ಜುಲೈ 19ರ ತನಕ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಮಳೆ
ಬೆಂಗಳೂರು ಜುಲೈ 08: ಕರ್ನಾಟಕದ ಕರಾವಳಿ, ಮಲೆನಾಡು ಪ್ರದೇಶದಲ್ಲಿ ಜುಲೈ 19ರ ತನಕ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಅಲ್ಲದೇ ಮುಂಬೈ, ಮಹಾರಾಷ್ಟ್ರ, ಕೇರಳ, ಆಂಧ್ರ ಪ್ರದೇಶದ ಹಲವು ಭಾಗದಲ್ಲಿಯೂ ಮಳೆ ಅಬ್ಬರಿಸಲಿದೆ.
Recommended Video
ಭಾರತೀಯ ಹವಾಮಾನ ಇಲಾಖೆ ಬೆಂಗಳೂರಿನ ಅಧಿಕಾರಿ, ವಿಜ್ಞಾನಿ ಪ್ರಸಾದ್ ಈ ಕುರಿತು ಮಾಹಿತಿ ನೀಡಿದರು. ಪ್ರಸ್ತುತ ದೇಶದ ಕೆಲವು ಭಾಗಗಳಲ್ಲಿನ ಹವಾಮಾನದಲ್ಲಿನ ಬದಲಾವಣೆ ಜುಲೈ 19 ರವರೆಗೆ ಅಂದರೆ 11 ದಿನಗಳ ಕಾಲ ಹೀಗೆ ಮುಂದುವರಿಯಲಿವೆ.
ಇದರಿಂದ ಕರ್ನಾಟಕ ರಾಜ್ಯದ ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು (ರೆಡ್ ಅಲರ್ಟ್ ಘೋಷಿಸಲಾಗಿದೆ) ಮಲೆನಾಡು, ದಕ್ಷಿಣ ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹೇಳಿದರು.

ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಲೋವರ್ ಪೆರಿಯಾರ್ ಮತ್ತು ಕಲ್ಲರ್ ಕುಟ್ಟಿ ಅಣೆಕಟ್ಟುಗಳ ಭಾಗದಲ್ಲಿ (ರೆಡ್ ಅಲರ್ಟ್) ಅತ್ಯಧಿಕ ಹಾಗೂ ತ್ರಿಶೂರ್ ಜಿಲ್ಲೆಯ ಪೆರಿಂಗಲ್ಕುತ್ ಅಣೆಕಟ್ಟಿನ ಸುತ್ತಮುತ್ತಲಿನ ಭಾಗದಲ್ಲಿ ಭಾರೀ ಮಳೆ ಬೀಳಲಿದೆ. ಮಹಾರಾಷ್ಟ್ರ, ಮುಂಬೈ, ಸತರಾ, ಉತ್ತರ ಕೊಂಕಣ ಹಾಗೂ ಗೋವಾದ ಒಂದಷ್ಟು ಭಾಗಗಳಲ್ಲಿ ಮಳೆ ಆರ್ಭಟಿಸಲಿದೆ ಎಂದು ತಿಳಿದು ಬಂದಿದೆ.
ವಾಯುಭಾರ ಕುಸಿತ; ಕಳೆದ ಸೋಮವಾರ ರಾತ್ರಿ ರಾಜ್ಯದ ಕರಾವಳಿ ಭಾಗದ ಅರಬ್ಬೀ ಸಮುದ್ರದಲ್ಲಿ ಉಂಟಾಗಿದ್ದ ಮೇಲ್ಮೈ ಸುಳಿಗಾಳಿ ದುರ್ಬಲಗೊಂಡಿಲ್ಲ. ಬದಲಾಗಿ ತೀವ್ರಗೊಂಡಿದ್ದು, ರಾಜ್ಯದ ಪಶ್ಚಿಮ ಘಟ್ಟಗಳತ್ತ ಗಂಟೆಗೆ ಸುಮಾರು 50 ಕಿ. ಮೀ. ವೇಗದಲ್ಲಿ ಚಲಿಸುತ್ತಿದೆ. ಈ ತೇವ ಸಹಿತ ಗಾಳಿಯು ಅರಬ್ಬೀ ಸಮುದ್ರ ಮಟ್ಟಕ್ಕಿಂತ ಸುಮಾರು 5-6 ಕಿ. ಮೀ.ವರೆಗೆ ಎತ್ತರದಲ್ಲಿ ಇದೆ.

ಕೇರಳ, ಆಂಧ್ರ ಕರಾವಳಿ; ಸಾಲದೆಂಬಂತೆ ಮಹಾರಾಷ್ಟ್ರ ಕರಾವಳಿ ಭಾಗದಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತ ಕೇರಳ ರಾಜ್ಯ ಕರಾವಳಿ ಕಡೆಗೆ ಸಾಗಿದೆ. ಇದು ತೀವ್ರಗೊಂಡರೆ ಚಂಡಮಾರುತವಾಗಿ ಬದಲಾಗಬಹುದು ಎಂದೂ ಅಂದಾಜಿಸಲಾಗಿದೆ.
ಓಡಿಶಾದ ದಕ್ಷಿಣ ಕರಾವಳಿಯಿಂದ ಆಂಧ್ರ ಕರಾವಳಿಯ ಬಂಗಾಳಕೊಲ್ಲಿವರೆಗೂ ಸಮುದ್ರ ಮಟ್ಟದಲ್ಲಿ ಮೇಲ್ಮೈ ಸುಳಿಗಾಳಿಯೊಂದು ಎದ್ದಿದೆ. ಇದರ ವೇಗವು ಗುರುವಾರಕ್ಕೆ ಹೋಲಿಕೆ ಮಾಡಿದರೆ ತುಸು ಹೆಚ್ಚಾಗಿದೆ. ಅಲ್ಲದೇ ಉತ್ತರ ಭಾರತದ ಕಡೆಗೆ ಭೂ ಮೇಲ್ಮೈನಲ್ಲಿ ಗಾಳಿಯ ಒತ್ತಡ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶಾದ್ಯಂತ ಉಂಟಾಗಿರುವ ಈ ಹವಾಮಾನ ವೈಪರಿತ್ಯಗಳು ಸದ್ಯ ಕೊನೆಗೊಳ್ಳುವ ಲಕ್ಷಣಗಳಂತು ಇಲ್ಲ. ಇವುಗಳು ಜುಲೈ 19ರವರೆಗೂ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದ್ದು, ಈ ಕಾರಣಗಳಿಂದ ಕರ್ನಾಟಕದ ಕರಾವಳಿ, ಮಲೆನಾಡು ಸೇರಿದಂತೆ ದೇಶದ ಮುಂಬೈ, ಮಹಾರಾಷ್ಟ್ರ, ಕೇರಳ, ಆಂಧ್ರದ ಅನೇಕ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿಯಲಿದೆ.












Click it and Unblock the Notifications