'ಭಾರತ ನಕ್ಸಲ್ ಮುಕ್ತ' ಅಮಿತ್ ಶಾ ಘೋಷಣೆ ಬೆನ್ನಲ್ಲೇ ಕರ್ನಾಟಕ ಗಡಿಯಲ್ಲಿ ಮತ್ತೆ ಆತಂಕ; ಪಾವಗಡದಲ್ಲಿ ₹5 ಲಕ್ಷ ಬೇಡಿಕೆ, ಪತ್ರ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಆರು ಜನ ನಕ್ಸಲರು ಶರಣಾಗತಿ ಮೂಲಕ ಕರ್ನಾಟಕವು ನಕ್ಸಲರ (ರೆಡ್ ಕಾರಿಡಾರ್) ಮುಕ್ತ ರಾಜ್ಯವಾಗಿದೆ. ಭಾರತ ಸಹ ನಕ್ಸಲ್ ಮುಕ್ತ ದೇಶವಾಗಿದೆ ಎಂದು ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಇತ್ತೀಚೆಗೆ ಘೋಷಿಸಿದ್ದಾರೆ. ಆದರೆ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಗಡಿ ಭಾಗದ ಪಾವಗಡದಲ್ಲಿ ಮತ್ತೆ ನಕ್ಷಲರ ಹಾವಳಿ ಹೆಚ್ಚಾಗಿರುವುದು ವರದಿ ಆಗಿದೆ. ಇದು ಕರ್ನಾಟಕಕ್ಕೂ ಆತಂಕ ತಂದೊಡ್ಡಿದ್ದು, ನಿಜವಾಗಿಯೂ ಭಾರತ ನಕ್ಸಲ್ ಮುಕ್ತವಾಗಿದೆಯಾ? ಎಂಬ ಅನುಮಾನ ಮೂಡಿದೆ.
ಕರ್ನಾಟಕದ ಮಲೆನಾಡಿನಲ್ಲಿ ಸಕ್ರಿಯವಾಗಿದ್ದ 6 ಜನ ನಕ್ಸಲರ ಗುಂಪು ಶಸ್ತ್ರ ತ್ಯಜಿಸಿ ಸಿದ್ದರಾಮಯ್ಯ ಸಮ್ಮುಖದಲ್ಲಿ 2025ರಲ್ಲಿ ಶರಣಗಾಗಿದ್ದರು. ಈ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದಿದ್ದರು. ಹಾಗಂತ ಕರ್ನಾಟಕ ಮಾತ್ರ 'ಆಂಟಿ ನಕ್ಸಲ್ ಫೋರ್ಸ್' ಅನ್ನು ಕ್ಲೋಸ್ ಮಾಡಿರಲಿಲ್ಲ. ಅದಿನ್ನು ಸಕ್ರಿಯವಾಗಿದ್ದು, ಈ ಪಡೆಯು ಪಾವಗಡ ರಾಜ್ಯದ ಗಡಿಯಲ್ಲಿ ಮತ್ತೆ ಸಕ್ರಿಯವಾಗುವ, ಕಾರ್ಯಾಚರಣೆ ನಡೆಸುವ ಸಮಯ ಬಂದಿದೆ.

ಪಾವಗಡ ರೈತನಿಗೆ ಬೆದರಿಕೆ, 5 ಲಕ್ಷ ರೂ.ಗೆ ಬೇಡಿಕೆ!
ಹೌದು, ಪಾವಗಡದಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿರುವ ಶಂಕೆ ವ್ಯಕ್ತವಾಗಿದೆ. ಇಲ್ಲಿನ ರೈತರೊಬ್ಬರಿಗೆ ಐದು ಲಕ್ಷ ರೂ.ಗೆ ಬೇಡಿಕೆ ಇಟ್ಟು, ಜಮೀನಿನ ಗೇಟಿಗೆ ಬೆದರಿಕೆ ಪತ್ರ ಅಂಟಿಸಿದ್ದಾರೆ. ಇದರಲ್ಲಿ ಪೀಪಲ್ಸ್ ವಾರ್ ಜನತಾ ಪಾರ್ಟಿ ವಿಳಾಸವಿದೆ. ಇನ್ನೂ ಪತ್ರದಲ್ಲಿ ದೌರ್ಜನ್ಯ, ದಬ್ಬಾಳಿಕೆ, ಬಡವರ ಮೇಲಿನ ದಾಳಿ ಹೆಚ್ಚಾದರೆ ನಾವು ಬುದ್ಧಿ ಕಲಿಸುತ್ತೇವೆ. ಬಡವರ ಪರ, ಕಾರ್ಮಿಕರ ಪರ ನ್ಯಾಯ ಕೊಡಿಸಲು ನಮ್ಮ ಹೋರಾಟ ಇದ್ದೇ ಇರುತ್ತದೆ. ತಾಲೂಕಿನ ಗಂಗಸಾಗರ, ಪೊನ್ನಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜಕೀಯ ಪಿತೂರಿ, ದೌರ್ಜನ್ಯ ಹೆಚ್ಚಾಗಿದೆ.
