ಬ್ಯಾಂಕ್ ಬಡ್ಡಿ ದರ ಕಡಿತ ಸುತ್ತೋಲೆ ಕುರಿತಂತೆ ಹೈಕೋರ್ಟ್ ಮಹತ್ವದ ಆದೇಶ
ಬೆಂಗಳೂರು, ಜನವರಿ 27: ಬ್ಯಾಂಕ್ ಬಡ್ಡಿ ದರವನ್ನು ಕಡಿತಗೊಳಿಸಿರುವ ಸುತ್ತೋಲೆಯನ್ನು ನೋಟಿಸ್ ಬೋರ್ಡ್‌ನಲ್ಲಿ ಹಾಕಿದರೆ ಅದು ಗ್ರಾಹಕರಿಗೆ ತಿಳಿಸಿದಂತಾಗುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಅಲ್ಲದೆ, ಗ್ರಾಹಕರಿಗೆ ಬಡ್ಡಿ ಕಡಿತದ ಪ್ರಯೋಜನ ನೀಡಲು ನಿರಾಕರಿಸಿದ್ದ ಬ್ಯಾಂಕ್‌ನ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನ್ಯಾಯಾಲಯ, ಗ್ರಾಹಕರಿಗೆ ನೇರವಾಗಿ ದರ ಕಡಿತದ ಮಾಹಿತಿಯನ್ನು ತಲುಪಿಸಬೇಕು ಎಂದು ಆದೇಶಿಸಿದೆ.
ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಕೆನರಾ ಬ್ಯಾಂಕ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯಪೀಠ ಈ ಆದೇಶವನ್ನು ನೀಡಿದೆ.
"ಈ ವಿಚಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ನಿಲುವಿಗೆ ನಮಗೆ ತೃಪ್ತಿ ತಂದಿಲ್ಲ. ಬಡ್ಡಿ ದರ ಕಡಿತದ ಸುತ್ತೋಲೆ ಬ್ಯಾಂಕ್ ನೋಟಿಸ್ ಬೋರ್ಡ್‌ನಲ್ಲಿ ಹಾಕಿದರೆ ಅದು ವ್ಯಾಪಕವಾಗಿ ಪ್ರಚಾರವಾಗುವುದಿಲ್ಲ. ಸುತ್ತೋಲೆಯನ್ನು ಗ್ರಾಹಕರಿಗೆ ಖುದ್ದಾಗಿ ತಲುಪಿಸಿದರೆ ಮಾತ್ರ ಅವರಿಗೆ ಸಂವಹನ ಮಾಡಿದಂತಾಗುತ್ತದೆ''ಎಂದು ನ್ಯಾಯಾಲಯ ಹೇಳಿದೆ.

ವಿಭಾಗೀಯಪೀಠ ಏಕಸದಸ್ಯಪೀಠದ ಆದೇಶವನ್ನು ಎತ್ತಿಹಿಡಿದು, ಬ್ಯಾಂಕ್ 2010ರಲ್ಲಿ ಯಾವ ದಿನಾಂಕದಿಂದ ಬಡ್ಡಿ ದರ ಕಡಿತವಾಗುತ್ತದೆ ಎಂದು ಸುತ್ತೋಲೆ ಹೊರಡಿಸಿತ್ತೋ ಅಂದಿನಿಂದ ಅನ್ವಯವಾಗುವಂತೆ ಅರ್ಜಿದಾರರ ಗೃಹಸಾಲದ ಮೇಲಿನ ಬಡ್ಡಿಯನ್ನು ಕಡಿತಗೊಳಿಸಿ ಅದರ ಅನುಕೂಲವನ್ನು ಅರ್ಜಿದಾರರಿಗೆ ವರ್ಗಾಯಿಸಬೇಕು ಎಂದು ಆದೇಶ ನೀಡಿತ್ತು.
ಈ ಆದೇಶ ಗೃಹ ಸಾಲ ಪಡೆದಿರುವವರ ಪಾಲಿಗೆ ವರದಾನವಾಗಲಿದೆ. ಇನ್ನು ಬ್ಯಾಂಕ್ ಗ್ರಾಹಕರಿಗೆ ಬಡ್ಡಿ ದರ ಕಡಿತದ ಸುತ್ತೋಲೆ ಹೊರಡಿಸಿದ ನಂತರ ಅದನ್ನು ಗ್ರಾಹಕರಿಗೂ ತಲುಪಿಸಬೇಕಾಗುತ್ತದೆ, ಇಲ್ಲವಾದರೆ ಬಡ್ಡಿ ದರ ಕಡಿತ ಪ್ರಯೋಜನ ಗ್ರಾಹಕರಿಗೆ ವರ್ಗಾಯಿಸಬೇಕಾಗುತ್ತದೆ.
ಪ್ರಕರಣವೇನು?
ಬೆಂಗಳೂರಿನ ಬಿ.ಎಸ್. ಶೇಖರ್, ಕೆನರಾ ಬ್ಯಾಂಕ್ ನಿಂದ 2007ರಲ್ಲಿ ಶೇ.11.75ರ ಬಡ್ಡಿಗೆ ಹೋಮ್ ಲೋನ್ ಪಡೆದಿದ್ದರು. 2010ರ ಜ.1ರಿಂದ ಜಾರಿಗೆ ಬರುವಂತೆ ಬ್ಯಾಂಕ್ ಬಡ್ಡಿ ದರವನ್ನು ಶೇ.8.25ಕ್ಕೆ ಕಡಿತಗೊಳಿಸಿತ್ತು. ಅರ್ಜಿದಾರರು 2017ರ ಜ.24ರಂದು ಅರ್ಜಿ ಸಲ್ಲಿಸಿ ಬಡ್ಡಿ ದರ ಕಡಿತದ ಪ್ರಯೋಜನ ನೀಡುವಂತೆ ಕೋರಿದ್ದರು.
ಬ್ಯಾಂಕ್ 2017ರ ಜ.24ರಿಂದ ಅನ್ವಯವಾಗುವಂತೆ ಮಾತ್ರ ಬಡ್ಡಿ ದರ ಕಡಿತಗೊಳಿಸಿತ್ತು. ಆದರೆ ತಮಗೆ 2010ರಿಂದ ಬಡ್ಡಿ ದರ ಕಡಿತದ ಪ್ರಯೋಜನ ನೀಡುವಂತೆ ಅರ್ಜಿದಾರರು ಬ್ಯಾಂಕಿಂಗ್ ಒಂಬುಡ್ಸ್ ಮನ್‌ಗೆ ದೂರು ನೀಡಿದ್ದರು. ಆ ದೂರು ತಿರಸ್ಕೃತಗೊಂಡಿತ್ತು. ಹಾಗಾಗಿ ಶೇಖರ್ ಹೈಕೋರ್ಟ್ ಮೊರೆ ಹೋದರು.
Recommended Video
ಅವರ ಅರ್ಜಿ ಆಲಿಸಿದ ಏಕಸದಸ್ಯಪೀಠ, 2010ರಿಂದ ಅನ್ವಯವಾಗುವಂತೆ ಬಡ್ಡಿ ದರ ಕಡಿತದ ಪ್ರಯೋಜನ ಅರ್ಜಿದಾರರಿಗೆ ನೀಡಬೇಕೆಂದು ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಬ್ಯಾಂಕ್ ಮೇಲ್ಮನವಿ ಸಲ್ಲಿಸಿತ್ತು.












Click it and Unblock the Notifications