ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಟಿ ವಿವಾದ: ಮಗು ಚಿವುಟಿ, ತೊಟ್ಟಿಲು ತೂಗುತ್ತಿರುವವರು ಯಾರು?

By ಬಾಲರಾಜ್ ತಂತ್ರಿ
|
Google Oneindia Kannada News

ಧಾರವಾಡ ಮತ್ತು ರಾಯಚೂರು ಈ ಎರಡು ಜಿಲ್ಲೆಗಳ ಜನತೆ ರಸ್ತೆಗಿಳಿದು ಹೋರಾಟ ನಡೆಸುತ್ತಿರುವುದಕ್ಕೆ ಕಾರಣವಾದ ಐಐಟಿ (ಭಾರತೀಯ ತಂತ್ರಜ್ಞಾನ ಸಂಸ್ಥೆ) ಸ್ಥಾಪನೆ ವಿವಾದಕ್ಕೆ ಮೂಲ ಕಾರಣಕರ್ತರು ಯಾರು?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರಕಾರವೋ, ಕೇಂದ್ರ ಮಾನವ ಸಂಪನ್ಮೂಲ ಖಾತೆಯೋ ಅಥವಾ ಧಾರವಾಡದ ಜನಪ್ರತಿನಿಧಿಗಳ ಯಶಸ್ವಿ ಲಾಬಿಯೋ? ಅದೇನೇ ಇರಲಿ ರಾಜ್ಯದಲ್ಲಿ ಐಐಟಿ ಹೊಂದುವ ಕರ್ನಾಟಕದ ಬಹುದಿನಗಳ ಕನಸನ್ನು ಮೋದಿ ಸರಕಾರದ ನನಸು ಮಾಡಿದ್ದಂತೂ ನಿಜ.

ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿ ಬಜೆಟಿನಲ್ಲಿ ಕರ್ನಾಟಕಕ್ಕೆ ಐಐಟಿ ಪ್ರಕಟಿಸಿದ ನಂತರ, ಇದು ನಮ್ಮ ಜಿಲ್ಲೆಗೇ ಬರಬೇಕೆನ್ನುವ ಚಟುವಟಿಕೆ ಗರಿಗೆದರಿತು. ಐಐಟಿ ಸ್ಥಾಪನೆಗೆ ಸೂಕ್ತ ಜಾಗ ಸೂಚಿಸಿ ಎಂದು ಎಚ್ ಆರ್ ಡಿ ಸಚಿವಾಲಯದಿಂದ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಅಧಿಕೃತ ಪತ್ರ ಬಂದ ನಂತರ ಐಐಟಿಗಾಗಿನ ಕೂಗು 'ಚಳುವಳಿ' ರೂಪಕ್ಕೆ ತಿರುಗಿದ್ದು ನಮ್ಮ ಮುಂದಿದೆ. (ಐಐಟಿ ಮೈಸೂರಿನ ಕೈ ತಪ್ಪಲು ಏನು ಕಾರಣ)

ಐಐಟಿ ಕನಸು ಹೊತ್ತಿದ್ದ ಜಿಲ್ಲೆಗಳಲ್ಲಿ ಮೈಸೂರು, ಹಾಸನ, ಧಾರವಾಡ, ವಿಜಯಪುರ, ರಾಯಚೂರು, ಗುಲ್ಬರ್ಗ ಜಿಲ್ಲೆಗಳು ಮಂಚೂಣಿಯಲ್ಲಿದ್ದವು. ಅಯಾಯ ಜಿಲ್ಲೆಗಳ ಜನಪ್ರತಿನಿಧಿಗಳು ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ತೀವ್ರ ಲಾಬಿಯನ್ನೂ ನಡೆಸಿದ್ದರು. ಸಾರ್ವಜನಿಕ ವಲಯದಲ್ಲೂ ಇದು ಭಾರೀ ಚರ್ಚೆಯ ವಿಷಯವಾಯಿತು.

ಹಲವು ಸುತ್ತಿನ ಮಾತುಕತೆಯ ನಂತರ ಸಿದ್ದರಾಮಯ್ಯ ಸರಕಾರ ಮೈಸೂರು, ರಾಯಚೂರು ಮತ್ತು ಧಾರವಾಡ ಈ ಮೂರು ಜಿಲ್ಲೆಗಳಲ್ಲಿ ಯಾವುದಾದರೂ ಜಿಲ್ಲೆ ಐಐಟಿ ಸ್ಥಾಪನೆಗೆ ಓಕೆ ಎಂದು ಕೇಂದ್ರಕ್ಕೆ ರೆಕಮೆಂಡ್ ಮಾಡಿತ್ತು.

