ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ
ಬೆಂಗಳೂರು, ಜೂ.30: ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಜುಲೈ 5ರವರೆಗೆ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಹಾಗೂ ಮಲೆನಾಡು ಸೇರಿದಂತೆ ಒಟ್ಟು ಏಳು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಜುಲೈ 5ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಮುಂದಿನ 5 ದಿನ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಆಗಲಿದೆ.
ಈ ಪೈಕಿ ಜುಲೈ 1ರಂದು ಕರಾವಳಿ ಭಾಗದಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಈ ಮೂರು ಜಿಲ್ಲೆಗಳಿಗೆ ಶುಕ್ರವಾರ ಒಂದು ದಿನ ಮಾತ್ರ ಆರೆಂಜ್ ಅಲರ್ಟ್ ನೀಡಲಾಗಿದೆ. ಸಮುದ್ರ ತೀರ ಪ್ರದೇಶಲ್ಲಿ ದೈತ್ಯ ಅಲೆಗಳು ದಡಕ್ಕೆ ಬಂದು ಅಪ್ಪಳಿಸುವ ಸಾಧ್ಯತೆ ಇದೆ. ಇಲ್ಲಿ ಪ್ರತಿ ಗಂಟೆಗೆ ಗಾಳಿಯು ಸುಮಾರು 30-40 ಕಿ. ಮೀ.ನಷ್ಟು ವೇಗವಾಗಿ ಬೀಸಲಿದೆ. ಈ ವೇಳೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಮಲೆನಾಡಿನ ಜಿಲ್ಲೆಗಳಲ್ಲಿ ಹಲವು ಪ್ರದೇಶಗಲ್ಲಿ ಧಾರಾಕಾರ ಮಳೆ ಬರುವ ನಿರೀಕ್ಷೆ ಇದೆ. ಎಲ್ಲೆಡೆ ಸಹಿತ ತಂಪು ಹಾಗೂ ಮೋಡ ಮುಸುಕಿದ ವತಾವರಣವೇ ಕಂಡು ಬರಲಿದೆ. ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಚದುರಿದಂತೆ ಮಳೆ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಕರಾವಳಿಯಲ್ಲಿ ಗುರುವಾರ ಗರಿಷ್ಠ ಮಳೆ; ಕಳೆದ ಒಂದು ವಾರದಿಂದಲೂ ಕರಾವಳಿ ಭಾಗದಲ್ಲಿ ಮುಂಗಾರು ಚುರುಕಾಗಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಎಡೆಬಿಡದೇ ವರುಣ ಅಬ್ಬರಿಸುತ್ತಿದ್ದಾನೆ. ಗುರುವಾರ ಬೆಳಗ್ಗೆ ಅರ್ಧ ಗಂಟೆಯಲ್ಲಿ ದಕ್ಷಿಣ ಕನ್ನಡದ ಒಂದು ಪ್ರದೇಶದಲ್ಲಿ 6 ಸೆಂ.ಮೀ. ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಡೀ ದಿನಕ್ಕೆ ಹೋಲಿಕೆ ಮಾಡಿದರೆ ಕರಾವಳಿ ಭಾಗದಲ್ಲಿ ಅತ್ಯಧಿಕ ಮಳೆ ಬಿದ್ದಿರುವ ಬಗ್ಗೆ ವರದಿಯಾಗಿದೆ.
#ಉಡುಪಿ ಜಿಲ್ಲೆಯಲ್ಲಿ ಕೂಡ ನಿನ್ನೆಯಿಂದ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ನಾಳೆ ಜಿಲ್ಲೆಯಾಧ್ಯಂತ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. #Udupi #Karnatakarains #Monsoon2022 #WesternGhats pic.twitter.com/kDkIQ4yzTk
— Karnataka Rains⛈️ (@Karnatakarains) June 30, 2022
ಮಲೆನಾಡು ಸೇರಿದಂತೆ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೊಟೆ, ಧಾರವಾರ, ವಿಜಯಪುರ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಸಾಮಾನ್ಯವಾಗಿ ಮಳೆ ಸುರಿದಿದೆ.

ಎಲ್ಲೆಲ್ಲೆ ಎಷ್ಟು ಮಳೆ ಆಗಿದೆ?; ಇನ್ನು ಗುರುವಾರ ಸಂಜೆ 6ಗಂಟೆಗೆ ವೇಳೆಗೆ ಉಡುಪಿ ಜಿಲ್ಲಾದ್ಯಂತ ಸರಾಸರಿ 75,70 ಮಿ.ಮೀ., ದಕ್ಷಿಣ ಕನ್ನಡದಲ್ಲಿ 137.23 ಮಿ.ಮೀ., ಉತ್ತರ ಕನ್ನಡದಲ್ಲಿ 31.10 ಮಿ.ಮೀ., ಶಿವಮೊಗ್ಗ 6.27 ಮಿ.ಮೀ., ಹಾಸನದಲ್ಲಿ 6.18 ಮಿ.ಮೀ., ಚಿಕ್ಕಮಗಳೂರು 9,87 ಮಿ.ಮೀ. ಹಾಗೂ ಕೊಡಗು ಜಿಲ್ಲೆಯಲ್ಲಿ 27.64 ಮಿ.ಮೀ ಸರಾಸರಿ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ವರದಿ ತಿಳಿಸಿದೆ.












Click it and Unblock the Notifications