ಮಾತನಾಡಿ ಮಾತನಾಡಿ ಸೋತು ಹೋದರಾ ಸಿಟಿ ರವಿ?
ಬೆಂಗಳೂರು: ಮಾಜಿ ಸಚಿವ ಸಿಟಿ ರವಿ ಈಗ ಮಾಜಿ ಶಾಸಕರೂ ಹೌದು. ಬಿಜೆಪಿಯ ಫೈರ್ ಬ್ರ್ಯಾಂಡ್ ಸಿಟಿ ರವಿಗೆ ಹೀನಾಯ ಸೋಲು ಎದುರಾಗಲು ಕಾರಣವೇನು? ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೆ ಈ ರೀತಿಯ ಭೀಕರ ಸೋಲು ಬರ ಸಿಡಿಲಿನಂತೆ ಬಡಿಯಲು ಕಾರಣವೇನು? ರಾಷ್ಟ್ರ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದ್ದು, ಸಿಟಿ ರವಿ ಸೋಲಿನ ಇನ್‌ಸೈಡ್ ರಿಪೋರ್ಟ್ ಇಲ್ಲಿದೆ.
ಈ ಬಾರಿ ಹಂಗೆ ಮಾಡ್ತೀವಿ, ಹಿಂಗೆ ಮಾಡ್ತೀವಿ ಅಂತೆಲ್ಲಾ ಸೌಂಡ್ ಮಾಡಿಕೊಂಡು ಓಡಾಡುತ್ತಿದ್ದ ಸಿಟಿ ರವಿ ಈಗ ಸೋತು ಸುಣ್ಣವಾಗಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಸತತವಾಗಿ ಗೆಲುವು ಕಾಣುತ್ತಾ ಬಂದಿದ್ದ ರವಿಗೆ ಮತದಾರ ಪ್ರಭು ಮನೆಯಲ್ಲಿ ಇರಲು ಹೇಳಿದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ತಮ್ಮದೆ ತಪ್ಪಿಗೆ ಬೆಲೆ ಕಟ್ಟಿದ್ದಾರೆ ಸಿಟಿ ರವಿ. ಆದರೂ ಸಿಟಿ ರವಿ ಸೋಲಿಗೆ ಒಂದಷ್ಟು ಕಾರಣ ಇರಬೇಕಲ್ವಾ? ಸಿಎಂ ಕನಸು ಕಂಡಿದ್ದ ಸಿಟಿ ರವಿ ಹೀಗೆ ಸೋತು ಸುಣ್ಣವಾಗಿದ್ದು ಏಕೆ? ಬನ್ನಿ ತಿಳಿಯೋಣ.

ಚುನಾವಣೆಗೆ ಮೊದಲೇ ಸಿಟಿಆರ್ ಸೋಲು ಡಿಸೈಡ್?
ಚಿಕ್ಕಮಗಳೂರು ಕ್ಷೇತ್ರ ಅಂದ್ರೆ ಬಿಜೆಪಿ, ಕೇಸರಿ ಪಡೆ ಅಂದರೆ ಅದು ಚಿಕ್ಕಮಗಳೂರು ಕ್ಷೇತ್ರ. ರಾಜ್ಯ ರಾಜಕೀಯದಲ್ಲಿ ಚಿಕ್ಕಮಗಳೂರು ಬಿಜೆಪಿ ಭದ್ರಕೋಟೆ ಎನಿಸಿತ್ತು. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಭೀಕರ ಸೋಲು ಕಂಡಿದೆ. ಸಿಟಿ ರವಿ (CT Ravi) ಅವರ ಎಡವಟ್ಟು ಹೀನಾಯ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಹಾಗಾದರೆ ರವಿ ಸೋಲಿಗೆ ಅಸಲಿ ಕಾರಣ ಏನು? ಸಿಟಿ ರವಿ ಸೋಲನ್ನ ಜನ ಮೊದ್ಲೇ ಡಿಸೈಡ್ ಮಾಡಿದ್ರಾ? ಸಿಟಿ ರವಿ 55 ಸಾವಿರ ಮತಗಳನ್ನ ಪಡೆದರೆ ಅವರ ಎದುರಾಳಿ ತಮ್ಮಯ್ಯ 64 ಸಾವಿರ ಮತ ಪಡೆದಿದ್ದು ಹೇಗೆ ತಿಳಿಯೋಣ ಬನ್ನಿ.
ಸಿದ್ದರಾಮಯ್ಯಗೆ 'ಸಿದ್ರಾಮುಲ್ಲಾ ಖಾನ್' ಅಂದಿದ್ದು?