ರಾಜ್ಯ ಸರಕಾರದ ವರದಿಯಂತೆ ಕೇಂದ್ರದ ತಂಡ ಮೂರೂ ಜಿಲ್ಲೆಗಳಲ್ಲಿ ಸುತ್ತಾಡಿ ಐಐಟಿ ಸ್ಥಾಪನೆಗೆ ಯಾವ ನಗರ ಸೂಕ್ತ ಎನ್ನುವ ತನ್ನ ವರದಿಯನ್ನು ಸ್ಮೃತಿ ಇರಾನಿಯವರಿಗೆ ನೀಡಿತ್ತು. (ಧಾರವಾಡದಲ್ಲಿ ಐಐಟಿ : ಅಧಿಕೃತ ಆದೇಶ)

ತಂಡದ ವರದಿಯನ್ವಯ ಜೊತೆಗೆ ಸಿದ್ದರಾಮಯ್ಯನವರ ರೆಕಮೆಂಡ್ ಮಾಡಿದಂತೆ, ರಾಜ್ಯದ ಶೈಕ್ಷಣಿಕ ರಾಜಧಾನಿ ಧಾರವಾಡಲ್ಲಿ ಐಐಟಿ ಸ್ಥಾಪಿಸಲಾಗುವುದು ಎಂದು ಕೇಂದ್ರ ಸರಕಾರ ಅಧಿಕೃತವಾಗಿ ಪ್ರಕಟಿಸಿತು. ಇದರಿಂದ ಧಾರವಾಡದ ಜನತೆ ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ರಾಯಚೂರು ಮತ್ತು ಮೈಸೂರಿನ ಜನತೆಯಿಂದ ನಿರೀಕ್ಷೆಯಂತೆ ಬೇಸರ ವ್ಯಕ್ತವಾಯಿತು. ಮುಂದೆ ಓದಿ..

ಮೈಸೂರಿನಲ್ಲಿ ಅಷ್ಟೇನೂ ಪ್ರತಿಭಟನೆ ವ್ಯಕ್ತವಾಗಿಲ್ಲ

ಮೈಸೂರಿನಲ್ಲಿ ಅಷ್ಟೇನೂ ಪ್ರತಿಭಟನೆ ವ್ಯಕ್ತವಾಗಿಲ್ಲ

ಕೇಂದ್ರದ ನಿರ್ಧಾರದ ನಂತರ ಮೈಸೂರಿನಲ್ಲಿ ಅಷ್ಟೇನೂ ಪ್ರತಿಭಟನೆ ವ್ಯಕ್ತವಾಗದಿದ್ದರೂ, ರಾಯಚೂರಿನಲ್ಲಿ ಪ್ರತಿಭಟನೆಯ ಕಾವು ತೀವ್ರಗೊಳ್ಳಲಾರಂಭಿಸಿತು. ಅಂದು ಮೂರು ಜಿಲ್ಲೆಗಳಲ್ಲಿ ಯಾವುದಾದರೂ ಓಕೆ ಎಂದಿದ್ದ ಸಿದ್ದರಾಮಯ್ಯ ಸರಕಾರ, ನಂತರ ರಾಯಚೂರಿನಲ್ಲಿ ಐಐಟಿ ಸ್ಥಾಪಿಸಿ ಎಂದು ಕೇಂದ್ರಕ್ಕೆ ಪತ್ರ ಬರೆದದ್ದು ರಾಯಚೂರು ಮತ್ತು ಧಾರವಾಡಗಳಲ್ಲಿ ಪ್ರತಿಭಟನೆ ಹೆಚ್ಚಲು ಕಾರಣವಾಯಿತು. ಮೈಸೂರು ಸಂಸದ ಪ್ರತಾಪ್ ಸಿಂಹ ತನ್ನ ಕ್ಷೇತ್ರದಲ್ಲಿ ಐಐಟಿ ಸ್ಥಾಪನೆಯಾಗದೇ ಇರಲು ಸಿಎಂ ಅವರೇ ಕಾರಣ ಎಂದು ಬೇಸರವನ್ನೂ ವ್ಯಕ್ತ ಪಡಿಸಿದ್ದೂ ಉಂಟು.

