''India Pakistan War: ಕೇಂದ್ರದಿಂದ ಕರ್ನಾಟಕಕ್ಕೆ ಮಹತ್ವದ ಸೂಚನೆಗಳು ಬಂದಿವೆ''
ಬೆಂಗಳೂರು, ಮೇ 07: ಪಹಲ್ಗಾಮ್‌ನಲ್ಲಿ ಭಾರತೀಯರನ್ನು ಹತ್ಯೆಗೈದ ಪಾಕಿಸ್ತಾನ ಉಗ್ರಗಾಮಿ ನೆಲೆಗಳ ಮೇಲೆ ನಮ್ಮ ರಕ್ಷಣಾ ಇಲಾಖೆಯು ದಾಳಿ ನಡೆಸಿರುವುದಕ್ಕೆ ಕಾಂಗ್ರೆಸ್ ನಾಯಕರ ಬೆಂಬಲವಿದೆ. ಸದ್ಯ ಕರ್ನಾಟಕಕ್ಕೆ ಕೇಂದ್ರ ಗೃಹ ಇಲಾಖೆ ಮತ್ತು ರಕ್ಷಣಾ ಇಲಾಖೆಯಿಂದ ಕೆಲವು ಮಹತ್ವ ಸೂಚನೆಗಳು, ಮಾರ್ಗಸೂಚಿಗಳು ಬಂದಿವೆ. ಅದರಂತೆ ನಾವು ರಾಜ್ಯದ ನಾಗರಿಕರ ರಕ್ಷಣೆ ಮಾಡುವ ಕುರಿತ ಅಗತ್ಯ ತಯಾರಿ ನಡೆಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ಗುಂಡಿನ ದಾಳಿ ಬಳಿಕ ಭಾರತಕ್ಕೆ ಪ್ರತ್ಯುತ್ತರಕ್ಕೆ ನಮ್ಮೆಲ್ಲರ ಬೆಂಬಲವಿದೆ. ದೇಶದ ಹಿತವನ್ನು ಕಾಪಾಡಲು ನಾವೆಲ್ಲ ಒಟ್ಟಾಗಿರುತ್ತೇವೆ. ಇಡೀ ಜನಸಮುದಾಯ ದೇಶದ ರಕ್ಷಣೆಗೆ ಜೊತೆಯಾಗಿ ನಿಲ್ಲಲಿದೆ. ಇದೀಗ ಕರ್ನಾಟಕದ ಜನರ ರಕ್ಷಣೆಗೆ ಕೇಂದ್ರ ವಿಶೇಷ ಸೂಚನೆಗಳ ಮೇರೆಗೆ ರಾಜ್ಯ ಕಾರ್ಯ ನಿರ್ವಹಿಸಲಿದೆ ಎಂದರು.

ಈಗಾಗಲೇ ಕೇಂದ್ರ ಗೃಹ ಇಲಾಖೆ ಮತ್ತು ರಕ್ಷಣಾ ಇಲಾಖೆಯಿಂದ ಮಾಕ್ ಡ್ರಿಲ್ ಮಾಡಲು ಸೂಚನೆ ಬಂದಿದೆ. ನಾಗರಿಕರ ರಕ್ಷಣೆ ಮಾಡುವ ಕುರಿತ ತಯಾರಿಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ವಿದ್ಯುತ್ ಸ್ಥಾವರ, ಅಣೆಕಟ್ಟು, ವಿಮಾನ ನಿಲ್ದಾಣಗಳ ಸೇರಿದಂತೆ ಇನ್ನಿತರ ಪ್ರಮುಳ ಸ್ಥಳಗಳಲ್ಲಿ ಅಗತ್ಯ ರಕ್ಷಣಾ ಸಿಬ್ಬಂದಿ ನಿಯೋಜಿಸಲಾಗಿದೆ. ರಾಜ್ಯ ಗುಪ್ತದಳವು ಕೇಂದ್ರದ ಇಂಟಲಿಜೆನ್ಸ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲಿದೆ. ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇವತ್ತು ಬುಧವಾರ ಸಂಜೆ 04 ಗಂಟೆಗೆ ಸಿವಿಲ್ ಡಿಫೆನ್ಸ್ ವತಿಯಿಂದ ಮಾಕ್ ಡ್ರಿಲ್ (ಅಣಕು ರಕ್ಷಣಾ ಕಾರ್ಯಾಚರಣೆ) ಮಾಡಲಿದ್ದಾರೆ ಎಂದು ಅವರು ವಿವರಿಸಿದರು.
ರಾಜ್ಯದಲ್ಲಿ ಕೇಂದ್ರ ಸರ್ಕಾರ ಭದ್ರತೆ ನೀಡುತ್ತಿರುವ ಸ್ಥಳಗಳನ್ನು ಅವರೇ ಭದ್ರತೆ ಒದಗಿಸಲಿದ್ದಾರೆ. ರಾಜ್ಯ ಸರ್ಕಾರದ ವತಿಯಿಂದ ಈಗಾಗಲೇ ಭದ್ರತೆ ನೀಡುವ ಕಡೆಗೆ ಹಾಗೂ ಅಗತ್ಯವಿರುವ ಜನದಟ್ಟಣೆ ಕಡೆಗೆ ಭದ್ರತೆ ನೀಡಲಾಗುತ್ತದೆ. ಪಾಕಿಸ್ತಾನ್-ಭಾರತ ಯುದ್ಧ ಹಿನ್ನೆಲೆ ನಾವು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದೇವೆ.

ಕರ್ನಾಟಕದಲ್ಲಿದ್ದ ಒಂದಷ್ಟು ಪಾಕಿಸ್ತಾನ ಪ್ರಜೆಗಳನ್ನು ಕಳಿಸಲಾಗಿದೆ. ಎಫ್‌ಆರ್‌ಆರ್‌ಒ ಸಂಪರ್ಕದಲ್ಲಿದ್ದು, ಅವರು ನೀಡುವ ಮಾಹಿತಿ ಆಧಾರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮೂಲಕ ಕೇಂದ್ರದ ಸೂಚನೆ ಪಾಲಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಇನ್ನೂ ಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಬೇರೆ ಎಲ್ಲ ಕಾರ್ಯಕ್ರಮಗಳಿಗಿಂತ ದೇಶದ ರಕ್ಷಣೆ ವಿಚಾರ ಮುಖ್ಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ರದ್ದುಪಡಿಸಿದ್ದಾರೆ. ದೇಶದ ಭದ್ರತೆ ಪ್ರಶ್ನೆ. ಈ ಸಂದರ್ಭದಲ್ಲಿ ನಮ್ಮ ನಡುವೆ ಸಣ್ಣಪುಟ್ಟ ವ್ಯತ್ಯಾಸ, ಅಭಿಪ್ರಾಯಗಳಿದ್ದರೆ ಅದೆಲ್ಲವನ್ನು ಬದಿಗೊತ್ತಿ ದೇಶದ ರಕ್ಷಣೆಗೆ ಕೈಜೋಡಿಸಬೇಕು ಎಂದು ಅವರು ಹೇಳಿದರು.












Click it and Unblock the Notifications