ಹೌದು, ರಾಜಕೀಯದಲ್ಲಿ ಸೋಲು ಗೆಲುವು ಮಾಮೂಲಿ. ಆದರೆ ಕರ್ನಾಟಕದಲ್ಲಿ ದ್ವೇಷದ ರಾಜಕಾರಣಕ್ಕೆ ಜನರು ಒತ್ತು ನೀಡುವುದಿಲ್ಲ. ದೇಶದ ಬೇರೆ ಬೇರೆ ರಾಜ್ಯದಲ್ಲಿ ಒಂದು ಲೆಕ್ಕವಾದರೆ, ಕನ್ನಡಿಗರು ಮಾತ್ರ ಬುದ್ಧಿವಂತ & ಶಾಂತಿಪ್ರಿಯರು. ಇಲ್ಲಿ ದ್ವೇಷದ ಮಾತುಗಳು ರಾಜಕೀಯದಲ್ಲಿ ನಡೆಯಲ್ಲ. ಹೀಗಿದ್ದರೂ 'ಸಿದ್ರಾಮುಲ್ಲಾ ಖಾನ್' ಎಂದು ಪದೇ ಪದೆ ಸಿಟಿ ರವಿ ಭಾಷಣ ಮಾಡಿದ್ದರು. ಇದನ್ನ ನೋಡಿ ರಾಜ್ಯದ ಜನ ರೊಚ್ಚಿಗೆದ್ದರು. ಅದ್ರಲ್ಲೂ ಕುರುಬ ಸಮುದಾಯದ ಜನರಿಗೆ ಸಿಟಿ ರವಿ ಮೇಲೆ ವಿಪರೀತ ಕೋಪ ಬಂದಿತ್ತು ಎಂಬ ಆರೋಪ ಇದೆ.
ದೇವೇಗೌಡರ ಕುಟುಂಬದ ವಿರುದ್ಧ ಹೇಳಿಕೆ?
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡರ ವಿರುದ್ಧ ಮಾತನಾಡಿದ್ದ ಕಾರಣಕ್ಕೂ ಸಿಟಿ ರವಿಗೆ ಹೀನಾಯ ಸೋಲು ಸಿಕ್ಕಿದೆ ಎಂಬ ಮಾತಿದೆ. ಹೀಗಾಗಿ ಜೆಡಿಎಸ್ ನಾಯಕರು ಈ ಬಾರಿ ಸಿಟಿ ರವಿಗೆ ಪಾಠ ಕಲಿಸಿ, ಸೋಲು ಕರುಣಿಸಲು ನೇರವಾಗಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ನಿಂತರು ಎಂಬ ಆರೋಪವಿದೆ. ಚಿಕ್ಕಮಗಳೂರಿನ ಜೆಡಿಎಸ್ ಅಭ್ಯರ್ಥಿ ಕಾಂಗ್ರೆಸ್ ಪರವಾಗಿ ನಿಂತಿದ್ದು ಸಿಟಿ ರವಿಗೆ ದೊಡ್ಡ ಹೊಡೆತ ನೀಡಿದೆ. ಜೊತೆಗೆ ದೇವೇಗೌಡರ ಬಗ್ಗೆ ಮಾತನಾಡಿದ್ದಕ್ಕೂ ಬೆಲೆ ಕಟ್ಟಿದ್ದಾರೆ ಎಂಬ ಮಾತುಗಳು ಚರ್ಚೆಯಾಗುತ್ತಿವೆ.

ಬಿಎಸ್‌ವೈ ಸಿಟ್ಟಿಗೆ ಗುರಿಯಾದ ಸಿಟಿ ರವಿ?
ಕರ್ನಾಟಕದಲ್ಲಿ ಲಿಂಗಾಯತ ಸಮುದಾಯ ಬಿಜೆಪಿಗೆ ವೋಟ್ ಬ್ಯಾಂಕ್ ಎನ್ನುವ ಮಾತು ಬಲವಾಗಿದೆ. ಅದ್ರಲ್ಲೂ ಮಾಜಿ ಸಿಎಂ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಬಿಜೆಪಿ ಬಲವಾಗಿ ಬೆಳೆಯುವ ಜೊತೆಗೆ, ಲಿಂಗಾಯತರಿಗೆ ಉನ್ನತ ಸ್ಥಾನಮಾನಗಳು ದೊರೆತಿದ್ದವು. ಆದರೆ ರವಿ ವಿರುದ್ಧ ಸಾಲು ಸಾಲು ಗಂಭೀರ ಆರೋಪ ಕೇಳಿಬಂದವು. ಅದೇನೆಂದರೆ ಲಿಂಗಾಯತರ ವಿಚಾರದಲ್ಲಿ ಸಿ.ಟಿ. ರವಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ, ಅಲ್ಲದೆ ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆಯೂ ಹಗುರವಾಗಿ ಮಾತನಾಡಿದ್ರು ಎಂಬ ಆರೋಪ ಲಿಂಗಾಯತರನ್ನ ಕೆರಳಿಸಿತ್ತು.
