ರಮೇಶ ಜಾರಕಿಹೊಳಿ ಈಗ್ಯಾಕೆ ಸೈಲೆಂಟ್ ಆಗಿದ್ದಾರೆ ಅಂತ ಅವರನ್ನೇ ಕೇಳಬೇಕು: ಲಕ್ಷ್ಮಣ ಸವದಿ
ಬೆಳಗಾವಿ, ಮೇ30: ನನಗೆ ಕೇಳಿದರೆ ಏನು ಉತ್ತರ ಸಿಗುತ್ತದೆ. ಅವರನ್ನೇ ಕೇಳಬೇಕು. ಚುನಾವಣೆಯಲ್ಲಿ ಬಹಳ ಓಡಾಡುತ್ತೀದೀರಿ, ಈಗ್ಯಾಕೆ ಸೈಲೆಂಟ್ ಆಗಿದ್ದಾರೆ ಎಂಬುವುದನ್ನು ಅವರನ್ನೇ ಕೇಳಬೇಕು ಎಂದು ರಮೇಶ ಜಾರಕಿಹೊಳಿ ಸೈಲೆಂಟ್ ಆಗಿದ್ದರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಶಾಸಕ ಲಕ್ಷ್ಮಣ್ ಸವದಿ ಉತ್ತರಿಸಿದರು.
ಈ ಕುರಿತು ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಸಚಿವರು ಆಗಬೇಕು ಎಂಬ ಆಸೆ ಇರುತ್ತದೆ. ರಾಜಕಾರಣದಲ್ಲಿ ಯಾರೂ ಸನ್ಯಾಸರಲ್ಲ, ಆ ಆಸೆ ಪಡುವುದರಲ್ಲಿ ತಪ್ಪೂ ಏನಿಲ್ಲ. ಆದರೆ, ಅನಿವಾರ್ಯತೆ ಇವತ್ತು 34ಕ್ಕಿಂತ ಹೆಚ್ಚು ಮಂತ್ರಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಮೊದಲು ಶಾಸಕ ಆಗಬೇಕೆಂದು, ಆ ಮೇಲೆ ಮಂತ್ರಿ ಯಾಗಬೇಕೆಂದಿರುತ್ತದೆ. ಮಂತ್ರಿ ಆದ ಮೇಲೆ ಒಳ್ಳೆಯ ಖಾತೆ ಸಿಗಬೇಕೆಂದು ಇರುತ್ತದೆ. ಮಂತ್ರಿ, ಆದಮೇಲೆ ಉಪಮುಖ್ಯಮಂತ್ರಿ ಆಗಬೇಕು. ಬಳಿಕ ಸಿಎಂ ಆಗಬೇಕು ಈ ರೀತಿ ಬಯಕೆ ಸಹಜವಾಗಿ ಎಲ್ಲರಲ್ಲೂ ಮೂಡಿಯೇ ಇರುತ್ತದೆ. ಸಾಕಷ್ಟು ಜನ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ವರ್ಷಗಳಿಂದ ಇದ್ದು, ಪಕ್ಷಕ್ಕೆ ತಮ್ಮ ಕೊಡುಗೆ ನೀಡಿದ ಬಹಳಷ್ಟುಜನ ಆರಿಸಿ ಬಂದಿದ್ದಾರೆ. ಹೀಗಾಗಿ ಹೊಸಬರಿಗೆ ಈಗ ಅವಕಾಶ ಸಿಕ್ಕಿರಲಿಕ್ಕಿಲ್ಲ ಎಂದು ಹೇಳಿದರು.
ಇನ್ನೂ ನಾನು ಸಚಿವನಾಗಿಲ್ಲ ಎಂಬ ನಮಗೇನೂ ಕೊರಗು ಇಲ್ಲ. ರಾಷ್ಟ್ರೀಯ ಪಕ್ಷ ಮತ್ತು ಆಡಳಿತ ಪಕ್ಷದ ಶಾಸಕನಾಗಿದ್ದೇನೆ. ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಲು ಅವಕಾಶ ಇದೆ. ಆ ಅವಕಾಶ ಬಳಸಿಕೊಂಡು ನಮ್ಮ ಕ್ಷೇತ್ರದ ಕೆಲಸ ಮಾಡುತ್ತೇವೆ. ಜನ ನಮಗೆ ಬಹಳ ದೊಡ್ಡ ಪ್ರಮಾಣದಲ್ಲಿ ಮತ ಹಾಕಿ ಆಯ್ಕೆ ಮಾಡಿದ್ದಾರೆ. ನನ್ನ ಮೇಲೆ ಭರವಸೆ ಮತ್ತು ನಿರೀಕ್ಷೆ ಇದೆ. ಆ ನಿರೀಕ್ಷೆ ಮಟ್ಟದಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ರಾಜಕಾರಣದಲ್ಲಿ ದೂರದೃಷ್ಟಿ, ತಾಳ್ಮೆ ಎರಡೂ ಇರಬೇಕಾಗುತ್ತದೆ. ಅನೇಕ ಜನ ಶಾಸಕರಾಗಬೇಕು ಅಂತಾ ಜೀವನ ಪರ್ಯಂತ ಹೋರಾಟ ಮಾಡಿದರೂ ಆಗಲಿಲ್ಲ. ಎಷ್ಟೋ ಜನ ಶಾಸಕರಾಗುತ್ತಾರೆ. ಮಂತ್ರಿ ಆಗಲು ಆಗುವುದಿಲ್ಲ. ನಾನು ಇತ್ತೀಚೆಗೆ ಪಕ್ಷ ಸೇರಿದಂತವರು. ಜನರ ಬಯಕೆ ಹಾಗೂ ಅಭಿಮಾನಿಗಳ ಬಯಕೆ ಸಹಜ. ನಮ್ಮ ನಾಯಕರು ಮಂತ್ರಿ ಆಗಬೇಕು ಅಂತಾ ಎಲ್ಲ ಶಾಸಕರ ಅಭಿಮಾನಿಗಳಲ್ಲೂ ಅಪೇಕ್ಷೆ ಇರುತ್ತದೆ. ಆದರೆ, 34 ಜನರ ಸೀಮಿತ ಮಾಡುವ ಸಂದರ್ಭದಲ್ಲಿ ಅನಿವಾರ್ಯವಾಗಿ ಎಲ್ಲವೂ ಈಡೇರಿಸಲು ಕಷ್ಟಸಾಧ್ಯ ಎಂದು ಹೇಳಿದರು.

ಆರ್‌ಎಸ್‌ಎಸ್ ನಿಷೇಧದ ಅವಶ್ಯಕತೆ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
ಸಂಘಟನೆಗಳ ಮೇಲೆ ನಿಷೇಧ ಹೇರುವುದರಿಂದ ಪರಿಹಾರ ಸಾಧ್ಯವಿಲ್ಲ. ಸಂಘಟನೆಯಲ್ಲಿರುವವರನ್ನು ತಿದ್ದುವ ಕೆಲಸ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸಂಘಟನೆಗಳ ಮೇಲೆ ನಿಷೇಧ ಹೇರುವುದರಿಂದ ಪರಿಹಾರ ಸಾಧ್ಯವಿಲ್ಲ.ಆ ನಿಟ್ಟಿನಲ್ಲಿಆರ್‌ಎಸ್‌ಎಸ್‌ನಲ್ಲಿರುವ ಶೂದ್ರರನ್ನು ತಿದ್ದುವ ಕೆಲಸ ಆಗಬೇಕಿದೆ ಎಂದ ಅವರು, ಆರ್‌ಎಸ್‌ಎಸ್ ಆಗಲಿ ಅಥವಾ ಭಜರಂಗ ದಳವಾಗಲಿ ಅವುಗಳ ನಿಷೇಧ ಅವಶ್ಯತೆ ಸದ್ಯಕ್ಕಿಲ್ಲ.
ಸಂಘ ನಿಷೇಧ ಮಾಡುವುದರಿಂದ ಮತ್ತೊಂದು ಸಂಘ ಹುಟ್ಟಿಕೊಳ್ಳುತ್ತದೆ. ಇದರಿಂದ ಯಾವುದೇ ಪ್ರಯೋಜವಾಗದು. ಅದರ ಬದಲು ಅಂತಹ ಯಾವುದೇ ಸಂಘಟನೆಗಳಲ್ಲಿರುವ ಶೂದ್ರರ ಮನಸ್ಸು ಬದಲಾಯಿಸಬೇಕಿದೆ. ಅವರಿಗೆ ಬಸವಣ್ಣ, ಡಾ. ಬಿ ಆರ್ ಅಂಬೇಡ್ಕರ್ ಅವರ ವಿಚಾರಗಳನ್ನು ತಿಳಿಸಿ ತಿದ್ದಬೇಕು ಎಂದು ತಿಳಿಸಿದರು.
ಇನ್ನೂ ಗೋ ಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಗೋ ಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಸೇರಿದಂತೆ ಯಾವುದೇ ಕಾಯಿದೆಗಳನ್ನು ಹಿಂಪಡೆಯುವ ವಿಷಯವಾಗಿ ಏಕಾಏಕಿ ನಿರ್ಧಾರ ಕೈಗೊಳ್ಳುವುದಿಲ್ಲ. ಯಾವುದೇ ಕಾಯಿದೆ ಆಗಿದ್ದರೂ ಆ ಕುರಿತು ಸರಕಾರ ಮತ್ತು ಪಕ್ಷದ ಮಟ್ಟದಲ್ಲಿಸುದೀರ್ಘ ಚರ್ಚೆ ನಡೆಯಬೇಕು.
ಗೋ ಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕುರಿತು ಚರ್ಚೆಯ ನಂತರ ಸಿಗುವ ಸಾಧಕ-ಬಾಧಕಗಳನ್ನು ಪರಿಗಣಿಸಿದಾಗ ಮಾತ್ರ ಸೂಕ್ತ ನಿರ್ಧಾರಕ್ಕೆ ಬರಲು ಸಾಧ್ಯ. ಹಾಗಾಗಿ ಕಾಯಿದೆಗಳನ್ನು ಹಿಂಪಡೆಯುವ ನಿರ್ಧಾರ ಸದ್ಯಕ್ಕೆ ನಮ್ಮ ಮುಂದಿಲ್ಲ ಎಂದ ಅವರು, ಇನ್ನೂ ಗ್ಯಾರಂಟಿ ಘೋಷಣೆಗಳ ಕುರಿತು ಮಾತನಾಡಿದ ಅವರು, ಈಗಾಗಲೇ ನಾವು ಭರವಸೆಯನ್ನ ಕೊಟ್ಟಿದ್ದೇವೆ, ಈ ಗ್ಯಾರಂಟಿ ಘೋಷಣೆಗಳನ್ನ ಈಡೇರಿಸುತ್ತೇವೆ ಎಂದು ಹೇಳಿದರು.












Click it and Unblock the Notifications