ಅನಧಿಕೃತ ಜಾಹೀರಾತು ಹಾವಳಿ; ಸಮೀಕ್ಷೆಗೆ ಹೈಕೋರ್ಟ್ ಆದೇಶ
ಬೆಂಗಳೂರು, ಅಕ್ಟೋಬರ್ 12; ರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಹಾವಳಿಗೆ ಕಡಿವಾಣ ಹಾಕಲು ವಿಫಲವಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಕರ್ನಾಟಕ ಹೈಕೋರ್ಟ್ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದೆ. ಅಷ್ಟೇ ಅಲ್ಲ, ಬಿಬಿಎಂಪಿ ಬೆಂಗಳೂರಿಗೆ ಮೊದಲ ಶತ್ರುವಾಗಿ ಪರಿಣಮಿಸಿದೆ ಎಂದು ಕಿಡಿ ಕಾರಿದೆ.
ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ ಹಾವಳಿ ತಡೆಗಟ್ಟಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ಮಾಯಿಗೇಗೌಡ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ಅರ್ಜಿದಾರರೊಬ್ಬರ ಪರ ಹಿರಿಯ ವಕೀಲರು ವಾದ ಮಂಡಿಸಿ, ನಗರದಲ್ಲಿ ವಾಣಿಜ್ಯ ಜಾಹೀರಾತು ಫಲಕಗಳು ಅಳವಡಿಸಬೇಕಾದರೆ ನಿರ್ದಿಷ್ಟ ಶುಲ್ಕ ಪಾವತಿಸಿ ಆಯುಕ್ತರಿಂದ ಅನುಮತಿ ಪಡೆದುಕೊಳ್ಳಬೇಕು. ಆದರೆ, ಈ ರೀತಿ ಎಷ್ಟು ಅನುಮತಿಗಳನ್ನು ನೀಡಲಾಗಿದೆ?, ಅದರಿಂದ ಶುಲ್ಕದ ರೂಪದಲ್ಲಿ ಎಷ್ಟು ಹಣ ಪಾಲಿಕೆಗೆ ಬಂದಿದೆ? ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ, ಎಲ್ಲೆಡೆ ನಾಯಿಕೊಡೆಗಳಂತೆ ಜಾಹೀರಾತುಗಳು ತಲೆ ಎತ್ತುತ್ತಿವೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಅದಕ್ಕೆ ನ್ಯಾಯಪೀಠ, ಅನಧಿಕೃತ ಜಾಹೀರಾತು ಫಲಕಗಳಿಗೆ ಅವಕಾಶ ಮಾಡಿಕೊಡುವುದು ಪಾಲಿಕೆಗೆ ಕೋಟ್ಯಾಂತರ ರೂಪಾಯಿ ಆದಾಯ ಖೋತಾ ಆಗುವುದರ ಜೊತೆಗೆ ನಗರದ ಸೌಂದರ್ಯ ವಿಕಾರಗೊಳ್ಳುವುದಕ್ಕೂ ದಾರಿ ಆಗುತ್ತದೆ. ಅಕ್ರಮ ಜಾಹೀರಾತು ಫಲಕಗಳಿಂದ ಪಾಲಿಕೆಗೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಶುಲ್ಕ ಪಡೆದುಕೊಳ್ಳಲು ಅವಕಾಶವಿದ್ದರೂ ಅದನ್ನು ಪಾಲಿಕೆ ಕೈಚೆಲ್ಲಿದಂತಿದೆ.
ಒಂದು ಕಡೆ ಆದಾಯ ಬರುವುದನ್ನು ತಪ್ಪಿಸಿಕೊಳ್ಳುವ ಪಾಲಿಕೆ, ಮತ್ತೊಂದಡೆ ನಗರದ ಮೂಲಸೌಕರ್ಯಗಳ ಅಭಿವೃದ್ಧಿ ವಿಚಾರ ಬಂದಾಗ ಹಣ ಇಲ್ಲವೆಂದು ಬೆನ್ನು ತಿರುಗಿಸುತ್ತದೆ, ಕೈ ಎತ್ತುತ್ತದೆ. ತೆರಿಗೆ ಸಂಗ್ರಹಿಸಲು ವಿಫಲವಾಗಿರುವ ಪಾಲಿಕೆ, ಅದರ ಹೊರೆಯನ್ನು ನಾಗರಿಕರ ಮೇಲೆ ಹೊರಿಸುತ್ತಿದೆ. ಈ ರೀತಿ ಬಿಬಿಎಂಪಿ ನಗರಕ್ಕೆ ಮೊದಲ ಶತ್ರುವಾಗಿ ಪರಿಣಮಿಸಿದೆ ಎಂದು ಹೇಳಿತು.
ಮೂರು ವರ್ಷದ ವರದಿ ಕೊಡಿ:ಅಲ್ಲದೆ, ಕಳೆದ ಮೂರು ವರ್ಷಗಳಲ್ಲಿ ವಾಣಿಜ್ಯ ಜಾಹೀರಾತು ಫಲಕಗಳ ಅಳವಡಿಕೆಗೆ ಅನುಮತಿ ಕೋರಿ ಆಯುಕ್ತರಿಗೆ ಎಷ್ಟು ಪ್ರಸ್ತಾವನೆಗಳು ಬಂದಿವೆ. ಅವುಗಳನ್ನು ಎಷ್ಟು ಪ್ರಸ್ತಾವನೆಗಳಿಗೆ ಅನುಮತಿ ನೀಡಲಾಗಿದೆ. ಅನುಮತಿ ನೀಡಲಾದ ಪ್ರಸ್ತಾವನೆಗಳಿಂದ ಕಟ್ಟಿಸಿಕೊಳ್ಳಲಾದ ಒಟ್ಟು ಶುಲ್ಕದ ಮೊತ್ತವೆಷ್ಟು ಎಂದು ಕೋರ್ಟ್ ಪ್ರಶ್ನಿಸಿತು.
ಅವಧಿ ಮುಗಿದ ಬಳಿಕವೂ ಎಷ್ಟು ಜಾಹೀರಾತು ಫಲಕಗಳನ್ನು ಮುಂದುವರಿಸಲಾಗಿದೆ. ಅದರ ವಿರುದ್ಧ ಕೈಗೊಂಡ ಕ್ರಮಗಳೇನು, ಅನುಮತಿ ಪಡೆದು ಶುಲ್ಕ ಕಟ್ಟದವರ ವಿರುದ್ಧ ಯಾವ ಕ್ರಮ ಜರುಗಿಸಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಸಮಗ್ರ ವರದಿ ಸಲ್ಲಿಸಬೇಕು ಎಂದು ಪಾಲಿಕೆಗೆ ನಿರ್ದೇಶನ ನೀಡಿದ ಹೈಕೋರ್ಟ್ ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿತು.












Click it and Unblock the Notifications