'ಯಡಿಯೂರಪ್ಪ ಬಿಜೆಪಿ ಮಾಲೀಕರಲ್ಲ' ಅಂದಿದ್ರಾ?
ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದೆರಡು ತಿಂಗಳು ಬಾಕಿ ಇದೆ ಅಂದಾಗ ಸಿಟಿ ರವಿ ಸಂದರ್ಶನ ಬಿಜೆಪಿ ಒಳಗೇ ಕಿಚ್ಚು ಹೊತ್ತಿಸಿತ್ತು. ಅದೇನೆಂದರೆ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಮಾಲೀಕರಲ್ಲ ಎಂಬುದನ್ನ ಒತ್ತಿ ಒತ್ತಿ ಹೇಳಿದ್ದರು. ಇದು ಕಿಚ್ಚು ಹೊತ್ತಿಸದೆ ಸುಮ್ಮನೆ ಬಿಡಲು ಆಗುತ್ತಾ ಹೇಳಿ? ಅದರಲ್ಲೂ ಮಾಜಿ ಸಚಿವ ಸಿಟಿ ರವಿ ಸ್ಪರ್ಧೆ ಮಾಡುತ್ತಿದ್ದ ಚಿಕ್ಕಮಗಳೂರಲ್ಲಿ ಲಿಂಗಾಯತರ ಮತಗಳೇ ನಿರ್ಣಾಯಕ ಪಾತ್ರ ವಹಿಸುತ್ತಿದ್ದವು. ಇದೆಲ್ಲಾ ಒಂದೇ ಸಾರಿ ಭರ್ಜರಿ ಪೆಟ್ಟು ಕೊಟ್ಟಿದೆ.
ಸತತ 4 ಬಾರಿ ಗೆದ್ದಿದ್ದ ಸಿಟಿ ರವಿ!
ಹೌದು ಸಿಟಿ ರವಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ತಮ್ಮದೇ ಹವಾ ಇಟ್ಟಿದ್ದರು. ಸಾಲು ಸಾಲು ಗೆಲುವಿನ ಮೂಲಕ ಈ ಬಾರಿ ಕೂಡ ಮತ್ತೆ ಆಯ್ಕೆಯಾಗುವ ವಿಶ್ವಾಸದಲ್ಲಿ ಸಿಟಿ ರವಿ ಇದ್ದರು. ಈ ಚುನಾವಣೆಯೂ ಸೇರಿ ಒಟ್ಟು 6 ಬಾರಿ ಸ್ಪರ್ಧೆ ಮಾಡಿದ್ದರು ಸಿಟಿ ರವಿ. ಸತತ 4 ಗೆಲುವು ರವಿ ಅವರಿಗೆ ಭಾರಿ ಶಕ್ತಿ ತುಂಬಿದ್ದು, ಈಗ ಕೂಡ ಅದೇ ರೀತಿ ಗೆಲ್ಲುತ್ತೇನೆ ಎಂಬ ಉತ್ಸಾಹದಲ್ಲಿ ಇದ್ದರು. ಆದರೆ ಸಿ.ಟಿ.ರವಿ ಆಪ್ತನೇ 5ನೇ ಗೆಲುವಿನ ಕನಸಿಗೆ ಕೊಳ್ಳಿ ಇಟ್ಟಿದ್ದು, ಕರ್ನಾಟಕದ ಮುಂದಿನ ಸಿಎಂ ಆಗುವ ಕನಸು ಕಂಡಿದ್ದ ಸಿಟಿ ರವಿಗೆ ಹಿನ್ನಡೆ ಮಾಡಿದೆ. ಹಾಗಾದ್ರೆ ಸಿಟಿ ರವಿ ಸೋಲಿಗೆ ಪ್ರಮುಖ ಕಾರಣ ಏನು? ಅದರ ಮಾಹಿತಿ ಇಲ್ಲಿದೆ ಓದಿ.