ಹಿಂಸೆಗೆ ಒಳಪಟ್ಟವರ ನೋವಿಗೆ ಸ್ಪಂದಿಸಿ ಕಾಮ್ರೇಡ್ ದೇವನ್ನ ದಳಂ ಪಾರ್ಟಿಯು ತಾಲೂಕನ್ನು ಪ್ರವೇಶಿಸಿದೆ. ಕನಿಕಲಬಂಡೆ ಗ್ರಾಮದಲ್ಲಿ ನಡೆಯುತ್ತಿರುವ ದೌರ್ಜನ್ಯ ಮಟ್ಟ ಹಾಕಲಿದ್ದೇವೆ ಎಂದು ಹಲವು ವಿಷಯ ಪ್ರಸ್ತಾಪಿಸಿ ಐದು ಲಕ್ಷ ರೂ. ಅನ್ನು ಸೆ.16ರೊಳಗೆ ನೀಡುವಂತೆ ಪತ್ರದಲ್ಲಿ ಬರೆಯಲಾಗಿದೆ. ಇದು ನಿಜವಾಗಿಯೂ ನಕ್ಸಲರ ಕೈವಾಡವಾ, ಅಥವಾ ಅವರ ಹೆಸರಿನಲ್ಲಿ ಬೇರೆಯವರು ಮಾಡುತ್ತಿರುವ ಬೆದರಿಕೆಯಾ? ಎಂಬ ಆಯಾಮದಲ್ಲೂ ತನಿಖೆ ಆರಂಭವಾಗಿದೆ. ಒಟ್ಟಾರೆ ಈ ಬೆಳವಣಿಗೆಯಿಂದ ತುಮಕೂರು ಗಡಿ, ಹೆಚ್ಚಾಗಿ ಪಾವಗಡದ ಕನಕಲಬಂಡೆ, ಗಂಗಸಾಗರ, ಪೊನ್ನಸಮುದ್ರ ಗ್ರಾಮಗಳ ಜನರಲ್ಲಿ ಆತಂಕ ಮನೆ ಮಾಡಿದೆ.
ನಕ್ಸಲ್ ಚಟುವಟಿಕೆ: ಕರ್ನಾಟಕ ಸರ್ಕಾರ ಹೇಳಿದ್ದೇನು?
ಪಾವಗಡದಲ್ಲಿ ಕೇಳಿ ಬಂದ ನಕ್ಸಲರ ಚುವಟಿಕೆ ಬಗ್ಗೆ ತುಮಕೂರು ಎಸ್ ಪಿ ಅವೊರಂದಿಗೆ ಚರ್ಚಿಸಿದ್ದೇನೆ. ಅಗತ್ಯವಿದ್ದಲ್ಲಿ ಭದ್ರತೆ ಹೆಚ್ಚಿಸಲಾಗುವುದು. ನಾವಿನ್ನು ಆಂಟಿ ನಕ್ಸಲ್ ಫೋರ್ಸ್ (ನಕ್ಸಲ್ ನಿಗ್ರಹ ಪಡೆ) ಕ್ಲೋಸ್ ಮಾಡಿಲ್ಲ ಎಂದು ಡಿಸಿಎಂ ಜಿ.ಪರಮೇಶ್ವರ್ ಹೇಳಿದ್ದಾರೆ. ಇದು ನಕಲಿ ನಕ್ಸಲರು ಅಂತಲೂ ಮಾಹಿತಿ ಬಂದಿದೆ ಎಂದು ತಿಳಿಸಿದ್ದಾರೆ.
ಪಾವಗಡದಲ್ಲಿ ಹೊಸ ರೂಪದಲ್ಲಿ ನಕ್ಸಲರು ಸಕ್ರಿಯ?