ಸಿಎಂ ಯು ಟರ್ನ್

ಸಿಎಂ ಯು ಟರ್ನ್

ತಾವೇ ಅಂದು ಸಂಪುಟ ಸಭೆಯಲ್ಲಿ ಚರ್ಚಿಸಿ, ಸಾಧಕಬಾದಕಗಳನ್ನು ಅವಲೋಕಿಸಿ ತನ್ನ ಸ್ವಂತ ಜಿಲ್ಲೆ ಮೈಸೂರು, ಧಾರವಾಡ ಮತ್ತು ರಾಯಚೂರು ಜಿಲ್ಲೆಯನ್ನು ರೆಕಮೆಂಡ್ ಮಾಡಿದ್ದ ಸಿದ್ದರಾಮಯ್ಯ ಸರಕಾರ, ಕೇಂದ್ರದ ಅಧಿಕೃತ ಪ್ರಕಟಣೆಯ ನಂತರ ರಾಯಚೂರು ಜಿಲ್ಲೆಯ ಪರವಾಗಿ ನಿಂತಿದ್ದು ಯಾಕೆ ಎನ್ನುವುದೇ ಇಲ್ಲಿರುವ ಹಲವು ಗೊಂದಲಕ್ಕೆ ಕಾರಣ.

ಬಿಜೆಪಿ ಲಾಭ ತೆಗೆದುಕೊಳ್ಳುವುದನ್ನು ತಪ್ಪಿಸುವ ಸಿದ್ದು ನಿರ್ಧಾರ

ಬಿಜೆಪಿ ಲಾಭ ತೆಗೆದುಕೊಳ್ಳುವುದನ್ನು ತಪ್ಪಿಸುವ ಸಿದ್ದು ನಿರ್ಧಾರ

ಧಾರವಾಡದಲ್ಲಿ ಐಐಟಿ ಮಂಜೂರಾಗಲು ತಾವೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಹಾದ್ ಜೋಶಿ ಮತ್ತು ಜಗದೀಶ್ ಶೆಟ್ಟರ್ ಪ್ರಚಾರಗಿಟ್ಟಿಸಿ ಕೊಳ್ಳುತ್ತಿರುವುದನ್ನು ತಪ್ಪಿಸಲು ಮುಖ್ಯಮಂತ್ರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆಯೇ ಎನ್ನುವುದು ಈ ಭಾಗದ ಜನರಲ್ಲಿ ಕಾಡುತ್ತಿರುವ ಸಂಶಯ.

ಪ್ರಲ್ಹಾದ್ ಜೋಶಿ ವ್ಯವಸ್ಥಿತ ಲಾಬಿ

ಪ್ರಲ್ಹಾದ್ ಜೋಶಿ ವ್ಯವಸ್ಥಿತ ಲಾಬಿ

ಮೂಲಗಳ ಪ್ರಕಾರ ಧಾರವಾಡದಲ್ಲಿ ಐಐಟಿ ಮಂಜೂರಾಗಲು ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ನಡೆದ ವ್ಯವಸ್ಥಿತ ಲಾಬಿಯೇ ಕಾರಣ ಎನ್ನಲಾಗುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಜೋಶಿ ಪ್ರತ್ಯೇಕವಾಗಿ ಸ್ಮೃತಿ ಇರಾನಿಯವರನ್ನು ಭೇಟಿ ಕೂಡಾ ಮಾಡಿದ್ದರು. ಜೊತೆಗೆ, ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ಕೇಂದ್ರ ಹಸಿರು ನಿಶಾನೆ ತೋರಿದೆ ಎನ್ನುವುದನ್ನು ಮೊದಲು ಬಹಿರಂಗಗೊಳಿಸಿದ್ದು ಜೋಶಿಯವರೇ.

ಸಿಎಂಗಾದ ಹಿನ್ನಡೆ?

ಸಿಎಂಗಾದ ಹಿನ್ನಡೆ?

