ಕುಡಿದ ಅಮಲಿನಲ್ಲಿ 8 ವರ್ಷದ ಮಗನನ್ನು ಕೊಂದ ಅಪ್ಪ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಮೇ 31 : ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಎಂಟು ವರ್ಷದ ಮಗನನ್ನು ಕೊಂದು ಹಾಕಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬ್ರಹ್ಮಪುರ ಗ್ರಾಮದಲ್ಲಿ ನಡೆದಿದೆ. ಶ್ರೀರಂಗಪಟ್ಟಣ ಠಾಣೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿ ನಾಗೇಂದ್ರ (45) ತನ್ನ ಮಗ ಶಿವರಾಜುನನ್ನು ಹತ್ಯೆ ಮಾಡಿರುವ ಆರೋಪಿ. ಕುಡುಕ ನಾಗೇಂದ್ರ ತನ್ನ ಮಗ ಶಿವರಾಜು ಜೊತೆ ಶ್ರೀರಂಗಪಟ್ಟಣದ ನಗುವನಹಳ್ಳಿ ಗ್ರಾಮದಲ್ಲಿರುವ ಸಂಬಂಧಿ ಲೀಲಾ ಅವರ ಮನೆಗೆ ಬಂದಿದ್ದನು. ಕುಡಿದ ಅಮಲಿನಲ್ಲಿದ್ದ ಆತ ಮಗನಿಗೆ ಆಗಾಗ ಥಳಿಸುತ್ತಿದ್ದನು. [ಪಾನಮತ್ತ ವೈದ್ಯನ ಉಪಟಳ, ಒಂದು ಸಾವು, ನಾಲ್ವರಿಗೆ ಗಾಯ]

mandya crime

ಮಗನಿಗೆ ಥಳಿಸದಂತೆ ಸಂಬಂಧಿಕರು ನಾಗೇಂದ್ರನಿಗೆ ಬುದ್ಧಿವಾದ ಹೇಳಿದ್ದರು. ಆದರೆ, ಇದನ್ನು ಕೇಳದ ಆತ ಮಗನಿಗೆ ಹೊಡೆಯುತ್ತಿದ್ದನು. ಸೋಮವಾರವೂ ಕುಡಿದು ಬಂದ ನಾಗೇಂದ್ರ ಶಿವರಾಜನನ್ನು ಬ್ರಹ್ಮಪುರ ಬಳಿ ಕರೆದೊಯ್ದು ಥಳಿಸಿದ್ದಾನೆ. ಇದರಿಂದಾಗಿ ಆತ ಸಾವನ್ನಪ್ಪಿದ್ದಾನೆ. ಬಳಿಕ ಶವವನ್ನು ಅಲ್ಲೇ ಎಸೆದು ಪರಾರಿಯಾಗಿದ್ದಾನೆ. [ಬಜೆಟ್ 2016 : ಕುಡುಕರ ಜೇಬಿಗೆ ಕತ್ತರಿ ಗ್ಯಾರಂಟಿ]

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶ್ರೀರಂಗಪಟ್ಟಣ ಠಾಣೆ ಪೊಲೀಸರು, ಶವವನ್ನು ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ನೀಡಿದ್ದಾರೆ. ನಾಗೇಂದ್ರನಿಗಾಗಿ ಹುಡುಕಾಟ ನಡೆಯುತ್ತಿದೆ.

ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿ ಸಾವು : ಹೊಟ್ಟೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆ ಸೇರಿದ್ದ ಬಾಲಕಿ ಸಾವನ್ನಪ್ಪಿರುವ ಘಟನೆ ಎಚ್.ಡಿ.ಕೋಟೆಯ ಸೈಂಟ್ ಮೇರಿಸ್ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರು ನೀಡಿದ ಓವರ್‍ಡೋಸ್ ಇಂಜೆಕ್ಷನ್‍ನಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಒತ್ತಾಯಿಸಿದ್ದಾರೆ.

ಮೃತಪಟ್ಟ ಬಾಲಕಿಯನ್ನು ಎಚ್.ಡಿ.ಕೋಟೆಯ ಸೋಗಹಳ್ಳಿ ಗ್ರಾಮದ ರಾಜು ಮತ್ತು ನಾಗಮ್ಮ ದಂಪತಿಯ ಪುತ್ರಿ ಶಿಲ್ಪಾ (8) ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಶಿಲ್ಪಾಳಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಸೈಂಟ್ ಮೇರಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಭಾನುವಾರ ಸಂಜೆವರೆಗೂ ಆರೋಗ್ಯವಾಗಿದ್ದ ಬಾಲಕಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾಗಿ ರಾತ್ರಿ 8ಗಂಟೆ ಸಮಯದಲ್ಲಿ ವೈದ್ಯರು ತಿಳಿಸಿದ್ದಾರೆ.

hd kote

ಇದರಿಂದ ಆಕ್ರೋಶಗೊಂಡ ಬಾಲಕಿಯ ಪೋಷಕರು ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯರ ನಿರ್ಲಕ್ಷ ಹಾಗೂ ಶಿಲ್ಪಾಳಿಗೆ ಓವರ್‍ಡೋಸ್ ಇಂಜೆಕ್ಷನ್ ಕೊಟ್ಟಿರುವುದೇ ಕಾರಣ ಪೋಷಕರು ದೂರಿದ್ದಾರೆ. ವೈದ್ಯರು ಮತ್ತು ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿಲ್ಪಾ ಸಂಬಂಧಿಕರು ಪ್ರತಿಭಟನೆ ನಡೆಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An inebriated 45 year-old father kills his 8 year-old son to death in Mandya, Karnataka. Srirangapatna town police now on man hunt, Nagendra at large.
Please Wait while comments are loading...