Government employee; ಭ್ರಷ್ಟಾಚಾರ ಕೇಸ್ ಬಗ್ಗೆ ಹೈಕೋರ್ಟ್ ಸೂಚನೆ ಏನು?
ಬೆಂಗಳೂರು, ಜುಲೈ 28; ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರ ವಿರುದ್ಧ ದಾಖಲಾಗುವ ಭ್ರಷ್ಟಾಚಾರ ಆರೋಪದ ಪ್ರಕರಣಗಳು ಹೆಚ್ಚಾಗುತ್ತಿವೆ. ಅದಕ್ಕೆ ಕಡಿವಾಣ ಹಾಕಲು ಖಾಸಗಿ ದೂರುಗಳ ಸಂಬಂಧ ಪೂರ್ವಾನುಮತಿ ಕಡ್ಡಾಯವಿದ್ದರೂ ಸಹ ಅದನ್ನು ಪಾಲನೆ ಮಾಡುತ್ತಿಲ್ಲ.
ಹಾಗಾಗಿ ಇದೀಗ ಕರ್ನಾಟಕ ಹೈಕೋರ್ಟ್ ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆ ಸೆಕ್ಷನ್ 17(ಎ) ಪ್ರಕಾರ ಸಕ್ಷಮ ಪ್ರಾಧಿಕಾರದ ಅನುಮೋದನೆಯಿಲ್ಲದೆ ಸರ್ಕಾರಿ ನೌಕರರ ವಿರುದ್ಧ ತನಿಖೆ ನಡೆಸುವಂತಿಲ್ಲ ಎಂದು ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಯಾಗಿದ್ದ ವಿ. ಆಶೋಕ್ ಖಾಸಗಿ ದೂರು ಪರಿಗಣಿಸಿ ತನ್ನ ವಿರುದ್ಧ ತನಿಖೆಗೆ ಆದೇಶಿಸಿರುವ ಸೆಷನ್ಸ್ ನ್ಯಾಯಾಲಯ ಆದೇಶದ ಕಾನೂನು ಬದ್ದತೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ನಿರ್ದೇಶನ ನೀಡಿದೆ.
ಹೈಕೋರ್ಟ್ ಆದೇಶವೇನು?; ಕೆಲವು ಸಂದರ್ಭಗಳನ್ನು ಹೊರತು ಪಡಿಸಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಸರ್ಕಾರಿ ಅಧಿಕಾರಿಯ ವಿರುದ್ಧ ಪೊಲೀಸ್ ಅಧಿಕಾರಿಗಳು ವಿಚಾರಣೆ ಅಥವಾ ತನಿಖೆ ನಡೆಸುವಂತಿಲ್ಲ ಎಂಬ ಷರತ್ತನ್ನು ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆ ಸೆಕ್ಷನ್ 17(ಎ)ಕ್ಕೆ 2018ರಲ್ಲಿ ಸೇರಿಸಲಾಗಿದೆ.
ಖಾಸಗಿ ದೂರುಗಳ ಆಧಾರದಲ್ಲಿ ವಿಚಾರಣಾ ನ್ಯಾಯಾಲಯ ಸರ್ಕಾರಿ ನೌಕರರ ವಿರುದ್ದ ವಿನಾ ಕಾರಣ ಕಾನುನು ಕ್ರಮಕ್ಕೆ ಮುಂದಾಗಿ ಕಿರಿಕಿರಿ ಉಂಟು ಮಾಡುವುದನ್ನು ತಪ್ಪಿಸುವುದಕ್ಕಾಗಿ ಸೆಕ್ಷನ್ 17ಎ ಅಡಿಯಲ್ಲಿ ರಕ್ಷಣೆ ನೀಡಲಾಗಿದೆ. ಆದರೆ, ಈ ಪ್ರಕರಣದಲ್ಲಿ ಪೂರ್ವಾನುಮತಿ ಇಲ್ಲದೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿರುವ ನ್ಯಾಯಪೀಠ ಪ್ರಕರಣವನ್ನು ರದ್ದು ಪಡಿಸಿ ಆದೇಶಿಸಿದೆ.
