ಅವಧಿಗೆ ಮುನ್ನವೇ ಚುನಾವಣೆ ಬಂದರೆ ಕಾಂಗ್ರೆಸ್ ಸನ್ನದ್ಧ: ಸಿದ್ದರಾಮಯ್ಯ
ಕಲಬುರಗಿ, ಮಾ.10: ರಾಜ್ಯ ವಿಧಾನಸಭಾ ಚುನಾವಣೆ ಅವಧಿಗೆ ಮುನ್ನವೇ ಬರುವ ಸಾಧ್ಯತೆ ಇಲ್ಲ. ಒಂದು ವೇಳೆ ಹಾಗೇನಾದರೂ ಘೊಷಣೆಯಾದರೆ ಚುನಾವಣೆ ಎದುರಿಸಲು ಕಾಂಗ್ರೆಸ್ ಸನ್ನದ್ಧವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ಚುನಾವಣೆಯನ್ನೇ ಮಾಡದವರು ಅವಧಿಗೆ ಮುನ್ನ ವಿಧಾನಸಭೆ ಚುನಾವಣೆ ಮಾಡುತ್ತಾರೆ ಎಂದು ನನಗನಿಸುವುದಿಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿಯ ಭ್ರಷ್ಟ ಸರ್ಕಾರವಿದೆ. ಕಾಂಗ್ರೆಸ್ ಬಿಟ್ಟು ಹೋಗಿರುವ ಶಾಸಕರು ಮತ್ತೆ ಬಂದರೆ ಅವರನ್ನು ಪುನಃ ಸೇರಿಸಿಕೊಳ್ಳುವುದಿಲ್ಲ. ಮೋದಿ ಅವರು ಕರ್ನಾಟಕ ಟಾರ್ಗೆಟ್ ಮಾಡಿದರೂ ಬಿಜೆಪಿ ಸೋಲುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ ಎಂಬ ಬಿ.ಎಸ್.ಯಡಿಯೂರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ಅವರನ್ನೇ ಅಧಿಕಾರದಿಂದ ತೆಗೆದಿದ್ದಾರಲ್ಲ. ಆಗ ಅವರು ಅತ್ತಿಲ್ವಾ. ಜೈಲಿಗೆ ಹಾಕುತ್ತೇವೆ ಅಂತ ಹೆದರಿಸಿದ್ದಾರಲ್ಲ ಎಂದು ಪ್ರಶ್ನಿಸಿದರು.

ಭಿನ್ನಾಭಿಪ್ರಾಯ ಎಲ್ಲಾ ಪಕ್ಷಗಳಲ್ಲಿಯೂ ಇರುತ್ತದೆ:
ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲಾ ಪಕ್ಷಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯ ಇದ್ದೇ ಇರುತ್ತವೆ. ಸಚಿವ ಕೆ.ಎಸ್. ಈಶ್ವರಪ್ಪ ರಾಜ್ಯಪಾಲರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪತ್ರ ಬರೆದಿದ್ದರು. ಬಸನಗೌಡ ಪಾಟೀಲ ಯತ್ನಾಳ ಸರ್ಕಾರದ ವಿರುದ್ಧ ಮಾತನಾಡಿಲ್ವಾ. ಅದು ಭಿನ್ನಾಭಿಪ್ರಾಯ ಅಲ್ಲವಾ ಎಂದು ಪ್ರಶ್ನಿಸಿದರು.
ತಮ್ಮ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಬೇಕು ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದ್ದಾರೆ. ಬಿಡದಿಯ
ಈಗಲ್ಟನ್ ರೆಸಾರ್ಟ್‌ಗೆ ದಂಡ ಹಾಕಿದ್ದಕ್ಕೆ ಮಾತನಾಡುತ್ತಿದ್ದಾರೆ. ನ್ಯಾಯಾಲಯದಲ್ಲಿಯೂ ನಮ್ಮ ತೀರ್ಮಾನ ಎತ್ತಿ ಹಿಡಿಯಲಾಗಿದೆ. ಚದರ ಅಡಿ ಲೆಕ್ಕದಲ್ಲಿ ರೆಸಾರ್ಟ್‌ಗೆ 968 ಕೋಟಿ ರೂ. ಆಗಿತ್ತು. ಕುಮಾರಸ್ವಾಮಿ ಇದೀಗ ಏಕೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅಷ್ಟೇ ಅಲ್ಲ. ಯಾರು ಟಾರ್ಗೆಟ್ ಮಾಡಿದರೂ ನಾನು ಹೆದರಲ್ಲ. ನನ್ನ ಕಂಡರೆ ಅವರಿಗೆ ಭಯ, ಹೀಗಾಗಿ ನನ್ನ ವಿರುದ್ಧ ಮಾತನಾಡುತ್ತಾರೆ ಎಂದರು.












Click it and Unblock the Notifications