2018ರಲ್ಲಿ ಗೆದ್ದು 2023ರಲ್ಲಿ ಸೋತರು
2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಿ.ಟಿ.ರವಿಗೆ ಸಾಕಷ್ಟು ಪ್ಲಸ್ ಪಾಯಿಂಟ್ ಇತ್ತು. 2018ರ ಚುನಾವಣೆ ರವಿ ಅವರಿಗೆ ಕಷ್ಟವೂ ಆಗಿರಲಿಲ್ಲ. ಜತೆಗೆ ಪಕ್ಷದ ಒಗ್ಗಟ್ಟು, ಜನಾಭಿಪ್ರಾಯ ಕೂಡ ಅವರ ಪರ ಇದ್ದಿದ್ದು ಒಳ್ಳೆಯದೇ ಆಗಿತ್ತು. ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಅಷ್ಟು ಸವಾಲು ನೀಡದೆ ಸಿಟಿ ರವಿ ಗೆಲುವಿಗೆ ವೇದಿಕೆ ಒದಗಿಸಿದರು. ಆದರೆ ಈ ಬಾರಿ ಎಲ್ಲವೂ ಉಲ್ಟಾ ಆಗಿ, ಸಿಟಿ ರವಿ ಭಾರಿ ದೊಡ್ಡ ಸಂಕಷ್ಟದಲ್ಲಿ ಸಿಲುಕಿಬಿಟ್ಟರು. ಅದನ್ನ ಇಲ್ಲಿ ವಿವರವಾಗಿ ತಿಳಿಯೋಣ.
ಸಿಟಿ ರವಿ ವಿರುದ್ಧ ನಿಂತ ಜೆಡಿಎಸ್
2023ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಣದಲ್ಲಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲಎಂಬತಾಗಿತ್ತು. ತಮ್ಮದೇ ಪಕ್ಷದ ಅಭ್ಯರ್ಥಿ ಇದ್ದರೂ ಜೆಡಿಎಸ್ ಮುಖಂಡ ಹಾಗೂ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಕಾಂಗ್ರೆಸ್ ಪರ ಮತ ನೀಡಲು ಕರೆಕೊಟ್ಟಿದ್ದರು. ಇದು ಸಿ.ಟಿ.ರವಿಗೆ ದೊಡ್ಡ ಹೊಡೆತ ನೀಡುವ ಜೊತೆಗೆ, ನೂರಾರು ಸವಾಲು ಎದುರಿಸುವಂತೆ ಮಾಡಿತ್ತು. ಜಿಲ್ಲೆಯ ವಿವಿಧ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿ ಸಿ.ಟಿ.ರವಿ ಸೋಲಿಸಲು ತಂತ್ರ ರೂಪಿಸಿದ್ದವು. ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ.ತಮ್ಮಯ್ಯ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ್ದು ಕೂಡ ಸಿಟಿ ರವಿಯ ಸೋಲಿಗೆ ದೊಡ್ಡ ಕೊಡುಗೆ ನೀಡಿತು.

ಬೇರೆ ನಾಯಕರನ್ನು ಬೆಳೆಯಲು ಬಿಡಲಿಲ್ವಾ?
ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿ ಒಬ್ಬ ಸತತವಾಗಿ ಒಂದೇ ಪಕ್ಷದಿಂದ ಆಯ್ಕೆಯಾಗಿ ಬರುತ್ತಿದ್ದಾನೆ ಎಂದರೆ ಆ ಕ್ಷೇತ್ರದಲ್ಲಿ ಬೇರೆಯವರಿಗೆ ಬೆಳೆಯಲು ಅವಕಾಶ ಇಲ್ಲ ಎಂದೇ ಅರ್ಥ. ಚಿಕ್ಕಮಗಳೂರು ಕ್ಷೇತ್ರದಲ್ಲೂ ಅಷ್ಟೇ ಇಂತಹದ್ದೇ ಪರಿಸ್ಥಿತಿ ಇತ್ತು. ಸಿಟಿ ರವಿ ಹೊರತು ಪರ್ಯಾಯ ನಾಯಕತ್ವ ಕ್ಷೇತ್ರದಲ್ಲಿ ಬೆಳೆಯಲೇ ಇಲ್ಲ. ಈ ಕಾರಣ ಕೂಡ ಸಿಟಿ ರವಿಗೆ ದೊಡ್ಡ ಹೊಡೆತ ನೀಡಿತ್ತು. 20 ವರ್ಷದಲ್ಲಿ ಸಿ.ಟಿ.ರವಿ ತಮ್ಮ ಕಾರ್ಯಕರ್ತರಿಗೆ ದೊಡ್ಡ ಹುದ್ದೆ ಕೊಡಿಸಲಿಲ್ಲ ಎಂಬ ಆರೋಪ ಅಸಮಾಧಾನದ ಹೊಗೆಯನ್ನ ಒಳಗೊಳಗೆ ಹುಟ್ಟುಹಾಕಿತ್ತು.












Click it and Unblock the Notifications