ಕೆಆರ್ ಪೇಟೆ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆಗಿಲ್ಲ ಅಂಕುಶ

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಜೂನ್ 17 : ಜಿಲ್ಲೆಯಲ್ಲಿ ಅಕ್ರಮ ಮರಳು, ಅಕ್ರಮ ಕಲ್ಲುಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಜಿಲ್ಲಾಡಳಿತ ತಡೆಯುವಲ್ಲಿ ವಿಫಲವಾಗಿರುವುದು ಎದ್ದು ಕಾಣುತ್ತಿದೆ.

ಗಣಿ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ಹಲವೆಡೆ ದಾಳಿ ನಡೆಸಿ ಮಾಲನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರೂ, ಅಕ್ರಮ ದಂಧೆ ನಡೆಸುವವರು ರಂಗೋಲಿ ಕೆಳಗೆ ನುಸುಳಿ ಯಾವುದೇ ಅಡೆತಡೆಯಿಲ್ಲದೆ ತಮ್ಮ ಚಟುವಟಿಕೆ ಮುಂದುವರೆಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಲ್ಲುಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆಗೆ ಹೆಚ್ಚಿನ ಬೇಡಿಕೆ ಇರುವ ಕಾರಣದಿಂದಾಗಿ ಭೂ ಸಂಪತ್ತನ್ನು ಲೂಟಿ ಹೊಡೆಯುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಇದಕ್ಕೆ ಜನಪ್ರತಿನಿಧಿಗಳ ಕುಮ್ಮಕ್ಕಿದ್ದು, ಹತ್ತಿಕ್ಕುವುದು ಸಾಧ್ಯವಾಗದ ಮಾತಾಗಿದೆ. [ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ಮತ್ತೊಂದು ದೂರು]

Illegal sand mining and quarrying uninhibited in KR Pet

ಕೆ.ಆರ್.ಪೇಟೆ ತಾಲೂಕೊಂದರಲ್ಲೇ ಸುಮಾರು 55 ಮಂದಿ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವುದು ಕಂಡು ಬಂದಿದ್ದು, ಇವರಿಗೆ ಅಧಿಕಾರಿಗಳ ಮತ್ತು ರಾಜಕೀಯ ಪ್ರಭಾವಿಗಳ ಕುಮ್ಮಕ್ಕಿದೆ ಎಂಬ ಆರೋಪ ಗ್ರಾಮಸ್ಥರದ್ದಾಗಿದೆ.

ಈಗಾಗಲೇ ತಾಲೂಕಿನಲ್ಲಿ ಕಲ್ಲುಗಣಿಗಾರಿಕೆ ಮಾಡುತ್ತಿರುವವರ ಪೈಕಿ ಹೆಚ್ಚಿನವರದು ಪರವಾನಗಿ ನವೀಕರಣವೇ ಆಗಿಲ್ಲ. ಸುಮಾರು ಹತ್ತು ವರ್ಷಗಳ ಹಿಂದೆ ಪಡೆದ ಪರವಾನಗಿಯನ್ನು ನವೀಕರಣ ಮಾಡದೆ ಕಲ್ಲುಗಣಿಗಾರಿಕೆ ನಡೆಸುತ್ತಿದ್ದು, ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು 'ಪ್ರಸಾದ' ತಿಂದು ತೆಪ್ಪಗಾಗುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ['ಇಂಥ ಕೆಟ್ಟ ಮುಖ್ಯಮಂತ್ರಿಯನ್ನು ನಾನೆಂದು ಕಂಡಿಲ್ಲ']

ಲೈಸನ್ಸ್ ಹೊಂದಿರುವವರು ಸರ್ಕಾರಕ್ಕೆ ವಾರ್ಷಿಕ ವಾರ್ಷಿಕ 50ರಿಂದ 1ಲಕ್ಷ ರು. ರಾಜಸ್ವ ನೀಡಬೇಕು. ಆದರೆ ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಲಂಚ ನೀಡುವ ಮೂಲಕ ಸರ್ಕಾರಕ್ಕೆ ರಾಜಸ್ವ ನೀಡದೆ ವಂಚಿಸುತ್ತಿದ್ದಾರೆ. ಇನ್ನು ಡಿ ಗ್ರೂಪ್ ಉದ್ಯೋಗಿಯಾಗಿರುವ ಮಹಿಳೆಯೊಬ್ಬರು ಕೂಡ ಹಳೆಯ ಲೈಸನ್ಸ್‌ನಲ್ಲೇ ಗಣಿಗಾರಿಕೆ ನಡೆಸುತ್ತಿದ್ದಾರೆ.

ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ಗ್ರಾಮ ಪಂಚಾಯಿತಿ, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಇವರಿಗೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಜಾರಿರುವುದು ಹಲವು ಅನುಮನಗಳಿಗೆ ಎಡೆ ಮಾಡಿಕೊಟ್ಟಿದೆ.

ಕಲ್ಲು ಗಣಿಗಾರಿಕೆಯಿಂದ ಪರಿಸರ ನಾಶವಾಗುತ್ತಿದೆ. ಜೊತೆಗೆ ಸರ್ಕಾರಕ್ಕೂ ತೆರಿಗೆ ವಂಚನೆಯಾಗುತ್ತಿದ್ದರೂ ಜಿಲ್ಲಾಡಳಿತ ಏಕೆ ಗಮನಹರಿಸುತ್ತಿಲ್ಲ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಲಿ ಎಂಬುದು ಪರಿಸರ ಉಳಿಸಿ ಹೋರಾಟ ಸಮಿತಿಯ ಸದಸ್ಯ ಕೆ.ಜೆ.ಚಂದ್ರಶೇಖರ್ ಅವರ ಆಗ್ರಹವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Illegal sand mining and quarrying is going on uninhibited in KR Pet in Mandya district. Illegal miners are looting the treasure. Even though environmentalists are fighting against illegal mining, the concerned authorities have failed to curb and restrain it.
Please Wait while comments are loading...