ಐಎಂಎ ಹಗರಣದ ತನಿಖೆ : ಬಿಜೆಪಿ ಸಂಸದರಿಂದ ಅಮಿತ್ ಶಾಗೆ ಮನವಿ
ಬೆಂಗಳೂರು, ಜೂನ್ 26 : ಐಎಂಎ ಹಗರಣದ ಕುರಿತು ಕೇಂದ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಬಿಜೆಪಿ ಮನವಿ ಮಾಡಿದೆ. ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಇದುವರೆಗೂ 32 ಕೋಟಿ ರೂ. ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದೆ.
ಕರ್ನಾಟಕದ ಬಿಜೆಪಿ ಸಂಸದರ ನಿಯೋಗ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿತು. ಐಎಂಎ ಹಗರಣದ ಕುರಿತು ಕೇಂದ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಮನವಿ ಸಲ್ಲಿಸಿದರು.
ಈ ಹಗರಣದಿಂದಾಗಿ ಸಾಮಾನ್ಯ ಜನರಿಗೆ ಆಗಿರುವ ಅನ್ಯಾಯದ ವಿರುದ್ಧ, ಕೇಂದ್ರ ಗೃಹ ಸಚಿವಾಲಯ ತನಿಖೆ ನಡೆಸಿ ಅಲ್ಲಿ ಆದ ಅವ್ಯವಹಾರವನ್ನು ಬಯಲಿಗೆಳೆಯಬೇಕು ಹಾಗೂ ಶಾಮೀಲಾಗಿರುವ ಎಲ್ಲರ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಲಾಗಿದೆ.

ಪ್ರಸ್ತುತ ಐಎಂಎ ಹಗರಣದ ಬಗ್ಗೆ ಕರ್ನಾಟಕ ಸರ್ಕಾರ ರಚನೆ ಮಾಡಿರುವ ಎಸ್‌ಐಟಿ ತನಿಖೆಯನ್ನು ನಡೆಸುತ್ತಿದೆ. ಬಿ.ಆರ್.ರವಿಕಾಂತೇಗೌಡ ಅವರ ನೇತೃತ್ವದ ಎಸ್‌ಐಟಿ ತನಿಖೆ ನಡೆಸುತ್ತಿದ್ದು, 15 ಸಾವಿರಕ್ಕೂ ಅಧಿಕ ದೂರುಗಳು ಇದುವರೆಗೂ ದಾಖಲಾಗಿವೆ.
ಹಗರಣದ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ಇದುವರೆಗೂ 32 ಕೋಟಿಗೂ ಅಧಿಕ ಮೊತ್ತದ ಆಸ್ತಿಗಳನ್ನು ವಶಕ್ಕೆ ಪಡೆದಿದೆ. ಐಎಂಎ ಮಾಲೀಕ ಮನ್ಸೂರ್ ಖಾನ್ ಬಂಧನ ಮಾತ್ರ ಆಗಿಲ್ಲ. ಆತ ವಿದೇಶದಲ್ಲಿರುವ ಮಾಹಿತಿ ಎಸ್‌ಐಟಿಗೆ ಸಿಕ್ಕಿದೆ.
ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಐಎಂಎ ಹಗರಣದಲ್ಲಿ ರಾಜ್ಯ ಸರ್ಕಾರ ಮೌನ ವಹಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ. ಪ್ರಕರಣದಲ್ಲಿ ಸಿಬಿಐಗೆ ವಹಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ.












Click it and Unblock the Notifications