ನಿಯಮ ಪಾಲನೆ ಕಡ್ಡಾಯ; ಸೆಕ್ಷನ್ 17ಎ ರ ಅಡಿಯಲ್ಲಿ ಸಕಾರಿ ನೌಕರರಿಗೆ ನೀಡಿರುವ ರಕ್ಷಣೆ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಟ್ಟುನಿಟ್ಟಾಗಿ ಪಾಲಿಸಬೇಕು. ವಿಫಲವಾದಲ್ಲಿ ಕಾನೂನು ದುರ್ಬಳಕೆ ಮಾಡಿದಂತಾಗುತ್ತದೆ. ಆದರೂ ಈ ಅವಕಾಶವನ್ನು ತಪ್ಪಿತಸ್ಥರು ರಕ್ಷಣೆಗೆಗಾಗಿ ಬಳಕೆ ಮಾಡುತ್ತಾರೆ ಎಂಬುದಾಗಿ ಪರಿಗಣಿಸಲಾಗುವುದಿಲ್ಲ. ಆದರೆ, ಮುಗ್ದರಿಗೆ ನೀಡುವ ರಕ್ಷಣೆಯಾಗಿದೆ. ಹೀಗಾಗಿ ಅದನ್ನು ಪಾಲಿಸುವುದು ಕಡ್ಡಾಯವಾಗಿರಲಿದೆ ಎಂದು ತಿಳಿಸಿದೆ.
ಅಲ್ಲದೆ, ಭ್ರಷ್ಟಾಚಾರ ಆರೋಪ ಪ್ರಕರಣಗಳಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸಿಆರ್‌ಪಿಸಿ ಸೆಕ್ಷನ್ 154(1)ರ ಪ್ರಕಾರ ಸರ್ಕಾರಿ ನೌಕರರ ವಿರುದ್ಧ ಮೊದಲು ಸ್ಥಳೀಯ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಬೇಕು. ದೂರು ದಾಖಲಾಗದಿದ್ದಲ್ಲಿ ಲೋಕಾಯುಕ್ತ ವರಿಷ್ಠಾಧಿಕಾರಿಗಳಿಗೆ ದೂರು ದಾಖಲಿಸಬೇಕು ಎಂಬುದಾಗಿದೆ.
ಅಲ್ಲದೆ, ಸುಪ್ರೀಂಕೋರ್ಟ್ ತೀರ್ಪುಗಳ ಪ್ರಕಾರ ದೂರು ನೀಡುವವರು ತಮ್ಮ ದೂರಿಗೆ ಸಂಬಂಧಿಸಿದಂತೆ ಪ್ರಾಮಾಣಿಕೃತ ಹೇಳಿಕೆಗಳನ್ನು ದಾಖಲಿಸಬೇಕು. ಈ ಕಾರ್ಯ ಮಾಡದಿದ್ದಲ್ಲಿ ಪ್ರಕರಣ ನ್ಯಾಯಾಲಯಗಳು ಪುರಸ್ಕರಿಸಲಾಗುವುದಿಲ್ಲ ಎಂಬುದಾಗಿ ಹೇಳಿದೆ. ಆದರೆ, ಈ ಪ್ರಕರಣ ಸಂಬಂಧ ದಾಖಲಿಸಿರುವ ದೂರಿನಲ್ಲಿ ಎಲ್ಲಿಯೂ ಲೊಕಾಯುಕ್ತ ಪೊಲೀಸರಿಗೆ ದೂರು ನೀಡಲು ಪ್ರಯತ್ನ ಮಾಡಲಾಗಿದೆ ಎಂಬ ಅಂಶ ಇಲ್ಲ.
ಅಲ್ಲದೆ, ದೂರುದಾರರ ತಮ್ಮ ಹಾಗೂ ತಮ್ಮ ಪರ ವಕೀಲರ ಕುರಿತಂತೆ ಯಾವುದೇ ಪ್ರಮಾಣ ಪತ್ರವನ್ನೂ ಸಲ್ಲಿಸಿಲ್ಲ. ಹೀಗಾಗಿ ಪೊಲೀಸರಿಗೆ ದೂರು ಸಲ್ಲಿಸಲು ಮುಂದಾಗದೆ ನೇರವಾಗಿ ಖಾಸಗಿ ದೂರು ದಾಖಲಿಸಲು ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಚಿಂತಾಮಣಿ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಚಿಕ್ಕಬಳ್ಳಾಪುರ ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆ ಕುರಿತು ಮಾಹಿತಿ ಪಡೆದುಕೊಂಡಿದ್ದರು. ಈ ಅಂಶಗಳ ಆಧಾರದಲ್ಲಿ ಕೆಲವು ಅಧಿಕಾರಿಗಳ ಭ್ರಷ್ಟಾಚಾರ ಆರೋಪದಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ದೂರು ನೀಡುವ ಬದಲು ಸೆಷನ್ಸ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ ಅರ್ಜಿದಾರರ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಸಿಬಿಗೆ ಆದೇಶಿಸಿತ್ತು. ಈ ಆದೇಶವನ್ನು ರದ್ದು ಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.












Click it and Unblock the Notifications