ವಾಯುಭಾರ ಕುಸಿತ; ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ 3 ದಿನ ಮಳೆ ಸೂಚನೆ
ಬೆಂಗಳೂರು, ಆಗಸ್ಟ್ 18: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಬುಧವಾರದಿಂದ ಮೂರು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಬುಧವಾರದಿಂದ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದ ಮಳೆಯಾಗಲಿದೆ ಎಂದು ತಿಳಿಸಿದೆ. ಶಿವಮೊಗ್ಗ, ಕೊಡಗು, ರಾಮನಗರ, ಮೈಸೂರು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬುಧವಾರ ಆರಂಭಗೊಂಡು ಮೂರು ದಿನ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಆಗಸ್ಟ್ 20ರವರೆಗೂ ಮಳೆ ಮಳೆ ಹೆಚ್ಚಾಗಲಿದೆ ಎಂದು ತಿಳಿಸಿದೆ.
ಬೀದರ್, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ವಿಜಯನಗರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಬೆಂಗಳೂರು ನಗರ ಪ್ರದೇಶದಲ್ಲಿ ಬುಧವಾರ ಸಂಜೆ ವೇಳೆಗೆ ಮಳೆ ಆರಂಭವಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಒಳನಾಡಿನಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಮಳೆ ತೀವ್ರತೆ ಹೆಚ್ಚಾಗಲಿದೆ ಎಂದು ತಿಳಿಸಿದೆ. ಕರಾವಳಿಯಲ್ಲಿ ಮಳೆಯ ಆರ್ಭಟ ಹೆಚ್ಚಾಗುವ ಸೂಚನೆಯಿದ್ದು, ಮೀನುಗಾರಿಕೆಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ 7ರಿಂದ 11 ಸೆಂ.ಮೀ ಮಳೆಯಾಗುವ ನಿರೀಕ್ಷೆಯಿದೆ.

ಉತ್ತರ ಭಾರತದಲ್ಲಿ ಮಳೆ ಆರ್ಭಟ
ಆಗಸ್ಟ್ ತಿಂಗಳಿನಲ್ಲಿ ಹಲವು ರಾಜ್ಯಗಳಲ್ಲಿ ಮುಂಗಾರು ಮತ್ತೆ ಚುರುಕು ಪಡೆದಿದೆ. ಉತ್ತರ ಭಾರತದ ಬಹುಪಾಲು ರಾಜ್ಯಗಳಲ್ಲಿ ಜುಲೈ ಅಂತ್ಯದಿಂದ ಆಗಸ್ಟ್ ತಿಂಗಳ 10ರವರೆಗೂ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿ ಮಹಾರಾಷ್ಟ್ರ, ಉತ್ತರ ಪ್ರದೇಶ, ಒಡಿಶಾದಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿತ್ತು. ಅಧಿಕ ಮಳೆಯಿಂದಾಗಿ ಹಿಮಾಚಲದಲ್ಲಿ ಭೂಕುಸಿತವೂ ಸಂಭವಿಸಿತ್ತು. ಇದೀಗ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಸಹಜ ಸ್ಥಿತಿಯತ್ತ ಜನಜೀವನ ಸಾಗಿದೆ.
ಕರ್ನಾಟಕದೊಂದಿಗೆ, ತಮಿಳುನಾಡು, ಕೇರಳದಲ್ಲಿಯೂ ಅಧಿಕ ಮಳೆಯಾಗುವುದಾಗಿ ಇಲಾಖೆ ಮಾಹಿತಿ ನೀಡಿದೆ. ಮಹಾರಾಷ್ಟ್ರ, ತೆಲಂಗಾಣ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಧ್ಯಪ್ರದೇಶ, ಮಣಿಪುರ, ತ್ರಿಪುರ, ಮಿಜೋರಾಂ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಮುಂದಿನ ಎರಡು ದಿನಗಳ ಅವಧಿ ಮಳೆಯಾಗುವ ಮಾಹಿತಿ ರವಾನಿಸಿದೆ. ದೇಶದಲ್ಲಿ ಮುಂಗಾರು ಪ್ರಭಾವ ಮುಂದುವರೆದಿದ್ದು, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ್, ಆಂಧ್ರದ ಕರಾವಳಿ ಪ್ರದೇಶಗಳು, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಡ ಹಾಗೂ ವಿದರ್ಭಾದಲ್ಲಿ ಸಾಧಾರಣ ಮಳೆಯಾಗುವುದಾಗಿ ತಿಳಿಸಿದೆ. ಆಗಸ್ಟ್ 19ರವರೆಗೂ ಈಶಾನ್ಯ ರಾಜ್ಯಗಳಲ್ಲಿ ಅಧಿಕ ಮಳೆಯಾಗುವುದಾಗಿ ತಿಳಿಸಿದೆ.











Click it and Unblock the Notifications