ಪುಸ್ತಕ ಪರಿಷ್ಕರಣೆ, ಎಪಿಎಂಸಿ, ಮತಾಂತರ ನಿಷೇಧ ಕಾಯ್ದೆ: ಸಿದ್ದರಾಮಯ್ಯ ಸಂಪುಟದ ಮಹತ್ವದ ನಿರ್ಧಾರಗಳು
ಬೆಂಗಳೂರು, ಜೂನ್. 16: ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದೆ. ಪಠ್ಯಪುಸ್ತಕ ಪರಿಷ್ಕರಣೆ, ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆಯ ತಿದ್ದುಪಡಿಯನ್ನು ರದ್ದುಪಡಿಸಲು ಸಂಪುಟ ಅನುಮೋದನೆ ನೀಡಿದೆ.
ಪಿಎಂಸಿ ಕಾಯ್ದೆಗಳನ್ನು ರದ್ದು ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಅಲ್ಲದೆ, ಹಿಂದಿನ ಸರ್ಕಾರದ ಮಾಡಿದ್ದ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ರದ್ದು ಮಾಡಿ, ಈ ಹಿಂದೆ ಪಠ್ಯವನ್ನು ಮುಂದುವರಿಸಲು ಸಂಪುಟ ತೀರ್ಮಾನಿಸಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು
ಪಠ್ಯಪುಸ್ತಕ ಪರಿಷ್ಕರಣೆಗೆ ಸಮಿತಿ ರಚನೆ ಹಾಗೂ ಪೂರಕ ಪುಸ್ತಕ ವಿತರಣೆ
*ಈ ವರ್ಷದ ಪಠ್ಯಪುಸ್ತಕ ಈಗಾಗಲೇ ಮಕ್ಕಳಿಗೆ ವಿತರಿಸಲಾಗಿದೆ. ಹಾಗಾಗಿ ಮಕ್ಕಳಿಗೆ ತಪ್ಪು ತಿಳುವಳಿಕೆ ಹೋಗುವಂಥದ್ದನ್ನು ತೆಗೆದುಹಾಕಿ, ಅವಶ್ಯಕವಾಗಿ ಕಲಿಯಬೇಕಾದ ಪಾಠಗಳ 15 ಪುಟಗಳ ಪೂರಕ ಪುಸ್ತಕ ನೀಡಲು ಸಂಪುಟ ಸಭೆಯು ತೀರ್ಮಾನಿಸಿದೆ.
*5 ಜನ ಸಾಹಿಗಳ ತಜ್ಞರ ಸಮಿತಿಯು ಕನ್ನಡ, ಸಮಾಜ ವಿಜ್ಞಾನ ವಿಷಯಗಳಲ್ಲಿ 6 ರಿಂದ 10 ರವರೆಗಿನ ತರಗತಿಗಳ ಪದ ಹಾಗೂ ವಾಕ್ಯಗಳ ಬದಲಾವಣೆಗಳನ್ನು ಮಾತ್ರ ಮಾಡಿದ್ದು, ಇದಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪಿಯುಸಿ ಸೇರಿದಂತೆ 75,000 ಶಾಲೆಗಳಿಗೆ ಈ ಪುಸ್ತಕಗಳನ್ನು ವಿತರಣೆ ಮಾಡಲಾಗುವುದು.
*ಹಿಂದಿನ ಸರ್ಕಾರ ಮಾಡಿದ್ದ ಬದಲಾವಣೆಗಳನ್ನು ಪರಿಷ್ಕರಣೆ ಮಾಡಲಾಗಿದೆ ಹಾಗೂ ಶಿಕ್ಷಕರಿಗೂ ಏನು ಹೇಳಿಕೊಡಬೇಕು ಎಂದು ತಿಳಿಸುವ ಮಾರ್ಗಸೂಚಿಗಳನ್ನು ಇದು ಹೊಂದಿರಲಿದೆ.
ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದು ಕಡ್ಡಾಯ
* ಸಂವಿಧಾನದ ಆಶಯಗಳನ್ನು, ಸಂವಿಧಾನದ ರಚನೆಯ ಮೂಲ ಉದ್ದೇಶಗಳನ್ನು ತಿಳಿಯಲು ಹಾಗೂ ಎಲ್ಲಾ ಜಾತಿ, ಧರ್ಮಗಳನ್ನು ಸಮಾನವಾಗಿ ಕಾಣಲು ಅನುವು ಮಾಡಿಕೊಡಲು ಎಲ್ಲಾ ಅನುದಾನಿತ, ಅನುದಾನ ರಹಿತ, ಸರಕಾರಿ, ಖಾಸಗಿ ಶಾಲಾ - ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಕಡ್ಡಾಯವಾಗಿ ಓದಬೇಕು ಹಾಗೂ ಎಲ್ಲಾ ಸರ್ಕಾರಿ ಕಚೇರಿ/ ಇಲಾಖೆಗಳಲ್ಲಿ ಪೀಠಿಕೆಯ ಚಿತ್ರವನ್ನು ಹಾಕಲು ಸಂಪುಟವು ಒಪ್ಪಿಗೆ ನೀಡಿದೆ.
* ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ರದ್ದು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
*ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣ ವಿಧೇಯಕ-2023ಕ್ಕೆ ಸಂಪುಟ ಅನುಮೋದನೆ ನೀಡಿದೆ. ಈ ಕಾಯ್ದೆಗೆ ಹಿಂದಿನ ಸರ್ಕಾರ 2020-22ರಲ್ಲಿ ತಂದಿದ್ದ ತಿದ್ದುಪಡಿಯನ್ನು ರದ್ದು ಪಡಿಸಲಾಗಿದೆ.
* ಅನ್ನಭಾಗ್ಯ ಯೋಜನೆ ಜಾರಿಗೆ ನೆರೆರಾಜ್ಯಗಳಿಂದ ಅಕ್ಕಿ ಖರೀದಿಸಲು ನಿರ್ಧಾರ.
* ನಾಡಿನ ರೈತರ ಹಿತದೃಷ್ಟಿಯಿಂದ ಎಪಿಎಂಸಿ ಕಾಯ್ದೆಯ ತಿದ್ದುಪಡಿಯನ್ನು ರದ್ದುಪಡಿಸಲು ಸಂಪುಟ ಅನುಮೋದನೆ ನೀಡಿದೆ.
*ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಆಡಳಿತಾತ್ಮಕ ವೆಚ್ಚಗಳ ಮಿತಿಯನ್ನು 28 ಕೋಟಿ ರೂ.ಗಳಿಗೆ ಹೆಚ್ಚಿಸಲು ನಿರ್ಧಾರ.
*ಐ.ಟಿ./ಬಿ.ಟಿ ಇಲಾಖೆ ವತಿಯಿಂದ ಟೆಕ್ ಸಮಿಟ್ ಆಯೋಜನೆಗೆ (ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಲ್ಲಿ ) ಇ.ಸಿ.ಎಂ.ಎ ಅವರ ಮೂಲಕ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳನ್ನು ನಿರ್ವಹಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
*ಸಣ್ಣ ನೀರಾವರಿ ಇಲಾಖೆಯ 243 ಎಂ.ಎಲ್.ಡಿ ನೀರಿನ 70 ಕೆರೆಗಳನ್ನು ತುಂಬಲು ಪರಿಷ್ಕೃತ ಅಂದಾಜು 1,081 ಕೋಟಿ ರೂ.ಗಳ ಮೊತ್ತಕ್ಕೆ ಸಚಿವ ಸಂಪುಟದ ಒಪ್ಪಿಗೆ. ವೃಷಭಾವತಿ ನದಿಯ ನೀರನ್ನು ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರದ 70 ಕೆರೆಗಳಿಗೆ ತುಂಬಿಸುವ ಯೋಜನೆ.
* ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಮೂರು ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಅನುಮತಿ
* ಬೆಂಗಳೂರು ಟೆಕ್ ಸಮ್ಮಿಟ್ ನಡೆಸಲು 17.9 ಕೋಟಿ ರೂಪಾಯಿ ಅನುದಾನ ನೀಡುವ ಪ್ರಸ್ತಾವನೆಗೆ ಸಂಪುಟ ಅನುಮೋದನೆ
* ನೈಸರ್ಗಿಕ ವಿಕೋಪ ನಿರ್ವಹಣೆ ಸಂಬಂಧ ನಿರ್ದೇಶನ ನೀಡಲು ಸಚಿವ ಸಂಪುಟ ಉಪ ಸಮಿತಿ ರಚನೆಗೆ ಅನುಮತಿ
* ಡಬಲ್ ಡೆಕ್ಕರ್, ವಿದ್ಯುತ್ ಚಾಲಿತ ಬಸ್‌ಗಳ ಖರೀದಿಗೆ 28 ಕೋಟಿ ರೂಪಾಯಿ
ರಾಜ್ಯದಲ್ಲಿ ಆರರಿಂದ ಹತ್ತನೇ ತರಗತಿಯ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಕರ್ನಾಟಕ ಸಚಿವ ಸಂಪುಟ ಜೂನ್ 15 ರಂದು ಅನುಮೋದನೆ ನೀಡಿದೆ. ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೆವಾರ್ ಮತ್ತು ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಪಠ್ಯಗಳನ್ನು ಕೈಬಿಡಲಾಗಿದೆ. ಸಮಾಜ ಸುಧಾರಕರಾದ ಸಾವಿತ್ರಿಬಾಯಿ ಫುಲೆ, ನೆಹರೂ ಅವರು ಇಂದಿರಾಗಾಂಧಿ ಅವರಿಗೆ ಬರೆದ ಪತ್ರಗಳು ಮತ್ತು ಬಿ.ಆರ್. ಅವರ ಕುರಿತಾದ ಕವನಗಳ ಅಧ್ಯಾಯಗಳನ್ನು ಸೇರಿಸಲು ಒಪ್ಪಿಗೆ ನೀಡಿದೆ.
ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಶಾಲಾ ಪಠ್ಯಪುಸ್ತಕಗಳಲ್ಲಿ ಮಾಡಿದ ಬದಲಾವಣೆಗಳನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿತ್ತು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ರದ್ದುಪಡಿಸುವುದಾಗಿ ಭರವಸೆ ನೀಡಿತ್ತು. ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸತತವಾಗಿ ಈ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ.












Click it and Unblock the Notifications