ಕೆಲವು ಬದಲಾವಣೆಯೊಂದಿಗೆ ಕರ್ನಾಟಕದಲ್ಲಿ ಕಸ್ತೂರಿ ರಂಗನ್ ವರದಿ ಜಾರಿ?
ಶಿವಮೊಗ್ಗ, ಸೆಪ್ಟೆಂಬರ್ 08: ಕರ್ನಾಟಕದ ಪಶ್ಚಿಮ ಘಟ್ಟಗಳ ಉಳಿವಿಗಾಗಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಈ ವರ್ಷದ ಮಳೆಗಾಲದಲ್ಲಿ ಕೆಲವು ಜಿಲ್ಲೆಗಳಲ್ಲಿ ಗುಡ್ಡಕುಸಿತ ಪ್ರಕರಣಗಳು ನಡೆದ ಬಳಿಕ ಈ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ. ವರದಿ ಕುರಿತು ಪರ-ವಿರೋಧ ವಾಕ್ಸಮರ ನಡೆಯುತ್ತಲೇ ಇದೆ. ಕರ್ನಾಟಕದಲ್ಲಿ ಕೆಲವು ಬದಲಾವಣೆಯೊಂದಿಗೆ ವರದಿ ಜಾರಿಯಾಗಲಿದೆಯೇ? ಎಂಬುದು ಸದ್ಯದ ಪ್ರಶ್ನೆ.
ಶಂಕರಘಟ್ಟದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಮಾತನಾಡಿದ್ದಾರೆ. ಈ ಮೂಲಕ ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಮತ್ತೆ ಕಸ್ತೂರಿ ರಂಗನ್ ವರದಿ ಅನುಷ್ಠಾನದ ಕುರಿತು ಮಾತುಗಳು ಕೇಳಿಬರಲು ಆರಂಭಿಸಿದೆ.

ಸಚಿವ ಮಧು ಬಂಗಾರಪ್ಪ ಮಾತನಾಡಿ, "ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಮಾಡಿದಲ್ಲಿ ಮಲೆನಾಡು ಜನ ಬದುಕುವುದು ಕಷ್ಟಸಾಧ್ಯವಾಗುತ್ತದೆ. ಆದ್ದರಿಂದ ಕೇರಳದಲ್ಲಿ ಮಾಡಿದಂತೆ ಕೆಲವು, ತಿದ್ದುಪಡಿ, ಬದಲಾವಣೆ ಮಾಡಿಕೊಂಡು ಜಾರಿಗೆ ತಂದರೆ ಒಳಿತು. ಶಿರೂರು ಭೂಕುಸಿತ ಇತರೆ ಪ್ರಕರಣದಿಂದ ವರದಿ ಜಾರಿ ತರಲು ಒತ್ತಡ ಹೆಚ್ಚಾಗುತ್ತಿದೆ" ಎಂದು ಹೇಳಿದರು.
"ಜನರಿಗೂ ಅನುಕೂಲ ಆಗಬೇಕು, ಕಸ್ತೂರಿ ರಂಗನ್ ವರದಿ ಜಾರಿಯಾಗಬೇಕು ಆ ರೀತಿಯಲ್ಲಿ ತಿದ್ದುಪಡಿ, ಬದಲಾವಣೆ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪಕ್ಷಾತೀತವಾಗಿ ಎಲ್ಲರನ್ನು ಕರೆದು, ಅಭಿಪ್ರಾಯ ಸಂಗ್ರಹಿಸಲಾಗುವುದು. ರಾಜಕಾರಣ ಹೊರತುಪಡಿಸಿ ಈ ವಿಷಯವನ್ನು ನೋಡಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ" ಎಂದು ಸಚಿವರು ತಿಳಿಸಿದರು.
"ಕೇಂದ್ರ ಸರ್ಕಾರ ತರಾತುರಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ಮುಂದಾಗಿದೆ. ವರದಿ ಪರಿಷ್ಕರಣೆಗೆ ಒಳಗಾಗದೇ ಜಾರಿಗೊಂಡರೆ ಅರಣ್ಯ ಪ್ರದೇಶದ ಜನರು ಊರು ಬಿಡುವ ಸ್ಥಿತಿ ನಿರ್ಮಾಣವಾಗಲಿದೆ. ಜೀವನೋಪಾಯ ಕಲ್ಪಿಸದಿದ್ದರೆ ಜನರು ಏನು ಮಾಡುತ್ತಾರೆ. ಜನರಿಗೆ ಅನುಕೂಲ, ಪರಿಸರಕ್ಕೂ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು" ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
"ಕಸ್ತೂರಿ ರಂಗನ್ ವರದಿ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಕೆಲವು ತಿದ್ದುಪಡಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪರಿಸರ ಉಳಿದಿದ್ದರೆ ಅದು ರೈತರಿಂದ ಎಂದು ಮರೆಯಬಾರದು. ಅವರಿಗೂ ಬದಕಲು ಅನುಕೂಲ ಆಗಬೇಕು. ವರದಿಯನ್ನು ಪುನಃ ಪರಿಷ್ಕರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ" ಎಂದು ಸಚಿವರು ಹೇಳಿದರು.
ವರದಿ ಒಪ್ಪಲು ಸಾಧ್ಯವಿಲ್ಲ: ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಮಾಜಿ ಸಚಿವ, ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿದ್ದಾರೆ, "ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ವರದಿ ಮಲೆನಾಡು ಜನರ ಜೀವನ ಶೈಲಿಗೆ ಮಾರಕವಾಗಿದೆ. ಪರಿಸರ ರಕ್ಷಣೆ ಹೆಸರಿನಲ್ಲಿ ಜನಜೀವನವನ್ನೇ ವ್ಯರ್ಥಗೊಳಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
"ಕೇರಳ ಮುಖ್ಯಮಂತ್ರಿ ಸಹ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕಾರ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಮಲೆನಾಡು ಜಿಲ್ಲೆಗಳಲ್ಲಿಯೇ ಅತಿ ಹೆಚ್ಚು ಅರಣ್ಯವನ್ನು ಹೊಂದಿದೆ. ಇಂತಹ ಜಿಲ್ಲೆಯಲ್ಲಿ ಶೇ 80ರಷ್ಟು ಪ್ರದೇಶದಲ್ಲಿ ಮನೆ ಕಟ್ಟಬಾರದು, ಸೊಪ್ಪು ತರಬಾರದು, ಮಣ್ಣು ಮುಟ್ಟಬಾರದು ಎಂದು ಕಸ್ತೂರಿ ರಂಗನ್ ವರದಿ ಮತ್ತು ಗಾಡ್ಗಿಲ್ ವರದಿ ಹೇಳಿದೆ. ಮಲೆನಾಡಿನ ಶಾಸಕರು ಹಿಂದೆಯೇ ವರದಿಯನ್ನು ತಿರಸ್ಕಾರ ಮಾಡಿದ್ದಾರೆ" ಎಂದರು.












Click it and Unblock the Notifications