ಇದೆಲ್ಲ ನೋಡಿದರೆ ಭಾರತ ನಕ್ಸಲ್ ಮುಕ್ತ ದೇಶವಾಗಿಲ್ಲ. ದೇಶದ ವಿವಿಧ ಕಡೆಗಳಲ್ಲಿ ಪ್ರಜಾಪ್ರಭುತ್ವ ಬೆಂಬಲಿಸದ ಸಶಸ್ತ್ರ ಕ್ರಾಂತಿಯನ್ನೇ ನಂಬಿರುವ, ಹಾಲಿ ವ್ಯವಸ್ಥೆ, ಸರ್ಕಾರ, ಪೋಲೀಸರ, ಅರಣ್ಯ ಇಲಾಖೆ ವಿರುದ್ಧ ಹೋರಾಡುವ ನಕ್ಸಲರ ಗುಂಪು ಪಾವಗಡದಲ್ಲಿ ಹೊಸ ರೂಪದಲ್ಲಿ ಸಕ್ರಿಯವಾಗಿದೆ ಎನ್ನಲಾಗಿದೆ. ಮಾವೋವಾದಿ ಕಮ್ಯೂನಿಸ್ಟ್ ಸಿದ್ಧಾಂತ ಹೊಂದಿರುವ ನಕ್ಸಲ ಗುಂಪುಗಳ ಹಿನ್ನೆಲೆ ಏನು? ಹೆಚ್ಚಾಗಿ ಯಾವ ರಾಜ್ಯದಲ್ಲಿ ಕಂಡು ಬಂದಿದ್ದರು, ಇವರ ಹಿನ್ನೆಲೆ ತಿಳಿಯುವ ಮುನ್ನ ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದೇನು? ತಿಳಿಯಿರಿ.
ಭಾರತ ನಕ್ಸಲ್ ಮುಕ್ತ ದೇಶ: ಅಮಿತ್ ಶಾ
ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶವೀಗ ನಕ್ಲಲ್ ಮುಕ್ತವಾಗಿದೆ ಎಂದು ವಿಶ್ವಾಸದಿಂದ ಹೇಳಿದ್ದರು. ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಭಾರತ ಮತ್ತು ನಕ್ಸಲಿಸಂಗೆ ಸಂಬಂಧಿಸಿದ ಭದ್ರತಾ ಸವಾಲುಗಳಿಂದ ದೇಶವು ಬಹುತೇಕ ಮುಕ್ತವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದರು. ದೇಶದ ವಿವಿಧೆಡೆ ಅಳಿದುಳಿದ ನಕ್ಸಲರಲ್ಲಿ ಕೆಲವರು ಸೆರೆಯಾಗಿಸಿದ್ದಾರೆ ಉಳಿದವರು ಶರಣಾಗಿದ್ದರು. ಛತ್ತೀಸ್ಗಢದಂಥ ರಾಜ್ಯಗಳೇ ನಕ್ಸಲ್ ಮುಕ್ತವಾಗಿವೆ. ಛತ್ತೀಸ್ಗಢದ ಬಸ್ತಾರ್ ಜಿಲ್ಲೆಯ ಜಗದಲ್ಪುರದಲ್ಲಿ ''ಉಜಾರ್ ಬಸ್ತಾರ್' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಮಿತ್ ಶಾ ಮಾತನಾಡಿದ್ದರು. ಮಾವೋವಾದಿಗಳ ವಿರುದ್ಧ ದಶಕಗಳಿಂದ ಶ್ರಮಿಸಿದ ಭದ್ರತಾ ಪಡೆಯನ್ನು ಅಂದು ಅವರು ಶ್ಘಾಘಿಸಿದ್ದರು.
ಪಾವಗಡದ ಇಂದಿನ ಬೆಳವಣಿಗೆ ನೋಡಿದರೆ ನಕ್ಸಲರು ಎಲೆಮರೆ ಕಾಯಿಯಂತೆ ಆಡಳಿತದ ಕಣ್ತಪ್ಪಿಸಿ ಆಕ್ಟಿವ್ ಆಗಿದ್ದಾರೆ ಎಂದನಿಸುತ್ತದೆ. ಈ ಹಿಂದೆ ಮಧ್ಯಪ್ರದೇಶ, ಒಡಿಶಾ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಂಮ ಬಂಗಾಳ, ಕೇರಳದಲ್ಲಿ ಸಕ್ರಿಯವಾಗಿದ್ದ ಅವರಲ್ಲರು ಸಂಪೂರ್ಣವಾಗಿ ಶರಣಾದರೇ ಅಥವಾ ತೆರೆಮರೆಯಲ್ಲಿ ಜೀವಂತವಾಗಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ.
