Karnataka Rains : ಮುಂದಿನ 2 ದಿನ ಕರ್ನಾಟಕದ 10 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ
ಬೆಂಗಳೂರು, ಏಪ್ರಿಲ್ 09; ಬಿಸಿಲಿನಿಂದ ಕಂಗೆಟ್ಟಿರುವ ಕರ್ನಾಟಕದ ವಿವಿಧ ಜಿಲ್ಲೆಗಳ ಜನರಿಗೆ ಭಾರತೀಯ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ಮುಂದಿನ 2 ದಿನಗಳ ಕಾಲ ರಾಜ್ಯದ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಈ ವಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಸುರಿದಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಮುಂದಿನ 2 ದಿನಗಳ ಕಾಲ ಮಳೆಯಾಗಲಿದೆ. ಶುಕ್ರವಾರದಿಂದ ರಾಜ್ಯದಲ್ಲಿ ತಾಪಮಾನದಲ್ಲಿ ಕೊಂಚ ಏರಿಕೆ ಕಂಡುಬಂದಿದ್ದು, ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರು ನಗರದಲ್ಲಿಯೂ ಮುಂಜಾನೆ ಶುಭ್ರವಾದ ಆಕಾಶ ಇರಲಿದೆ. ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಬಹುದು. ನಗರದಲ್ಲಿ ಉಷ್ಣಾಂಶ ಏರಿಕೆಯಾದರೂ ಸಹ ಮಳೆಯಾಗುವ ಯಾವುದೇ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿಲ್ಲ. ಆದ್ದರಿಂದ ಉದ್ಯಾನ ನಗರಿಯ ಜನರು ಬಿರು ಬೇಸಿಗೆಯ ಬಿಸಿಯನ್ನು ಎದುರಿಸಬೇಕಿದೆ.
ಯಾವ-ಯಾವ ಜಿಲ್ಲೆಯಲ್ಲಿ ಮಳೆ?; ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಬೆಳಗಾವಿ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ಕಲಬುರಗಿ, ಬೀದರ್ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ.
ಈ ವಾರ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಅದರಲ್ಲಿಯೂ ಹಾಸನದಲ್ಲಿ ಸುರಿದ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿತ್ತು. ರಾಜ್ಯದ ವಿವಿಧ ಕಡೆ ಶುಕ್ರವಾರ ಸುರಿದ ಗುಡುಗು ಸಹಿತ ಮಳೆ ಅವಾಂತರದಿಂದ ನಾಲ್ವರು ಮೃತಪಟ್ಟಿದ್ದಾರೆ. 13 ಜಾನುವಾರುಗಳು ಸಾವನ್ನಪ್ಪಿವೆ.

ಸಿಡಿಲು ಬಡಿದು ಕೊಪ್ಪಳದಲ್ಲಿ ಎರಡು ಜಾನುವಾರುಗಳು, ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ 5 ಜಾನುವಾರುಗಳು, ಬಸವಕಲ್ಯಾಣದಲ್ಲಿ 5 ಜಾನುವಾರುಗಳು ಸಾವನ್ನಪ್ಪಿವೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವಿವಿಧ ಕಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಉಜಿರೆ, ಧರ್ಮಸ್ಥಳ, ಮುಂಡಾಜೆಯಲ್ಲಿ ಆಲಿಕಲ್ಲು ಬಿದ್ದಿದ್ದು, ಬಳಿಕ ಮಳೆಯಾಗಿದೆ.
ಉಷ್ಣಾಂಶ ಏರಿಕೆ ಸಾಧ್ಯತೆ; ಭಾರತೀಯ ಹವಾಮಾನ ಇಲಾಖೆ ಈ ಬಾರಿಯ ಬೇಸಿಗೆಯಲ್ಲಿ ಬಿಸಿಲು ಅಧಿಕವಾಗಿರುತ್ತದೆ ಎಂದು ಈಗಾಗಲೇ ಮುನ್ಸೂಚನೆ ನೀಡಿತ್ತು. ಹಾಗೇಯೆ ಆಗುತ್ತಿದೆ. ವಿವಿಧ ರಾಜ್ಯಗಳಲ್ಲಿ ತಾಪಮಾನ ವಾಡಿಕೆಗಿಂತಲೂ ಅಧಿಕವಾಗಿದೆ. ಮುಂದಿನ ಐದು ದಿನಗಳ ಕಾಲ ತಾಪಮಾನ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.
ಮುಂದಿನ ಐದು ದಿನಗಳ ಹವಾಮಾನ ಮುನ್ಸೂಚನೆ ಪ್ರಕಾರ ಗುಡುಗು ಸಹಿತ ಮಳೆ ಮಧ್ಯ ಪ್ರದೇಶ, ಒಡಿಶಾ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಲ್ಲಿ ಎರಡು ದಿನ ಸುರಿಯಲಿದೆ, ಬಳಿಕ ಕಡಿಮೆಯಾಗಲಿದೆ. ಗರಿಷ್ಠ ಉಷ್ಣಾಂಶ 2 ರಿಂದ 4 ಡಿಗ್ರಿ ಸೆಲ್ಸಿಯಸ್ ದೇಶದ ಎಲ್ಲಾ ಭಾಗಗಳಲ್ಲಿಯೂ ಏರಿಕೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಈ ಬಾರಿಯ ಬೇಸಿಗೆ ಆರಂಭದಲ್ಲಿಯೇ ಹವಾಮಾನ ಇಲಾಖೆಯು ದೇಶದ ವಾಯುವ್ಯ ಮತ್ತು ಪರ್ಯಾಯ ದ್ವೀಪಗಳನ್ನು ಹೊರತುಪಡಿಸಿ ಉಳಿದ ಭಾಗದಲ್ಲಿ ಏಪ್ರಿಲ್‌ನಿಂದ ಜೂನ್ ತನಕ ವಾಡಿಕೆಗಿಂತ ಗರಿಷ್ಠ ತಾಪಮಾನ ದಾಖಲಾಗಲಿದೆ ಎಂದು ಹೇಳಿತ್ತು. ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಲ್ಲಿ ತಾಪಮಾನ ಹೆಚ್ಚಿಗೆ ಇರಲಿದೆ.
ಕರ್ನಾಟಕ ಮಾತ್ರವಲ್ಲ ದೇಶದ ಹಲವು ರಾಜ್ಯಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು, ಇದು ಬೆಳೆಗಳಿಗೆ ಹಾನಿ ಮಾಡಿದೆ. ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್, ರಾಜಸ್ಥಾನ, ಮಧ್ಯ ಪ್ರದೇಶ, ಮಹಾರಾಷ್ಟ್ರದಲ್ಲಿ ಪೂರ್ವ ಮುಂಗಾರು ಆಲಿಕಲ್ಲು ಸಹಿತ ಮಳೆಯಾಗುತ್ತಿದ್ದು, ಹಲವು ಬೆಳಗಳಿಗೆ ಹಾನಿಯಾಗಿದೆ.












Click it and Unblock the Notifications