ಅಂದು ಬೋಪಯ್ಯ ಆಡಿದ ಆಟ ಸರಿ, ಈಗ ಸ್ಪೀಕರ್ ಮಾಡುತ್ತಿರುವುದು ತಪ್ಪಾ?
ಬೆಂಗಳೂರು, ಜುಲೈ 10: ಈ ಹಿಂದೆ ಬಿಜೆಪಿಯವರು ಏನೇನು ಆಟ ಆಡಿದ್ದರೋ, ಈಗ ನಡೆಯುತ್ತಿರುವುದು ಅದರ ಮುಂದಿನ ಭಾಗ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸ್ಪೀಕರ್ ಆಗಿದ್ದ ಬೋಪಯ್ಯ ಅವರನ್ನು ಬಳಸಿಕೊಂಡು, ಹದಿಮೂರು ಶಾಸಕರನ್ನು ಅವರು ಅನರ್ಹಗೊಳಿಸಿರಲಿಲ್ಲವೇ ಎಂದು ಸುರೇಶ್ ಪ್ರಶ್ನಿಸಿದ್ದಾರೆ.
ಅಂದು ಅವರು ಮಾಡಿದ್ದು ಸರಿ, ಈಗ ತಪ್ಪಾ ಎಂದು ಕೇಳಿರುವ ಸುರೇಶ್, ವಿರೋಧ ಪಕ್ಷಗಳನ್ನು ಈ ರೀತಿ ಮಟ್ಟ ಹಾಕಲು ಬಿಜೆಪಿ ಪ್ರಯತ್ನಿಸುವುದು ಸರಿಯಲ್ಲ ಎಂದು ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿಯವರು ಎರಡನೇ ಅವಧಿಗೆ ಇನ್ನೂ ಹೆಚ್ಚಿನ ಮತಗಳಿಂದ ಅಧಿಕಾರಕ್ಕೆ ಬಂದಿದ್ದಾರೆ. ಸಂವಿಧಾನವನ್ನು ಉಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತದೆ ಎಂದು ನಾವು ನಂಬಿದ್ದು ಹುಸಿಯಾಗಿದೆ ಎಂದು ಸುರೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಬೋಪಯ್ಯ ಸ್ಪೀಕರ್ ಆಗಿದ್ದರು. ಹದಿಮೂರು ಶಾಸಕರು ಬಿಎಸ್ವೈ ಮೇಲೆ ವಿಶ್ವಾಸವಿಲ್ಲ ಎಂದು ರಾಜ್ಯಪಾಲರಾಗಿದ್ದ ಭಾರದ್ವಾಜ್ ಅವರಿಗೆ ದೂರು ಸಲ್ಲಿಸಿದ್ದರು. ಅದರಂತೆಯೇ, ವಿಶ್ವಾಸಮತ ಯಾಚಿಸುವಂತೆ ಬಿಎಸ್ವೈಗೆ ಸೂಚಿಸಲಾಗಿತ್ತು.
ಆವೇಳೆ ಹದಿಮೂರು ಶಾಸಕರನ್ನು ಬೋಪಯ್ಯ ಅನರ್ಹಗೊಳಿಸಿದ್ದರು. ಸ್ಪೀಕರ್ ಅವರ ಆದೇಶ ಸುಪ್ರೀಂಕೋರ್ಟ್ ಬಾಗಿಲಿಗೆ ಹೋದಾಗ, ಸ್ಪೀಕರ್ ತೀರ್ಪು ಅಸಿಂಧು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತ್ತು.












Click it and Unblock the Notifications