ನಕ್ಸಲರು ಎಂದರೆ ಯಾರು? ಅವರ ಹಿನ್ನೆಲೆ?
ನಕ್ಸಲರು ಎಂದರೆ ಸರ್ಕಾರಿ ವ್ಯವಸ್ಥೆ ವಿರುದ್ಧ ಹೋರಾಡುವವರು. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದೇ ಸಶಸ್ತ್ರ ಕಾಂತಿಯನ್ನು ನಂಬುವವರು ಮತ್ತು ಉಗ್ರಗಾಮಿ ಹಾಗೂ ಬಂಡಾಯದಲ್ಲಿ ಹೆಚ್ಚು ನಂಬಿವುಳ್ಳವರು. ಮಾರ್ಕ್ಸ್ ವಾದ, ಲೆನಿನಾವಾದ ಮತ್ತು ಮಾವೋವಾದಿ ಕಮ್ಯೂನಿಸ್ಟ್ ಸಿದ್ಧಾಂತ ಮೈಗೂಡಿಸಿಕೊಂಡಿರುವ ಗುಂಪು.
ಕರ್ನಾಟಕದಲ್ಲಿ ದಶಕಗಳ ಹಿಂದೆ (1980-1990) ಬೆಂಗಳೂರು, ಮೈಸೂರು ಭಾಗದಲ್ಲಿ ಆರಂಭವಾದ ನಕ್ಸಲರ ಚಟುವಟಿಕೆ ಇಲ್ಲಿ ಫಲಪ್ರದ ವಾಗದಿದ್ದಾಗ, ಬೀದರ್ ಮತ್ತು ರಾಯಚೂರಿನತ್ತ ತೆರಳಿದರು. ಅಲ್ಲಿ ಸಹ ವಾಸ್ತವ್ಯ ಕಂಡು ಕೊಳ್ಳಲಾರದೇ ಇವರು ರಾಜ್ಯದ ಪಶ್ಚಿಮ ಘಟ್ಟಗಳ ತೀರ್ಥಹಳ್ಳಿ, ಆಗುಂಬೆ, ಶೃಂಗೇರಿ, ಶಿವಮೊಗ್ಗ ವ್ಯಾಪ್ತಿಯಲ್ಲಿ ತೆರೆಮರೆಯಲ್ಲಿ ತರಬೇತಿ ನಡೆಸಿ ಆಗಾಗ ಸಕ್ರಿಯವಾಗುತ್ತ ಆಡಳಿತ ವ್ಯವಸ್ಥೆಗೆ ತಲೆನೋವು ತರುತ್ತಿದ್ದರು. ಆಯಾ ಹಳ್ಳಿ ಭಾಗದವರ ನೆಮ್ಮದಿ ಕಸಿಯುತ್ತಿದ್ದರು. ಸದ್ಯದ ವರದಿ ಪ್ರಕಾರ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ.
ನಕ್ಸಲ್ ಗುಂಪು ಹುಟ್ಟಿದ್ದೇಗೆ?
1967ರಲ್ಲಿ ಪಶ್ಚಿಮ ಬಂಗಾಳದಲ್ಲಿ 'ನಕ್ಸಲ್ ಬರಿ' ಎಂಬ ಹಳ್ಳಿಯಲ್ಲಿ ಜಮಿನ್ದಾರರ ವಿರುದ್ಧ ಗುಂಪೊಂದು ಸಶಸ್ತ್ರ ದಂಗೆ ನಡೆಸಿತ್ತು. ಅಂದಿನಿಂದ 'ನಕ್ಸಲ್ ಗುಂಪು' ಇಲ್ಲವೇ 'ನಕ್ಸಲ್ ಚುಟುವಟಿಕೆ' ಎಂಬ ಹೆಸರು ಬಂತು. ಬಡವರು, ಶೊಷಿತರು, ಭೂಮಿ ಹಾಗೂ ಹಕ್ಕುಗಳ ಪರವಾಗಿ, ದೌರ್ಜನ್ಯ ನಡೆಸುವವರ ವಿರುದ್ಧ ನ್ಯಾಯಕ್ಕಾಗಿ ಕುಟು ಹೋರಾಟದ ಹಾದಿ ಹಿಡಿದವರು ನಕ್ಸಲರು.
