Rain: ಈ ಜಿಲ್ಲೆಗಳಲ್ಲಿ ಮೂರು ದಿನ ಭರ್ಜರಿ ಮಳೆ, ಇಂದಿನ ವೆದರ್ ಹೇಗಿದೆ ?
Rain: ಕರ್ನಾಟಕದ ವಿವಿಧ ಭಾಗದಲ್ಲಿ ಬಿಸಿಲ ಝಳ (ತಾಪಮಾನ) ಹೆಚ್ಚಳವಾಗುತ್ತಿದೆ. ಇದರ ನಡುವೆ ಮಾರ್ಚ್ 11, ಮಾರ್ಚ್12 ಹಾಗೂ ಮಾರ್ಚ್13 ರಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಅಲ್ಲದೆ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಕೆಲವು ಕಡೆ ಬಿಸಿಲು ಇನ್ನಷ್ಟು ಸುಡಲಿದೆ ಎನ್ನುವ ಎಚ್ಚರಿಕೆಯನ್ನೂ ಕೊಡಲಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಹೆಚ್ಚು ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದೆ. ಇನ್ನು ಅತಿ ಕಡಿಮೆ ಉಷ್ಣಾಂಶವು 14 ಡಿಗ್ರಿ ಸೆಲ್ಸಿಯಸ್ ದಾವಣಗೆರೆಯಲ್ಲಿ ದಾಖಲಾಗಿದೆ. ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಎಲ್ಲೆಲ್ಲಿ ಮಳೆಯಾಗಲಿದೆ ಹಾಗೂ ಎಲ್ಲೆಲ್ಲಿ ಬಿಸಿಲು ಇರಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕದಾದ್ಯಂತ ಇಂದು (ಸೋಮವಾರ ಮಾರ್ಚ್ 10ಕ್ಕೆ) ಒಣಹವೆ ಮುಂದುವರಿದಿದೆ. ಆದರೆ, ಮಾರ್ಚ್ 11ರಿಂದ ಮಾರ್ಚ್ 13ರ ವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಮತ್ತು ದಕ್ಷಿಣ ಒಳನಾಡಿನ ದಾವಣಗೆರೆಯಲ್ಲಿ ಒಂದು ಅಥವಾ ಎರಡು ಸ್ಥಳದಲ್ಲಿ ಮಂಜು ಕವಿದ ವಾತಾವರಣವಿತ್ತು.

ತಾಪಮಾನ ಏರಿಕೆ: ರಾಜ್ಯದ ಉತ್ತರ ಒಳನಾಡಿನ ಕೊಪ್ಪಳ, ಹಾವೇರಿ, ಬೆಳಗಾವಿ ವಿಮಾನ ನಿಲ್ದಾಣ, ಬಾಗಲಕೋಟೆ ಹಾಗೂ ಧಾರವಾಡದಲ್ಲಿ ಕನಿಷ್ಠ ತಾಪಮಾನವು ಗಣನೀಯವಾಗಿ ಏರಿಕೆ ಕಂಡಿದೆ. ಅಲ್ಲದೆ ಬೀದರ್, ರಾಯಚೂರು ಹಾಗೂ ವಿಜಯಪುರದಲ್ಲಿ ಮತ್ತು ದಕ್ಷಿಣ ಒಳನಾಡಿನ ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಬಿಸಿಲು ಹೆಚ್ಚಾಗಿತ್ತು. ಕರಾವಳಿಯ ಮಂಗಳೂರು ವಿಮಾನ ನಿಲ್ದಾಣ ಭಾಗದಲ್ಲಿ ಬಿಸಿಲು ಜೋರಾಗಿತ್ತು.
ನಾಳೆಯಿಂದ ಮೂರು ದಿನ ಭರ್ಜರಿ ಮಳೆ!
ಕರ್ನಾಟಕದಲ್ಲಿ ಬಿಸಿಲ ಝಳ ಫೆಬ್ರವರಿ ಎರಡನೇ ವಾರದಿಂದಲೇ ಹೆಚ್ಚಳವಾಗಿದೆ. ಕಳೆದ 10 ದಿನಗಳಿಂದಲೂ ಬಿಸಿಲಿ ಝಳ ಜೋರಾಗಿದೆ. ಈ ರೀತಿ ಇರುವಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಮೂರು ದಿನ ಭರ್ಜರಿ ಮಳೆ: ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಭರ್ಜರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಮಾರ್ಚ್ 11: ನಾಳೆ ಬೆಂಗಳೂರು ಸೇರಿದಂತೆ ವಿವಿಧ ಭಾಗದಲ್ಲಿ ಮಳೆಯಾಗಲಿದೆ ಎಂದು ಐಎಂಡಿ ರಿಪೋರ್ಟ್ ಹೇಳಿದೆ. ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ. ಅಲ್ಲದೆ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲೂ ಭರ್ಜರಿ ಮಳೆಯಾಗಲಿದೆ.
ಮಾರ್ಚ್ 12: ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಧಾರಾಕಾರ ಮಳೆಯಾಗಲಿದೆ.
