Karnataka Weather: ಹೆಚ್ಚುತ್ತಿರುವ ಚಳಿ ಮಧ್ಯೆ 4 ದಿನ ಈ ಜಿಲ್ಲೆಗಳಿಗೆ ಉತ್ತಮ ಮಳೆ ಮುನ್ಸೂಚನೆ
ಬೆಂಗಳೂರು, ಡಿಸೆಂಬರ್ 29: ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ಚಳಿ ವಾತಾವರಣದ ಮಧ್ಯೆ ನಾಲ್ಕು ವ್ಯಾಪಕ ಮಳೆ ಮುನ್ಸೂಚನೆ ದೊರೆತಿದೆ. ಜನವರಿ ಮೊದಲ ವಾರದ ನಾಲ್ಕು ದಿನ ಉತ್ತಮ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಅತ್ಯಧಿಕ ಚಳಿ ಸೃಷ್ಟಿಯಾಗುತ್ತಿದೆ. ಕರಾವಳಿಗಿಂತಲೂ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ ಇಳಿಕೆ ಆಗಿ, ಅತೀವ ಚಳಿ ದಾಖಲಾಗಿತ್ತು. ಇದೀಗ ಚಳಿ ಜೊತೆಗೆ ಜನವರಿ 1ರಿಂದ 4ರವರಗೆ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ಬೆಳಗ್ಗೆ ದಟ್ಟ ಮಂಜು ಆವರಿಸಲಿದೆ. ಕೆಲವು ಜಿಲ್ಲೆಗಳಲ್ಲಿ ಮಬ್ಬು ವಾತಾವರಣ ಕಂಡು ಬರಲಿದೆ.

ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಾಲ್ಕು ದಿನ ಹಗುರದಿಂದ ವ್ಯಾಪಕ ಮಳೆ ಸಾಧ್ಯತೆ ಇದೆ. ಇದೇ ಅವಧಿಯಲ್ಲಿ ಚಾಮರಾಜನಗರ, ಚಿಕ್ಕಮಳೂರು, ದಾವಣಗೆರೆ, ಕೊಡಗು, ಹಾಸನ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ದಿನ ಬಿಟ್ಟು ದಿನ ಹಗುರದಿಂದ ಸಾಧಾರಣ ಮಳೆ ಸಂಭವವಿದೆ.
ಶುಷ್ಕ ವಾತಾವರಣ: ಭಾರೀ ಚಳಿ ದಾಖಲು
ಇದೇ ವೇಳೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬೆಳಗ್ಗೆ ದಟ್ಟ ಮಂಜು, ಮೋಡ ಕವಿದ ವಾತಾವರಣ ಕಂಡು ಬರಲಿದೆ. ಮಧ್ಯಾಹ್ನ ಗರಿಷ್ಠ ತಾಪಮಾನ ದಾಖಲಾಗಲಿದ್ದು, ಇಲ್ಲೆಲ್ಲಾ ಕಡೆ ಶುಷ್ಕ ವಾತಾವರಣವೇ ಮುಂದುವರಿಯಲಿದೆ. ಇದರ ಹೊರತು ಎಲ್ಲಿಯೂ ಗಂಭೀರ ಸ್ವರೂಪದ ಹವಾಮಾನ ಬದಲಾವಣೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಎಲ್ಲಿಯೂ ಮಳೆ ಆಗಿಲ್ಲ. ರಾಜ್ಯದ ಕನಿಷ್ಠ ತಾಪಮಾನ ವಿಜಯಪುರದಲ್ಲಿ 10.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಉಳಿದಂತೆ ಧಾರವಾಡದಲ್ಲಿ 11,4 ಡಿಸೆ, ಹಾವೇರಿ, ಗದಗ, ಬಾಗಲಕೋಟೆ ಜಿಲ್ಲೆಯಲ್ಲಿ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಕಾರವಾರ-ಹೊನ್ನಾರದಲ್ಲಿ ರಾಜ್ಯದ ಗರಿಷ್ಠ ತಾಪಮಾನ
ಉಳಿದಂತೆ ರಾಜ್ಯದ ಗರಿಷ್ಠ ತಾಪಮಾನ ಹೊನ್ನಾವರ ಮತ್ತು ಕಾರವಾರದಲ್ಲಿ ತಲಾ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ಪೆಣಂಬೂರಿನಲ್ಲಿ 35, ಮಂಗಳೂರು ವಿಮಾನ ನಿಲ್ದಾಣದಲ್ಲಿ 33.8 ಡಿಗ್ರಿ ಸೆಲ್ಸಿಯಸ್, ಕಲಬುರಗಿ ಮತ್ತು ಚಾಮರಾಜನಗರದಲ್ಲಿ 32 ಗರಿಷ್ಠ ತಾಪಮಾನ ದಾಖಲಾಗಿದೆ.
ಬೆಂಗಳೂರು ಮುನ್ಸೂಚನೆ
ಬೆಂಗಳೂರಿನಲ್ಲಿ ಶುಕ್ರವಾರ ಬೆಳಗ್ಗೆಯಿಂದ ಮಬ್ಬು, ಮೋಡ ಮುಸುಕಿನ ವಾತಾವರಣ ಕಂಡು ಬಂದಿದೆ. ಬಿಸಿಲಿನ ದರ್ಶನ ಅಪರೂಪ ಎಂಬಂತಾಗಿದೆ. ಇಲ್ಲಿ ಸಹ ಕೆಲವು ದಿನಗಳಿಂದ ಬೆಳಗ್ಗೆ ಚಳಿ ದಾಖಲಾಗುತ್ತಿದೆ. ಇನ್ನೂ ಕೆಲವು ದಿನ ಇದೇ ವಾತಾವರಣ ಮುಂದುವರಿಯುವ ಸಂಭವವಿದೆ. ಸದ್ಯ ಬೆಂಗಳೂರಿನಲ್ಲಿ ಮೊದಲಿನಷ್ಟು ಚಳಿ ಕಂಡು ಬರುತ್ತಿಲ್ಲ. ಬೆಳಗ್ಗೆ ತುಸು ಚಳಿ ಅನ್ನಿಸಿದರೆ, ನಂತರ ಬಿಸಿಲಿನ ದರ್ಶನವಗುತ್ತಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications