Government Employees: ಸರ್ಕಾರಿ ನೌಕರರ OPS ಮರು ಜಾರಿ: ಅಧಿಕೃತ ಆದೇಶಕ್ಕೆ ಮುಹೂರ್ತ ಫಿಕ್ಸ್
ಬೆಂಗಳೂರು: ಕರ್ನಾಟಕದಲ್ಲಿ ಹಳೆ ಪಿಂಚಣಿ ಯೋಜನೆ ಮರು ಜಾರಿ ರಾಜ್ಯ ಸರ್ಕಾರಿ ನೌಕರರ ಬಹು ದಿನದ ಬೇಡಿಕೆಯಾಗಿದೆ. ಸರ್ಕಾರಕ್ಕೆ ಆಗುತ್ತಿರುವ ಆರ್ಥಿಕ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ 2004ರಲ್ಲಿ ಕೇಂದ್ರ ಸರ್ಕಾರ ಹಳೆ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ದೇಶದಾದ್ಯಂತ ಅನ್ವಯಿಸಿತು. ಅಂದಿನಿಂದಲೂ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆಯ ಮರು ಜಾರಿಗೆ ಪಟ್ಟು ಹಿಡಿದ್ದಾರೆ.
ಸರ್ಕಾರಿ ನೌಕರರು ನಿವೃತ್ತಿಯ ನಂತರದ ಬದುಕಿಗೆ ಭದ್ರತೆ ಒದಗಿಸುವ ಹಳೆ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಸರ್ಕಾರ ನೇಮಿಸಿದ್ದ ಸಮಿತಿ ಈಗ ಅಂತಿಮ ಹಂತಕ್ಕೆ ತಲುಪಿದೆ. ವಿಧಾನಸೌಧದಲ್ಲಿ ನಡೆದ ಮಹತ್ವದ ಸಭೆಯಲ್ಲಿ, ರಾಜ್ಯ ಸರ್ಕಾರದ ಎನ್‌ಪಿಎಸ್ ಅಧ್ಯಯನ ಸಮಿತಿಯ ಅಧ್ಯಕ್ಷೆ ಉಮಾ ಮಹದೇವನ್ ಅವರು ಸರ್ಕಾರಿ ನೌಕರರ ಸಂಘಕ್ಕೆ ಭರವಸೆ ನೀಡಿದ್ದಾರೆ. ಹಳೆ ಪಿಂಚಣಿ ಯೋಜನೆ (OPS) ಜಾರಿ ಸಂಬಂಧ ರಚಿಸಲಾದ ಸಮಿತಿಯು ತನ್ನ ಅಂತಿಮ ವರದಿಯನ್ನು ಇನ್ನೊಂದು ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಿದೆ.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ನೇತೃತ್ವದ ನಿಯೋಗವು, ಎನ್‌ಪಿಎಸ್ ರದ್ದುಪಡಿಸಿ ಒಪಿಎಸ್ ಜಾರಿಗೊಳಿಸುವಂತೆ ಪ್ರಬಲವಾದ ದಾಖಲೆಗಳನ್ನು ಸಮಿತಿಗೆ ಸಲ್ಲಿಸಿದೆ. ಎನ್‌ಪಿಎಸ್ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಐಎಎಸ್ ಅಧಿಕಾರಿಗಳ ಸಮಿತಿಯು ಒಂದು ತಿಂಗಳಲ್ಲಿ ವರದಿ ನೀಡಲಿದೆ ಎಂದು ಸಿ.ಎಸ್.ಷಡಾಕ್ಷರಿ ಹೇಳಿದ್ದಾರೆ. ಸಮಿತಿಯ ಅಧ್ಯಕ್ಷರಾದ ಉಮಾ ಮಹಾದೇವನ್ ಹಾಗೂ ಆರ್ಥಿಕ ಇಲಾಖೆಯ ಕಾರ್ಯದರ್ಶಿ ಎಂ.ಟಿ.ರೇಜು ಅವರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಎನ್.ಪಿ.ಎಸ್. ಅಧ್ಯಯನ ಸಮಿತಿಯು ಈಗಾಗಲೇ ಒ.ಪಿ.ಎಸ್. ಮರುಜಾರಿಗೊಳಿಸಿರುವ ಐದು ರಾಜ್ಯಗಳಲ್ಲಿ ರಾಜಸ್ಥಾನ, ಹಿಮಾಚಲ ಪ್ರದೇಶ, ಮತ್ತು ಆಂಧ್ರ-ತೆಲಂಗಾಣ ರಾಜ್ಯಗಳಿಗೆ ಭೇಟಿ ನೀಡಿ ಆಯಾ ರಾಜ್ಯಗಳಲ್ಲಿ ಎನ್.ಪಿ.ಎಸ್. ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಿರುವ ಸಂಬಂಧ ಅಧ್ಯಯನ ನಡೆಸಿ ಮಾಹಿತಿಯನ್ನು ಸಂಗ್ರಹಿಸಿದ್ದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ಧತೆ ನಡೆಸಿರುತ್ತದೆ.
ಅದರಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸಮಿತಿಯ ಸಭೆಯಲ್ಲಿ ಈ ಕೆಳಕಂಡಂತೆ ಮಾಹಿತಿಯನ್ನು ಸಲ್ಲಿಸುವ ಮೂಲಕ ಹಳೆ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ದಾಖಲೆ ಹಾಗೂ ಮಾಹಿತಿಗಳೊಂದಿಗೆ ಮನವಿ ಮಾಡಿರುತ್ತದೆ.