ಮಾರ್ಚ್ 13ಕ್ಕೆ: ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವರದಿಯು ತಿಳಿಸಿದೆ. ಉಳಿದಂತೆ ಒಣಹವೆ ಇರಲಿದೆ. ಈ ಸಂದರ್ಭದಲ್ಲಿ ಮೀನುಗಾರರಿಗೆ ಯಾವುದೇ ಮುನ್ಸೂಚನೆ ನೀಡಿಲ್ಲ.
ಬೆಂಗಳೂರಲ್ಲಿ ದೆಹಲಿ ಮಾದರಿ ಬಿಸಿಲು: ಐಎಂಡಿ ಎಚ್ಚರಿಕೆ!
ಬೆಂಗಳೂರಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಭಯಾನಕ ಬಿಸಿಲು ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ. ಅಲ್ಲದೆ ದೆಹಲಿ ಮಾದರಿಯಲ್ಲಿ ಬಿಸಿಲು ಹೆಚ್ಚಾಗುವ ಆತಂಕವೂ ಇದೆ. ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ಭಾರೀ ಬಿಸಿಲು ಕಾಣಿಸಿಕೊಂಡಿತ್ತು. ಅಲ್ಲದೇ ನೀರಿನ ಸಮಸ್ಯೆಯೂ ಎದುರಾಗಿತ್ತು. ಇದೀಗ ಅದೇ ಮಾದರಿ ಸಮಸ್ಯೆ ಈ ವರ್ಷವೂ ಕಾಣಿಸಿಕೊಳ್ಳುವ ಆತಂಕ ಎದುರಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಆಗುವ ಸಾಧ್ಯತೆ ಇರುವುದರಿಂದ ಜಲಮಂಡಳಿಯು ಎಚ್ಚೆತ್ತುಕೊಂಡಿದ್ದು. ಕಠಿಣ ಕಾನೂನು ಜಾರಿ ಮಾಡಿದೆ. ಇದೀಗ ಐಎಂಡಿ ಸಹ ಬಿಸಿಲಿನ ಬಗ್ಗೆ ಎಚ್ಚರಿಕೆ ನೀಡಿದೆ ಅದರ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಬಿಸಿಲು ಹೆಚ್ಚಳವಾಗುತ್ತಿದ್ದು. ಮಾರ್ಚ್ 11ರಿಂದ ಮಾರ್ಚ್ 13ರ ವರೆಗೆ ಬೆಂಗಳೂರಿನಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಲಿದೆ. ಆದರೆ, ಮುಂದುವರಿದು ಬೆಂಗಳೂರಿನಲ್ಲಿ ಬಿಸಿಲ ಝಳ ಜೋರಾಗಲಿದೆ ಎಂದು ಐಎಂಡಿ ಅಲರ್ಟ್ ಕೊಟ್ಟಿದೆ. ಇನ್ನು ಈಚೆಗೆ ಬೆಂಗಳೂರಿನಲ್ಲಿ ವರ್ಷದ ಅತ್ಯಂತ ಹೆಚ್ಚಿನ ಬಿಸಿಲು ಕಾಣಿಸಿಕೊಂಡಿದೆ. ತಾಪಮಾನವು 34.6° ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು. ಇದು ಈ ವರ್ಷದಲ್ಲಿ ದಾಖಲಾದ ಗರಿಷ್ಠ ಬಿಸಿಲು ಎಂದು ಹೇಳಲಾಗುತ್ತಿದೆ.
ಇದು ಗಮನಾರ್ಹ ಏರಿಕೆಯನ್ನು ಸೂಚಿಸಿದೆ, ಋತುಮಾನದ ಸರಾಸರಿಗಿಂತ 1.9°C ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಬಿಸಿಲ ಝಳ ಇನ್ನಷು ಜೋರಾಗಿ ಇರಲಿದೆ. IMDಯ ಪ್ರಕಾರ ಗರಿಷ್ಠ ತಾಪಮಾನವು 35°C ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ. ಆದರೆ, ಮುಂದಿನ ವಾರ ಕನಿಷ್ಠ ತಾಪಮಾನವು 19° ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ಇರಲಿದೆ ಎಂದು ಹೇಳಲಾಗಿದೆ.
ದೆಹಲಿ ಮಾದರಿ ಬಿಸಿಲು: ದೆಹಲಿಯಲ್ಲಿ ಪ್ರತಿ ವರ್ಷವೂ ಚಳಿ ಹಾಗೂ ಬಿಸಲು ಗರಿಷ್ಠ ಮಟ್ಟದಲ್ಲಿ ಇರುತ್ತದೆ. ಇದೀಗ ಇದೇ ಮಾದರಿ ಬೆಂಗಳೂರಿನಲ್ಲೂ ಬಿಸಿಲು ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಭರ್ಜರಿ ಬಿಸಿಲು ಇರಲಿದೆ. ಏಪ್ರಿಲ್ ಮತ್ತು ಮೇ ಮಧ್ಯದ ನಡುವೆ ಬೆಂಗಳೂರಿನ ಗರಿಷ್ಠ ತಾಪಮಾನವು 35ರಿಂದ 39°C ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಇದೀಗ ಎಚ್ಚರಿಕೆ ಕೊಟ್ಟಿದೆ.












Click it and Unblock the Notifications