತ್ರ ಹೆಚ್ಚುವರಿಯಾಗಿ ಬುಟ್ಟಿಗೆ ಬೀಳುತ್ತದೆ. ಇದಲ್ಲದೆ ಹೊಸ ಕ್ಷೇತ್ರಗಳ ಸಮೀಪದ ಕ್ಷೇತ್ರಗಳಲ್ಲೂ ಪಕ್ಷಕ್ಕೆ ಲಾಭವಾಗಬಹುದು ಎಂಬುದು ಈ ತಂತ್ರದ ಹಿಂದಿನ ದೂರಾಲೋಚನೆ.

ಜಾತಿ ವಾರು ಮತಗಳನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರ ಬದಲಾವಣೆ ಮಾಡಿಸಿದರೆ ಪಕ್ಷಕ್ಕೆ ಲಾಭ ಕಟ್ಟಿಟ್ಟ ಬುತ್ತಿ ಎಂದು ಕೇಂದ್ರ ನಾಯಕರು ಅಂದುಕೊಂಡಂತೆ ಕಾಣಿಸುತ್ತಿದೆ.

ಅಶೋಕ್, ಶೆಟ್ಟರ್, ಈಶ್ವರಪ್ಪ, ರವಿ, ಸೋಮಣ್ಣ ಕ್ಷೇತ್ರ ಚೇಂಜ್?

ಅಶೋಕ್, ಶೆಟ್ಟರ್, ಈಶ್ವರಪ್ಪ, ರವಿ, ಸೋಮಣ್ಣ ಕ್ಷೇತ್ರ ಚೇಂಜ್?

ತಮ್ಮ ತಮ್ಮ ಸಮುದಾಯದ ನಡುವೆ ಗುರುತಿಸಿಕೊಂಡಿರುವ ಪ್ರಬಲ ಜಾತಿಗಳ ನಾಯಕರಿಗೆ ಕ್ಷೇತ್ರ ಬದಲಾವಣೆಗೆ ಸೂಚಿಸುತ್ತಾರೆ ಎನ್ನಲಾಗಿದೆ. ಲಿಂಗಾಯತರು ಹೆಚ್ಚಾಗಿರುವ ಗುಂಡ್ಲುಪೇಟೆಗೆ ವಿ. ಸೋಮಣ್ಣ, ಕುರುಬರು ಹೆಚ್ಚಾಗಿರುವ ಕೊಪ್ಪಳದತ್ತ ಈಶ್ವರಪ್ಪ, ತಮ್ಮ ಪ್ರಾಬಲ್ಯವಿರುವ ಗದಗಕ್ಕೆ ಜಗದೀಶ್ ಶೆಟ್ಟರ್ ರನ್ನು ಕಳುಹಿಸಲು ಹೈಕಮಾಂಡ್ ಚಿಂತನೆ ನಡೆಸಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಇನ್ನು ಒಕ್ಕಲಿಗರು ಹೆಚ್ಚಾಗಿರುವ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯದ ಯಾವುದಾದರೂ ಕ್ಷೇತ್ರದಿಂದ ಸಿಟಿ ರವಿ ಹಾಗೂ ಆರ್ ಅಶೋಕರ್ ನ್ನು ಕಣಕ್ಕಿಳಿಸಲು ಕೇಂದ್ರ ನಾಯಕರು ಉತ್ಸುಕರಾಗಿದ್ದಾರಂತೆ.

ತಂತ್ರ ಉಲ್ಟಾ ಹೊಡೆಯುವ ಸಾಧ್ಯತೆಗಳೇ ಹೆಚ್ಚು

ತಂತ್ರ ಉಲ್ಟಾ ಹೊಡೆಯುವ ಸಾಧ್ಯತೆಗಳೇ ಹೆಚ್ಚು

ಬೇರೆ ಕ್ಷೇತ್ರಗಳಿಂದ ಅಗ್ರ ನಾಯಕರನ್ನು ಕಣಕ್ಕಿಳಿಸುವುದೇನೋ ಸರಿ. ಆದರೆ ಅವರೆಲ್ಲಾ ಬೇರೆ ಕ್ಷೇತ್ರಗಳಲ್ಲಿ ಗೆಲ್ಲುತ್ತಾರೋ ಎಂಬುದೇ ಪ್ರಶ್ನೆಯಾಗಿದೆ.