ಸಂಘವು ಸಲ್ಲಿಸಿದ ಪೂರಕ ಮಾಹಿತಿಯನ್ನು ಅಲಿಸಿದ ಸಮಿತಿಯು, ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಮರುಜಾರಿಗೊಳಿಸಲು ಪೂರಕವಾಗುವ ಸಮಗ್ರ ಶಿಫಾರಸ್ಸು ವರದಿಯನ್ನು ಅತಿ ಶೀಘ್ರದಲ್ಲಿಯೇ ಸರ್ಕಾರಕ್ಕೆ ಸಲ್ಲಿಸುವ ಭರವಸೆಯನ್ನು ನೀಡಿರುತ್ತದೆ. ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ರವರು ಓ.ಪಿ.ಎಸ್. ಮರು ಜಾರಿಗೊಳಿಸುವಂತೆ ಶಿಫಾರಸ್ಸು ಮಾಡಲು ಸಮಿತಿಗೆ ಮನವಿ ಮಾಡಿ ಪೂರಕ ಮಾಹಿತಿಗಳನ್ನು ಸಭೆಗೆ ಮಂಡಿಸಿದರು.
ಪೂರಕ ಅಂಶಗಳು
* ಭಾರತ ಸರ್ಕಾರ NPS ಯೋಜನೆಯನ್ನು 01-04-2004ರ ಜಾರಿಗೊಳಿಸಿರುತ್ತದೆ.
* ಕರ್ನಾಟಕ ಸರ್ಕಾರ 01-04-2006ರ ನಂತರ ಜಾರಿಗೊಳಿಸಿದೆ.
* ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇದುವರೆವಿಗೂ ಈ ಯೋಜನೆ ಜಾರಿಗೆ ಬಂದಿರುವುದಿಲ್ಲ.
* ಪಶ್ಚಿಮ ಬಂಗಾಳ ರಾಜ್ಯಗಳು ಕೇಂದ್ರ ಸೇವೆಗಳಿಗೆ ಮಾತ್ರ ಯೋಜನೆಯನ್ನೇ ಮುಂದುವರೆಸಿರುತ್ತವೆ.
* ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು NPS ಬದಲಾಗಿ CPS [Contributary Pension Scheme) ಜಾರಿಗೊಳಿಸಿರುತ್ತೇವೆ. ಈಗ [ Guarantee Pension Scheme] ಆಗಿ ಪರಿವರ್ತನೆ ಆಗಿದೆ.
* ಭಾರತ ಸರ್ಕಾರ 2023ರಲ್ಲಿ ನೂತನ ಪಿಂಚಣಿ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ಯೋಜನೆಯೆಂದು ಮರು ಪದನಾಮೀಕರಿಸಿರುತ್ತದೆ.
* ಎನ್‌ಪಿಎಸ್ ಯೋಜನೆಯಲ್ಲಿ ನಮ್ಮ ರಾಜ್ಯ ಸರ್ಕಾರಿ ನೌಕರರು ತಮ್ಮ ಮೂಲವೇತನ ಮತ್ತು ಡಿಎ ಒಟ್ಟು ಮೌಲ್ಯದಲ್ಲಿ ಶೇಕಡಾ 10 ರಷ್ಟು ವಂತಿಗೆಯನ್ನು ಹಾಗೂ ಸರ್ಕಾರ ಶೇಕಡಾ 14 ರಷ್ಟು ವಂತಿಗೆಯನ್ನು ಪಾವತಿಸುತ್ತದೆ. ಇದರಿಂದ ಒಟ್ಟು 24% ವಂತಿಗೆ ನೌಕರರ Non-withdrawable ಖಾತೆಗೆ ಜಮಾ ಆಗುತ್ತದೆ.
* ಎನ್‌ಪಿಎಸ್ ಖಾತೆಗೆ ಜಮೆಯಾಗುವ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತಿದ್ದು, ಹೂಡಿಕೆಯಾಗುವ ಹಣಕ್ಕೆ ಯಾವುದೇ ನಿರ್ದಿಷ್ಟ ಭದ್ರತೆಯಿರುವುದಿಲ್ಲ. ಹಾಗೂ ಮಾರುಕಟ್ಟೆಯ ಏರಿಳಿತಗಳಿಗೆ ಒಳಪಟ್ಟಿರುತ್ತದೆ.
* ಕಡಿಮೆ ಸೇವಾವಧಿಯಿರುವ ಹಾಗೂ ಸಿ ಮತ್ತು ಡಿ ದರ್ಜೆಯ ನೌಕರರಿಗೆ ಈ ಯೋಜನೆಯಿಂದ ಅತೀ ಕಡಿಮೆ ಮಾಸಿಕ ನಿವೃತ್ತಿ ವೇತನ ದೊರೆಯುತ್ತಿದೆ.
* ಎನ್‌ಪಿಎಸ್ ಯೋಜನೆಯಿಂದ ಸರ್ಕಾರಿ ನೌಕರನ ನಿವೃತ್ತಿ ನಂತರದ ಸಾಮಾಜಿಕ ಹಾಗೂ ಆರ್ಥಿಕ ನಿರ್ವಹಣೆಗೆ ನಿರ್ದಿಷ್ಟ ಭದ್ರತೆ ಇರುವುದಿಲ್ಲ.
* ಎನ್‌ಪಿಎಸ್ ಯೋಜನೆಯಲ್ಲಿ ಸರ್ಕಾರಿ ನೌಕರರಿಗೆ ಯಾವುದೇ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಇಲ್ಲದೆ ಇರುವುದರಿಂದ ದೇಶದಾದ್ಯಂತ ಈ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಹೋರಾಟಗಳು ನಿರಂತರವಾಗಿ ನಡೆಯುತ್ತಿವೆ.












Click it and Unblock the Notifications