IAS Transfer; ಅಂಜುಮ್ ಪರ್ವೇಜ್ ಎಲ್ಲಿಗೆ ವರ್ಗಾವಣೆ?
ಬೆಂಗಳೂರು, ಜನವರಿ 12: ಕೇಂದ್ರ ಸರ್ಕಾರ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್)ಗೆ ಪೂರ್ಣ ಪ್ರಮಾಣದ ಹೊಸ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಿದೆ. ಬಳಿಕ ಕರ್ನಾಟಕ ಸರ್ಕಾರ ಎಂಡಿಯಾಗಿದ್ದ ಅಂಜುಮ್ ಪರ್ವೇಜ್ ವರ್ಗಾವಣೆ ಮಾಡಿದೆ.
ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಸೂಚನೆಯಂತೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಜುಂ ಪರ್ವೇಜ್ ಅವರನ್ನು ವರ್ಗಾವಣೆ ಮಾಡಿದೆ. ಎಂ. ಮಹಾಬಲೇಶ್ವರ ರಾವ್ ಅವರನ್ನು ಬಿಎಂಆರ್‌ಸಿಎಲ್‌ನ ಎಂಡಿಯಾಗಿ ನೇಮಿಸಲಾಗಿದೆ.

ಆದೇಶದ ವಿವರ; ಅಜುಂ ಪರ್ವೇಜ್ (ಕೆಎನ್:1994) ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ, ಬೆಂಗಳೂರು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ. ಮುಂದಿನ ಆದೇಶದ ತನಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಹುದ್ದೆಗೆ ವರ್ಗಾವಣೆ.
ಎಂ. ಮಹಾಬಲೇಶ್ವರ ರಾವ್ (ಕೆಎನ್: 1995) ಹುದ್ದೆಯ ನಿರೀಕ್ಷೆಯಲ್ಲಿದ್ದರು. ಅವರನ್ನು ತಕ್ಷಣದಿಂದ ಜಾರಿಗೆ ಮತ್ತು ಮುಂದಿನ ಆದೇಶದ ತನಕ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್)ಗೆ ಪೂರ್ಣ ಪ್ರಮಾಣದ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಬೇಕು ಎಂಬ ಬೇಡಿಕೆ ಇತ್ತು. ಈ ಹಿನ್ನಲೆಯಲ್ಲಿ
ಗುರುವಾರ ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ನಿರ್ದೇಶಕರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಜುಂ ಪರ್ವೇಜ್ ಅವರನ್ನು ವರ್ಗಾವಣೆ ಮಾಡಲು ಸೂಚಿಸಿದ್ದರು.
1995ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂ. ಮಹಾಬಲೇಶ್ವರ ರಾವ್ ಅವರನ್ನು ಬಿಎಂಆರ್‌ಸಿಎಲ್‌ನ ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಿದ್ದರು. ಅಲ್ಲದೇ ಬಿಎಂಆರ್‌ಸಿಎಲ್ ಎಂಡಿಗೆ ಯಾವುದೇ ಹೆಚ್ಚುವರಿ ಜವಾಬ್ದಾರಿ ನೀಡಬಾರದು, ಕೇಂದ್ರ ಸರ್ಕಾರದ ಅನುಮತಿ ಇಲ್ಲದೇ ವರ್ಗಾವಣೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ.
ಕರ್ನಾಟಕ ಸರ್ಕಾರ ಅಜುಂ ಪರ್ವೇಜ್ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದರೂ ಸಹ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ಹೊಣೆಯನ್ನು ನೀಡಿತ್ತು. ಆಗಲೇ ಎಂಡಿಗೆ ಹೆಚ್ಚುವರಿ ಹೊಣೆ ನೀಡಬಾರದು ಎಂಬ ಚರ್ಚೆ ನಡೆದಿತ್ತು.












Click it and Unblock the Notifications