ಕಳೆದ ಚುನಾವಣೆಯಲ್ಲಿ ಕೆ.ಎಸ್ ಈಶ್ವರಪ್ಪ ಸ್ವ ಕ್ಷೇತ್ರ ಶಿವಮೊಗ್ಗ ನಗರ ಕ್ಷೇತ್ರದಲ್ಲೇ ಸೋಲು ಕಂಡಿದ್ದರು. ಇನ್ನು ಬೇರೆ ಕ್ಷೇತ್ರಗಳಲ್ಲಿ ಗೆಲ್ಲುವುದು ಅಷ್ಟರಲ್ಲೇ ಇದೆ. ಆರ್. ಅಶೋಕ್, ಸಿಟಿ ರವಿ ಮೊದಲಾದವರು ಸ್ವ ಕ್ಷೇತ್ರದಲ್ಲಿ ಘಟಾನುಘಟಿಗಳೇನೋ ಸರಿ; ಬೇರೆ ಕ್ಷೇತ್ರದಲ್ಲಿ ಗೆಲ್ಲುವ ತಾಕತ್ತು ಅವರಿಗೆದೆಯಾ ಎಂಬ ಅನುಮಾನಗಳಿವೆ.

ದಿವಂಗತ ಮಹದೇವ ಪ್ರಸಾದ್ ಕುಟುಂಬದ ಭದ್ರಕೋಟೆ ಗುಂಡ್ಲುಪೇಟೆಯಲ್ಲೂ ಸೋಮಣ್ಣ ಏಗುವುದು ಕಷ್ಟ. ಮೃದು ಧೋರಣೆಯ ಜಗದೀಶ್ ಶೆಟ್ಟರ್ ಗೆ ಕೂಡ ಇದು ಅನ್ವಯವಾಗುತ್ತದೆ.

ಉತ್ತರ ಪ್ರದೇಶ ತಂತ್ರ ಇಲ್ಲಿ ಕೈ ಹಿಡಿಯುತ್ತಾ?

ಉತ್ತರ ಪ್ರದೇಶ ತಂತ್ರ ಇಲ್ಲಿ ಕೈ ಹಿಡಿಯುತ್ತಾ?

ಉತ್ತರದ ರಾಜ್ಯಗಳಿಗೂ ದಕ್ಷಿಣ ಭಾರತದ ರಾಜ್ಯ ಕರ್ನಾಟಕದ ರಾಜಕೀಯಕ್ಕೂ ಬಲು ವ್ಯತ್ಯಾಸವಿದೆ. ಇದನ್ನು ಅಮಿತ್ ಶಾ ಅರ್ಥ ಮಾಡಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದರ ಹಿಂದೆ ಅಖಿಲೇಶ್ ಯಾದವ್ ಸರಕಾರದ ವೈಫಲ್ಯ, ಕೌಟುಂಬಿಕ ಜಗಳದ ಪಾತ್ರವೂ ದೊಡ್ಡದಿತ್ತು. ಸರಕಾರದ ವಿರುದ್ಧ ಜನ ದೊಡ್ಡ ಮಟ್ಟಕ್ಕೆ ನಿರಾಶರಾಗಿದ್ದರಲ್ಲದೆ, ಆಕ್ರೋಶವನ್ನೂ ಇಟ್ಟುಕೊಂಡಿದ್ದರು.

