ಕರ್ನಾಟಕದ ಕರಾವಳಿ, ಮಲೆನಾಡಲ್ಲಿ 5 ದಿನ ಭಾರೀ ಮಳೆ
ಬೆಂಗಳೂರು ಜುಲೈ 14: ಕರ್ನಾಟಕದಲ್ಲಿ ಎಡೆ ಬಿಡದೆ ಸುರಿಯುತ್ತಿರುವ ಮುಂಗಾರು ಮಳೆ ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಮುಂದಿನ 5 ದಿನಗಳ ಪೈಕಿ ಎರಡು ದಿನ ಅಬ್ಬರಿಸುವ ಮನ್ಸೂಚನೆ ಇದೆ.
ರಾಜ್ಯದ ವಿವಿಧೆಡೆ ಜುಲೈ 19ರವರೆಗೂ ಮಳೆ ಮುಂದುವರಿಯಲಿದೆ. ಈ ಪೈಕಿ ಜುಲೈ 15 ಮತ್ತು 16 ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಅತಿ ಭಾರೀ ಮಳೆಯಾಗಲಿದೆ.
ಅಲ್ಲದೇ ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹಲವೆಡೆ ಜುಲೈ 15ರಂದು ಒಂದು ದಿನ ಅತಿಯಾದ ಮಳೆ ಆಗುವ ಸಂಭವವಿದೆ. ಹೀಗಾಗಿ ಎರಡು ಭಾಗದ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಅನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ದಕ್ಷಿಣ ಒಳನಾಡಿನ ಹಾಸನ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಮತ್ತು ಮಲೆನಾಡಿನ ಜಿಲ್ಲೆಗಳಿಗೆ ಜು.19ರವರೆಗೂ ಮಳೆ ಮುಂದುವರಿಯುವ ಕಾರಣಕ್ಕೆ 'ಯೆಲ್ಲೋ ಅಲರ್ಟ್' ಕೊಡಲಾಗಿದೆ.
ಉತ್ತರ ಒಳನಾಡಿನಲ್ಲಿ ಮುಂಗಾರಿನ ಅಬ್ಬರ ತುಸು ತಗ್ಗುವ ಮನ್ಸೂಚನೆ ಇದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಮುಂದಿನ ಮೂರು ದಿನ ಮತ್ತು ಕಲಬುರಗಿ ವಿವಿಧ ಪ್ರದೇಶಗಳಲ್ಲಿ ಒಂದು ದಿನ ಮಾತ್ರ ಭಾರೀ ಮಳೆ ನಿರೀಕ್ಷೆ ಇದೆ. ಅಂದು ಮಾತ್ರ ಈ ಎರಡು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಮುಂದಿನ 48 ಗಂಟೆಗಳಲ್ಲಿ ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ ಸುಮಾರು 45-55 ಕಿಲೋ ಮೀಟರ್ ಇರಲಿದೆ. ಈ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಎಲ್ಲಿ ಎಷ್ಟು ಮಳೆ ದಾಖಲು?; ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಕೊಡಗಿನ ಭಾಗಮಂಡಲದಲ್ಲಿ 19 ಸೆಂ.ಮೀ. ಮಳೆ ಬಿದ್ದರೆ, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ 15 ಸೆಂ.ಮಿ, ಉತ್ತರ ಕನ್ನಡದ ಕ್ಯಾಸಲ್‌ರಾಕ್ ನಲ್ಲಿ 14ಸೆಂ.ಮಿ, ಚಿಕ್ಕಮಗಳೂರಿನ ಶೃಂಗೇರಿ, ಕಳಸ ಮತ್ತು ಕೊಪ್ಪದಲ್ಲಿ ತಲಾ 13 ಸೆಂ.ಮೀ ಮಳೆಯಾಗಿದೆ.
ಉಡುಪಿ ಜಿಲ್ಲೆಯ ಸಿದ್ದಾಪುರ ಮತ್ತು ಕೊಡಗಿನ ಸೋಮವಾರಪೇಟೆಯಲ್ಲಿ ತಲಾ 12 ಸೆಂ.ಮೀ. ಮಳೆ ದಾಖಲಾಗಿದೆ. ಇದು ಸೇರಿದಂತೆ ಕರಾವಳಿ ಹಾಗೂ ಮಲೆನಾಡಿ ಜಿಲ್ಲೆಗಳು, ದಕ್ಷಿಣ ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ದಾಖಲಾಗಿದೆ.
ರಾಜ್ಯದ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ರಾಯಚೂರಿನಲ್ಲಿ ಹಾಗೂ ರಾಜ್ಯ ಕನಿಷ್ಠ ತಾಪಮಾನ 17.6 ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
4 ದಿನದ ಮಳೆ ಮನ್ಸೂಚನೆ; ಬೆಂಗಳೂರಿನಲ್ಲಿ ಕಳೆದ ಎರಡು ವಾರದಿಂದಲೂ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ನಿಮಾರ್ಣವಾಗಿದೆ. ನಗರದಲ್ಲಿ ಬಿಸಿಲಿನ ದರ್ಶನವೇ ಅಪರೂಪ ಎಂಬಂತಾಗಿದೆ. ಕೆಲವು ಬಡಾವಣೆಗಳಲ್ಲಿ ಆಗಾಗ ತುಂತುರು ಮಳೆ ಸುರಿದರೆ, ಇನ್ನು ಕೆಲವೆಡೆ ಆಗಾಗ ಮಳೆಯಾಗುತ್ತಿದೆ.
ಇದೇ ವಾತಾವರಣ ಮುಂದಿನ ನಾಲ್ಕು ದಿನ ಅಂದರೆ ಜುಲೈ 18 ರವರೆಗೂ ಮುಂದುವರಿಯಲಿದೆ. ಈ ವೇಳೆ ವಾತಾವರಣದಲ್ಲಿ ತಾಪಮಾನದ ಪ್ರಮಾಣ ಕಡಿಮೆ ಇರಲಿದೆ. ಗರಿಷ್ಠ ತಾಪಮಾನ 27ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications