ರವಿ ಮಾಹಿತಿ ಲೀಕ್: ಸರ್ಕಾರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್
ಬೆಂಗಳೂರು, ಮಾ.29: ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವಿನ ನಿಗೂಢತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಹೈಕೋರ್ಟ್ ನಿರ್ಬಂಧದ ನಡುವೆಯೂ ಪ್ರಕರಣದ ಮಾಹಿತಿ ಸೋರಿಕೆಯಾಗಿರುವ ಬಗ್ಗೆ ಹಲವರಿಂದ ಕಳವಳ ವ್ಯಕ್ತವಾಗಿದೆ. ಮುಖ್ಯವಾಗಿ ಮಹಿಳಾ ಅಧಿಕಾರಿ ಪತಿ ಸುಧೀರ್ ರೆಡ್ಡಿ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದ್ದಾರೆ.
ಐಎಎಸ್ ಅಧಿಕಾರಿ ಡಿ.ಕೆ.ರವಿ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಡಿಜಿಪಿ ಹಾಗೂ ಸಿಐಡಿ ವಿರುದ್ಧ ಹೈಕೋರ್ಟ್ನಲ್ಲಿ ಶನಿವಾರ ನ್ಯಾಯಾಂಗ ನಿಂದನೆ ದೂರು ದಾಖಲಾಗಿದೆ. [ಮಹಿಳಾ ಅಧಿಕಾರಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದಕ್ಕೆ ]
ಡಿಕೆ ರವಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಸಲ್ಲಿಸಿರುವ ಮಧ್ಯಂತರ ವರದಿ ಪ್ರಕಟಿಸದಂತೆ ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಮಾ.22ರಂದು ನ್ಯಾ. ಅಬ್ದುಲ್ ನಜೀರ್ ಅವರು ಸೂಚಿಸಿದ್ದರು. ಅದರೆ, ಪ್ರಕರಣದ ಮಾಹಿತಿಗಳು ಕಾಣದ ಕೈಗಳಿಂದ ಸೋರಿಕೆಯಾಗುತ್ತಲೇ ಇವೆ. [ರವಿ ಕಳಿಸಿದ ಕೊನೆ ವಾಟ್ಸಪ್ ಸಂದೇಶದಲ್ಲಿ ಏನಿದೆ? ]

ಡಿಕೆ ರವಿ ಹಾಗೂ ಮಹಿಳಾ ಅಧಿಕಾರಿ ನಡುವಿನ ಮಾತುಕತೆ ವಿವರ, ವಾಟ್ಸಪ್ ಸಂದೇಶಗಳು ಲೀಕ್ ಆಗಿವೆ. ಇದಲ್ಲದೆ, ಆಕೆ ತನಿಖಾಧಿಕಾರಿಗಳಿಗೆ ನೀಡಿದ ಅಧಿಕೃತ ಹೇಳಿಕೆ ಕೂಡಾ ಸೋರಿಕೆಯಾಗಿದೆ. ಇದರಿಂದ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಅರ್ಜಿದಾರ ಸುಧೀರ್ ರೆಡ್ಡಿ ಆರೋಪಿಸಿದ್ದಾರೆ.[ಡಿಕೆ ರವಿ ಕೇಸ್: ಸಾವು, ಸಿಐಡಿ, ಸಿಬಿಐ ತನಕ ಟೈಮ್ ಲೈನ್]
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿ-ಐಜಿಪಿ, ಸಿಐಡಿ, ವರದಿ ಪ್ರಕಟಿಸಿದ ಪತ್ರಿಕೆ ಸಂಪಾದಕರು, ವಿತರಕರನ್ನು ಪ್ರತಿವಾದಿಯನ್ನಾಗಿಸಿ ದೂರು ಸಲ್ಲಿಸಲಾಗಿದೆ. ಮಂಗಳವಾರ ಅಥವಾ ಬುಧವಾರ ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆಯಿದೆ ಎಂದು ಸುಧೀರ್ ರೆಡ್ಡಿ ಅವರ ಪರ ವಕೀಲ ಮನು ಕುಲಕರ್ಣಿ ಅವರು ಹೇಳಿದ್ದಾರೆ. [ತನಿಖೆ ಸಿಬಿಐಗೆ ಒಪ್ಪಿಸಿದ ರಾಜ್ಯ ಸರ್ಕಾರ]
ಸಿಐಡಿ ತನಿಖೆ ಇನ್ನೂ ಪ್ರಗತಿಯಲ್ಲಿರುವಾಗಲೇ ಸಿದ್ದರಾಮಯ್ಯ ಅವರಿಗೆ ಸತ್ಯದ ಅರಿವಾಗಿದೆಯೆ? ಸಾವಿನ ನಿಗೂಢತೆ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿದ್ದಾರೆಯೇ? ಎಂಬ ಅನುಮಾನ ಸಾರ್ವಜನಿಕರಲ್ಲೂ ಮೂಡಿದೆ. ಜೊತೆಗೆ ಇದೇ ಪ್ರಶ್ನೆಯನ್ನು ಅರ್ಜಿದಾರರು ಕೋರ್ಟಿನಲ್ಲೂ ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಡಿಕೆ ರವಿ ಸಾವಿನ ಪ್ರಕರಣವನ್ನು ಸದ್ಯಕ್ಕೆ ಸಿಬಿಐ ತನಿಖೆ ನಡೆಸುತ್ತಿದೆ. (ಪಿಟಿಐ)












Click it and Unblock the Notifications