ಆದರೆ ಕರ್ನಾಟಕದ ಮಟ್ಟಿಗೆ ಪರಿಸ್ಥಿತಿ ಹಾಗಿಲ್ಲ. ಸಿದ್ದರಾಮಯ್ಯ ಸರಕಾರದ ವಿರುದ್ಧ ಅಪಸ್ವರಗಳು ಇರಬಹುದಾದರೂ ಅವೆಲ್ಲಾ ದೊಟ್ಟ ಮಟ್ಟದ ಆಕ್ರೋಶಗಳೇನಲ್ಲ. ಹೀಗಾಗಿ ಅದನ್ನೇ ನೆಚ್ಚಿಕೊಂಡು ಮತ ಸೆಳೆಯುತ್ತೇವೆ ಎಂಬ ತಂತ್ರ ಫಲಿಸಲಿಕ್ಕಿಲ್ಲ.

ಪುತ್ರರಿಗಿಲ್ಲ ಟಿಕೆಟ್?

ಪುತ್ರರಿಗಿಲ್ಲ ಟಿಕೆಟ್?

ರಾಜಕೀಯ ಮೂಲಗಳ ಪ್ರಕಾರ ಈ ಬಾರಿ ಪಕ್ಷದ ನಾಯಕರ ಮಕ್ಕಳಿಗೆ ಟಿಕೆಟ್ ನೀಡದಂತೆ ರಾಷ್ಟ್ರಾಧ್ಯಕ್ಷ ಅಮಿತ್‍ಶಾ ಆಲೋಚನೆ ನೀಡಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಇದನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಿದರೆ, ಟಿಕೆಟ್ ಆಕಾಂಕ್ಷಿಯಾಗಿರುವ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ, ಈಶ್ವರಪ್ಪ ಪುತ್ರ ಕಾಂತೇಶ್, ಸಿ.ಎಂ. ಉದಾಸಿ ಪುತ್ರ ಶಿವಕುಮಾರ್ ಉದಾಸಿ, ರಾಮಚಂದ್ರೇ ಗೌಡರ ಪುತ್ರ ಸಪ್ತಗಿರಿಗೌಡ, ಜಿ.ಎಸ್. ಬಸವರಾಜ್ ಪುತ್ರ ಜ್ಯೋತಿಗಣೇಶ್ ಮೊದಲಾದವರಿಗೆ ಟಿಕೆಟ್ ಕೈತಪ್ಪಲಿದೆ.

ಟಿಕೆಟ್ ಹಂಚಿಕೆಗೆ ಹಲವು ಮಾನದಂಡ

ಟಿಕೆಟ್ ಹಂಚಿಕೆಗೆ ಹಲವು ಮಾನದಂಡ

ಕ್ಷೇತ್ರದಲ್ಲಿರುವ ನಾಯಕರ ವರ್ಚಸ್ಸು, ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು, ಪಕ್ಷದ ಕಾರ್ಯಕರ್ತರು ಮತ್ತು ಜನವಲಯದಲ್ಲಿರುವ ಸಂಬಂಧ, ಜತೆಗೆ ಜಾತಿ ಲೆಕ್ಕಚಾರವೂ ಕೂಡ ಅಭ್ಯರ್ಥಿಗೆ ಟಿಕೆಟ್ ಪಡೆಯಲು ಮಾನದಂಡವಾಗುವ ಲಕ್ಷಣಗಳಿವೆ.

ಇಷ್ಟಕ್ಕೂ ಮುಂದಿನ ವಿಧಾನಸಭಾ ಚುನಾವಣೆ ಅಷ್ಟು ಸುಲಭವಾಗಿಲ್ಲ. ಮೂರು ಪಕ್ಷಗಳಿಗೂ ಇದು ಕಠಿಣ ಸವಾಲ್. ಹಾಗಾಗಿಯೇ ಅಮಿತ್ ಶಾ ಒಂದಷ್ಟು ಹೆಚ್ಚಿನ ನಿಗಾವಹಿಸುತ್ತಿದ್ದು, ಇದರ ಬಿಸಿ ರಾಜ್ಯ ಬಿಜೆಪಿ ನಾಯಕರಿಗೆ ತಟ್ಟುತ್ತಿದೆ ಎಂದರೆ ತಪ್ಪಾಗಲಾರದು.

English summary
Amit Shah is planning to implement the 'Uttar Pradesh' model strategy in Karnataka. But the question is that this technique is being worked out against popular chief minister Siddaramaiah?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X