ಹೋರಾಟ ವೇಳೆ ಸರ್ಕಾರಿ ಆಸ್ತಿ ಧ್ವಂಸ, ಅರಣ್ಯ ಇಲಾಖೆ ಪಡೆ, ಗಸ್ತು ಪಡೆ ಮೇಲೆ ದಾಳಿ ನಡೆಸುವುದು. ಹತ್ಯೆ ಮಾಡುವುದು ಸೇರಿ ಹಿಂಸಾತ್ಮಕ ಚುವಟಿಕೆಗಳಲ್ಲಿ ಇವರು ತೊಡಗುತ್ತಾರೆ. ಕರ್ನಾಟಕದಲ್ಲಿ ಅಂದು (2002) ಪಶ್ಚಿಮ ಘಟ್ಟಗಳ ಸಾಲಿನಲ್ಲಿ ವಾಸ್ತವ್ಯ ಹೂಡಿದ್ದ ನಕ್ಷಲರ ಗುಂಪು ತರಬೇತಿ ವೇಳೆ ಗುಂಡು ಹಾರಿಸಿದ್ದ ಶಬ್ದ ಕೇಳಿ ಬಂದಿತ್ತು. ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ನಕ್ಸಲರು ಸಕ್ರಿಯವಾಗಿದ್ದ ಪತ್ತೆಯಾಗಿತ್ತು. ಅಲ್ಲಿಂದ 2024ರವರೆಗೆ ಅನೇಕ ಮಂದಿ ನಕ್ಸಲರು ಹಾಗೂ ಅವರ ದಾಳಿಗೆ ಭದ್ರತಾ ಸಿಬ್ಬಂದಿ, ಗ್ರಾಮಸ್ಥರು ಸಾವಿಗೀಡಾಗಿದ್ದಾರೆ. ಸದ್ಯ ದೇಶದ ಗೃಹ ಮಂತ್ರಿಯ ನಕ್ಸಲ್ ಮುಕ್ತ ಭಾರತ ಘೋಷಣೆಯ ಹೊರತಾಗಿಯು ಕರ್ನಾಟಕ-ಆಂಧ್ರ ಗಡಿ ಭಾಗದಲ್ಲಿ ನಕ್ಸಲರ ಚಟುವಟಿಕೆ ವರದಿ ಆಗಿದೆ. ಈ ಬಗ್ಗೆ ತನಿಖೆ ಯಿಂದ ಸಂಪೂರ್ಣ ಮಾಹಿತಿ ತಿಳಿಯಬೇಕಿದೆ.
ಕರ್ನಾಟಕದಲ್ಲಿ ಮೃತಪಟ್ಟ ನಕ್ಸಲರ ಸಂಖ್ಯೆ
2025ರಲ್ಲಿ ಕರ್ನಾಟಕವು ನಕ್ಸಲರು ಮುಕ್ತ ರಾಜ್ಯವಾಯಿತು. ಅಲ್ಲಿಯವರೆಗೆ ಹಿಂದಿನ 25 ವರ್ಷಗಳಲ್ಲಿ ಪ್ರಮುಖ ಕಾರ್ಯಾಚರಣೆ ನಡೆದಿದ್ದು, ಮೃತರ ಸಂಖ್ಯೆ 36ರಂದು ವರದಿ ಹೇಳುತ್ತದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಜನರು ಹಗಲು, ರಾತ್ರಿ ಓಡಾಡುವುದು ಕಷ್ಟಕರವಾಗಿತ್ತು. ಎಲ್ಲೆಂದರಲ್ಲಿ ಜನಸಾಮಾನ್ಯರನ್ನು ಹಿಡಿದು ಹಣ, ಒಡವೆ ದೋಚುತ್ತಿದ್ದರು. ಇದರಿಂದ ಜನರು ಬದುಕಿದ್ದು, ಸತ್ತಂತಿದ್ದರು.
* ಮೃತಪಟ್ಟವರ ಪೊಲೀಸ್ (ಭದ್ರತಾ ಸಿಬ್ಬಂದಿ)- 10ಮಂದಿ
* ನಕ್ಸಲರ ಸಂಖ್ಯೆ: 17 ಮಂದಿ
* ಸಾಮಾನ್ಯ ಜನರು: 9 ಮಂದಿ


Click it and Unblock the Notifications
