"ಡಿ.ಕೆ.ಶಿವಕುಮಾರ್ ಸಿಎಂ ಆದ್ರೆ ನನಗೆ ಸಚಿವ ಸ್ಥಾನವೇ ಬೇಡ"
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಬೂದಿಮುಚ್ಚಿದ ಕೆಂಡವಾಗಿದೆ. ಇತ್ತೀಚೆಗೆ ಹೈಕಮಾಂಡ್ ಸೂಚನೆ ಮೇರೆಗೆ ಎರಡೆರಡು ಬಾರಿ ಬ್ರೇಕ್‌ಫಾಸ್ಟ್ ಮೀಟಿಂಗ್ ಮಾಡುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಸಿಎಂ ಕುರ್ಚಿ ಕದನಕ್ಕೆ ಬ್ರೇಕ್ ಹಾಕುವ ಕೆಲಸ ಮಾಡಿದ್ದರು. ಆದರೆ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಅವರ ಬೆಂಬಲಕ್ಕೆ ಹಲವರಿದ್ದಾರೆ. ಡಿಕೆಶಿ ಸಿಎಂ ಆದ್ರೆ ನಮಗೆಲ್ಲ ಸಚಿವ ಸ್ಥಾನ ಸಿಗುತ್ತೆ ಅಂದುಕೊಂಡವರೂ ಇದ್ದಾರೆ. ಆದರೆ "ಡಿ.ಕೆ.ಶಿವಕುಮಾರ್ ಒಂದು ವೇಳೆ ಮುಖ್ಯಮಂತ್ರಿಯಾದರೆ ನನಗೆ ಸಚಿವ ಸ್ಥಾನ ಬೇಡವೇ ಬೇಡ" ಎಂದಿದ್ದಾರೆ ಕಾಂಗ್ರೆಸ್‌ನ ಹಿರಿಯ ಶಾಸಕ.
ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡುವಂತೆ ಅವರ ಬಣದ ಶಾಸಕರು ದೆಹಲಿಗೆ ಗುಂಪು ಗುಂಪಾಗಿ ಹೋಗಿ ಹೈಕಮಾಂಡ್ ಭೇಟಿಯಾಗಿ ಬಂದಿದ್ದರು. ಆದರೆ ಡಿಕೆಶಿ ಸಿಎಂ ಆಗಿದ್ದೇ ಆದರೆ ನನಗೆ ಸಚಿವ ಸ್ಥಾನ ಬೇಕಾಗಿಲ್ಲ ಎಂದಿದ್ದಾರೆ ಶಾಸಕ ಕೆ.ಎನ್.ರಾಜಣ್ಣ. 'ಶಿವಕುಮಾರ್ ಸಿಎಂ ಆದರೆ ನಾನು ಸಚಿವ ಆಗೋದಿಲ್ಲ. ನನಗೆ ಯಾವ ಸ್ಥಾನವೂ ಬೇಕಾಗಿಲ್ಲ, ನಾನು ಮೊದಲೇ ಹೇಳಿದ್ದೀನಿ. ಈಗಲೂ ನಾನು ಅದೇ ಮಾತಿಗೆ ಬದ್ಧನಾಗಿದ್ದೇನೆ' ಎಂದಿದ್ದಾರೆ.

'ಒಂದು ವೇಳೆ ಶಿವಕುಮಾರ್ ಮುಖ್ಯಮಂತ್ರಿಯಾದರೆ, ನನಗೆ ಸಚಿವ ಸ್ಥಾನ ಬೇಡ, ಮತ್ತೊಬ್ಬರಿಗೆ ಅವಕಾಶ ಸಿಗಲಿ. ನನಗೆ ಯಾವ ಸ್ಥಾನವೂ ಬೇಕಾಗಿಲ್ಲ. ಇನ್ನು ನನ್ನ ಮಾತಿನ ಅರ್ಥ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ ಎಂದಲ್ಲ. ಅವರೇನು ಸಿಎಂ ಆಗೇಬಿಡ್ತಾರೆ ಅಂದುಕೊಂಡಿದ್ದೀರಾ? ಅದು ಅಷ್ಟು ಸುಲಭದ ಮಾತಲ್ಲ, ನನಗೆ ಅಧಿಕಾರದ ದಾಹವೂ ಇಲ್ಲ' ಎಂದಿದ್ದಾರೆ ರಾಜಣ್ಣ.