ಹುಬ್ಬಳ್ಳಿ ಧಾರವಾಡ ಬಿಜೆಪಿಯ ಭದ್ರಕೋಟೆ, ರಾಯಚೂರು ಕಾಂಗ್ರೆಸ್ಸ್ ವರ್ಚಸ್ಸು ಹೆಚ್ಚಿರುವ ಜಿಲ್ಲೆ. ಮುಖ್ಯಮಂತ್ರಿಗಳು ರಾಯಚೂರಿನಲ್ಲಿ ಪ್ರತಿಷ್ಟಿತ ಐಐಟಿ ಸ್ಥಾಪನೆಗೆ ರೆಕಮೆಂಡ್ ಮಾಡಿ ರಾಜಕೀಯ ದಾಳ ಹೂಡುತ್ತಾರೆಂದೇ ಎಲ್ಲರೂ ನಂಬಿದ್ದರು. ಆದರೆ ಧಾರವಾಡದಲ್ಲಿ ಐಐಟಿ ಎಂದು ಪ್ರಕಟವಾದ ನಂತರ ಸಿಎಂ ರಾಯಚೂರಿನಲ್ಲಿ ಸ್ಥಾಪಿಸಿ ಎಂದು ಪತ್ರ ಬರೆದಿದ್ದು, ಅವರಿಗಾದ ಹಿನ್ನಡೆ ಎಂದೇ ಭಾವಿಸಲಾಗುತ್ತಿದೆ.

ಕೇಂದ್ರ ಸರಕಾರ ಸೇಫ್

ಕೇಂದ್ರ ಸರಕಾರ ಸೇಫ್

ಈ ವಿಚಾರದಲ್ಲಿ ಕೇಂದ್ರ ಸರಕಾರ ಸೇಫ್ ಆಗಿದೆ. ಬಿಜೆಪಿ ಲಾಬಿ ವರ್ಕೌಟ್ ಆಗಿದೆ ಎನ್ನುವ ಮಾತಿದ್ದರೂ, ಕರ್ನಾಟಕ ಸರಕಾರದ ಕ್ಯಾಬಿನೆಟ್ ಅನುಮೋದಿಸಿದ ಮೂರು ಜಿಲ್ಲೆಗಳಲ್ಲಿ ಒಂದನ್ನು ಆಯ್ಕೆ ಮಾಡಿರುವುದರಿಂದ ಮೋದಿ ಸರಕಾರಕ್ಕಾಗಲಿ ಅಥವಾ ರಾಜ್ಯ ಬಿಜೆಪಿಗಾಗಲಿ ಯಾವುದೇ ಮುಜುಗರ ಎದುರಿಸುವ ಪರಿಸ್ಥಿತಿ ಬರುವ ಸಾಧ್ಯತೆ ಕಮ್ಮಿ ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ

ಕಳಸಾ ಬಂಡೂರಿ, ನೇತ್ರಾವತಿ ತಿರುವು, ಕಾವೇರಿ ನದಿನೀರು ವಿವಾದದ ನಡುವೆ ಈಗ ಸಿದ್ದರಾಮಯ್ಯನವರು ಉತ್ತರ ಕರ್ನಾಟಕದ ಭಾಗದಲ್ಲಿ (ಎರಡು ಜಿಲ್ಲೆಗಳಲ್ಲಿ) ತೀವ್ರ ಸ್ವರೂಪ ಪಡೆಯುತ್ತಿರುವ ಐಐಟಿ ವಿವಾದಕ್ಕೆ ಉತ್ತರಿಸಬೇಕಾಗಿದೆ. ರಾಜ್ಯಕ್ಕೆ ಐಐಟಿ ಬಂದರೆ ಅದರಿಂದಾಗುವ ಲಾಭವೇನು ಎನ್ನುವುದು ಹೋರಾಟ ಮಾಡುತ್ತಿರುವ ಎಲ್ಲರಿಗೂ ತಿಳಿದಿರಬೇಕೆಂದಿಲ್ಲ, ಆದರೆ ರಾಜಕೀಯ ಮೇಲಾಟ ಎನ್ನುವುದು ಶೈಕ್ಷಣಿಕ ವಿಚಾರವನ್ನೂ ಬಿಡುವುದಿಲ್ಲ ಎನ್ನುವುದು ಸತ್ಯ. ಮಗು ಚಿವುಟಿ, ತೊಟ್ಟಿಲು ತೂಗುತ್ತಿರುವವರು ಯಾರು ಎಂದರೆ ಸಿದ್ದರಾಮಯ್ಯನವರೇ ಎಂದು ಎಲ್ಲರೂ ಅವರನ್ನು ಬೊಟ್ಟು ತೋರಿಸುವಂತೆ ಮಾಡಿರುವುದು ಈ ಕ್ಷಣದ ರಾಜಕೀಯ ಮೇಲಾಟ.

English summary
IIT in Dharwad, Karnataka. Who is responsible for normal life disturbance in Raichur and Dharwad district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X