'ಚುನಾವಣೆಗೆ ಸ್ಪರ್ಧಿಸಲ್ಲ'
ಇನ್ನು ಕೆ.ಎನ್.ರಾಜಣ್ಣ ಅವರು ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆಯೂ ಮಾತನಾಡಿದ್ದಾರೆ. 'ಮುಂದಿನ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ' ಎಂದು ಶಾಸಕ ಕೆ.ಎನ್.ರಾಜಣ್ಣ ಮತ್ತೊಮ್ಮೆ ಘೋಷಣೆ ಮಾಡಿದ್ದಾರೆ. ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ರಾಜಣ್ಣ ಅವರು ಈ ಹಿಂದೆ ಸಹಕಾರ ಸಚಿವರಾಗಿದ್ದರು.
ಬಳಿಕ ಸಿಎಂ ಬದಲಾವಣೆ, ಸೆಪ್ಟೆಂಬರ್ ಕ್ರಾಂತಿ, ಸದನದಲ್ಲೇ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪ ಹಾಗೂ ರಾಹುಲ್ ಗಾಂಧಿ ಅವರ ಮತಗಳ್ಳತನ ಅಭಿಯಾನದ ಕುರಿತು ನೀಡಿದ್ದ ಹೇಳಿಕೆಗಳಿಂದಾಗಿ ಕಾಂಗ್ರೆಸ್ ಹೈಕಮಾಂಡ್‌ನ ಕೆಂಗಣ್ಣಿಗೆ ರಾಜಣ್ಣ ಗುರಿಯಾಗಿದ್ದರು. ಈ ಹಿನ್ನೆಲೆ ಅವರನ್ನು ಸಂಪುಟದಿಂದ ವಜಾ ಮಾಡಲಾಯಿತು. ಈಗ ಸಚಿವ ಸಂಪುಟ ಪುನರ್‌ರಚನೆ ವೇಳೆ ಮತ್ತೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದ ರಾಜಣ್ಣ, ಡಿಕೆಶಿ ಸಿಎಂ ಆಗೋದಾದ್ರೆ ನನಗೆ ಸಚಿವ ಸ್ಥಾನವೇ ಬೇಡ ಎನ್ನುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಕುರ್ಚಿ ಕಚ್ಚಾಟದ ಮಧ್ಯೆಯೇ ಈಗ ಜಾರಕಿಹೊಳಿ ಹಾಗೂ ಪರಮೇಶ್ವರ್ ಅವರು ತೆರೆಮರೆಯಲ್ಲಿ ಕಾರ್ಯತಂತ್ರಗಳನ್ನು ಕೆಲವರ ಸೂಚನೆಯ ಮೇರೆಗೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಹೇಳಿದೆ. ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕವೂ ಸಿಎಂ ಹಾಗೂ ಡಿಸಿಎಂ ಬಣ ಸದ್ದಿಲ್ಲದೇ ಕಾರ್ಯತಂತ್ರ ನಡೆಸುತ್ತಿದ್ದು, ಕುರ್ಚಿ ಗೊಂದಲಕ್ಕೆ ವಿರಾಮ ಬೀಳುವ ಲಕ್ಷಣ ಕಾಣುತ್ತಿಲ್ಲ. ಅಧಿಕಾರ ಸಿಕ್ಕಿದ್ದರೂ ಅಭಿವೃದ್ಧಿ ಹಾಗೂ ರಾಜ್ಯದ ಜನರ ಸಮಸ್ಯೆ ಆಲಿಸುವುದನ್ನು ಬಿಟ್ಟು ಸಿಎಂ ಕುರ್ಚಿ ಉರುಳಿಸುವುದು ಹೇಗೆ ಎನ್ನುವ ರಣತಂತ್ರದಲ್ಲೇ ಕಾಂಗ್ರೆಸ್ ಕಾಲ ಕಳೆಯುತ್ತಿರುವುದು ರಾಜ್ಯದ ಜನರ ದೌರ್ಭಾಗ್ಯ ಎಂದು ಟೀಕಿಸಿದೆ.












Click it and Unblock the Notifications