ಸೇನಾ ಹೆಲಿಕಾಪ್ಟರ್ ದುರಂತ; ಯಾರು, ಏನು ಹೇಳಿದರು?
ಬೆಂಗಳೂರು, ಡಿಸೆಂಬರ್ 8: ಸೇನಾ ರಕ್ಷಣಾ ಪಡೆ ಸಿಬ್ಬಂದಿಗಳ ಮುಖ್ಯಸ್ಥ ಬಿಪಿನ್ ರಾವತ್‌ರನ್ನು ಹೊತ್ತೊಯ್ಯುತ್ತಿದ್ದ ಐಎಎಫ್ Mi-17V5 ಹೆಲಿಕಾಪ್ಟರ್ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಪತನಗೊಂಡಿದ್ದು, 14 ಜನರಲ್ಲಿ 11 ಜನರು ಮೃತಪಟ್ಟಿದ್ದಾರೆ.
ಸೇನಾ ಹೆಲಿಕಾಪ್ಟರ್ ಪತನ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ರಾಜಕೀಯ ನಾಯಕರು ಬೇಸರ ವ್ಯಕ್ತಪಡಿಸಿದ್ದು, ಬದುಕುಳಿದವರ ಸುರಕ್ಷತೆಗಾಗಿ ಪ್ರಾರ್ಥಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
ಸೇನಾ ರಕ್ಷಣಾ ಪಡೆ ಸಿಬ್ಬಂದಿಗಳ ಮುಖ್ಯಸ್ಥ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೆ ಈಡಾಗಿರುವ ಸುದ್ದಿ ಕೇಳಿ ದಿಗ್ಭ್ರಮೆ ಹಾಗೂ ಆಘಾತ ಉಂಟಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅಪಘಾತದ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಪೂರ್ಣ ವಿವರಗಳನ್ನು ಪಡೆದುಕೊಳ್ಳಲಾಗುತ್ತಿದೆ. ಘಟನಾ ಸ್ಥಳದಲ್ಲಿ ಶೋಧನೆಯಾಗುತ್ತಿದ್ದು, ಬಿಪಿನ್ ರಾವತ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೊಂದು ಅತ್ಯಂತ ದುರದೃಷ್ಟಕರ ಘಟನೆ, ಇಡೀ ದೇಶ ದಿಗ್ಭ್ರಾಂತಗೊಂಡಿದೆ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ
ಸೇನಾ ರಕ್ಷಣಾ ಪಡೆ ಸಿಬ್ಬಂದಿಗಳ ಮುಖ್ಯಸ್ಥ ಬಿಪಿನ್ ರಾವತ್ ಅವರಿದ್ದ @IAF_MCC ಹೆಲಿಕಾಪ್ಟರ್ ದುರಂತ ಅಪಘಾತದ ಬಗ್ಗೆ ಕೇಳಿ ಆಘಾತವಾಯಿತು.
ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕೂ ಮಾಡಿದ್ದಾರೆ.
ಸುದ್ದಿ ಸಂಸ್ಥೆ ಐಎಎನ್‌ಎಸ್ ಕೂ
ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸಹಿತ 14 ಜನರಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕುನೂರ್ ಬಳಿ ಪತನಗೊಂಡಿದೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ಕೂ ಮಾಡಿದೆ.

"ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರಿದ್ದ IAF Mi-17V5 ಹೆಲಿಕಾಪ್ಟಾರ್ ಇದು ತಮಿಳುನಾಡು ಕನೂರ್ ಬಳಿ ಅಪಘಾತಕ್ಕೀಡಾಗಿದೆ. ಈವರೆಗೆ ಮೂವರನ್ನು ರಕ್ಷಿಸಲಾಗಿದ್ದು, ಇತರರಿಗಾಗಿ ಶೋಧ ನಡೆಸಲಾಗುತ್ತಿದೆ,'' ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
Recommended Video
ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ
ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಹಿರಿಯ ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತಮಿಳುನಾಡಿನ ಕುನೂರು ಬಳಿ ಅಪಘಾತಕ್ಕೀಡಾದ ಸುದ್ದಿ ತಿಳಿದು ಆಘಾತವಾಗಿದೆ. ಅವರ ಸುರಕ್ಷತೆಗಾಗಿ ಮತ್ತು ಅಪಘಾತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ,'' ಎಂದು ಘಟನೆ ಬಗ್ಗೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕೂ ಮೂಲಕ ಪ್ರಾರ್ಥಿಸಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ
ಸಿಡಿಎಸ್ ಬಿಪಿನ್ ರಾವತ್ ಜಿ ಅವರಿದ್ದ ಹೆಲಿಕಾಪ್ಟರ್ ದುರಂತ ಅಪಘಾತದ ಬಗ್ಗೆ ಕೇಳಿ ಆಘಾತವಾಯಿತು. ಎಲ್ಲರ ಸುರಕ್ಷತೆ, ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂ ಮಾಡಿದ್ದಾರೆ.
ಹೆಲಿಕಾಪ್ಟರ್ ದುರಂತದಲ್ಲಿ ಮಡಿದವರಿಗೆ ಸಚಿವ ಸಿ.ಸಿ. ಪಾಟೀಲ್ ಅಶ್ರುತರ್ಪಣ
ತಮಿಳುನಾಡಿನ ಕುನೂರಿನ ಸಮೀಪ ಸಂಭವಿಸಿದ ಸೇನಾ ಹೆಲಿಕ್ಯಾಪ್ಟರ್ ದುರಂತದಲ್ಲಿ ಸಿಡಿಎಸ್ (ಚೀಫ್ ಅಫ್ ಡಿಫೆನ್ಸ್ ಸ್ಟಾಪ್) ಜನರಲ್ ಬಿಪಿನ್ ರಾವತ್ ದಂಪತಿ ಮತ್ತು ಇತರ ಸೇನಾಧಿಕಾರಿಗಳು ಅಸುನೀಗಿದ್ದಾರೆ ಎಂಬುದು ನಮ್ಮ ಇಡೀ ದೇಶಕ್ಕೆ ತೀವ್ರ ಆಘಾತ ಉಂಟುಮಾಡಿದ ಘಟನೆಯಾಗಿದೆ.
ಅತ್ಯಂತ ದಕ್ಷತೆ ಮತ್ತು ಸೇವಾ ನಿಷ್ಠೆಗೆ ಹೆಸರು ಪಡೆದು ದೇಶದ ಭದ್ರತೆಗೆ ತಮ್ಮನ್ನು ಸಮರ್ಪಿಸಿಕೊಂಡು ದೇಶದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಶೇಷ ಕೊಡುಗೆ ನೀಡಿದ್ದ ರಾವತ್ ಅವರು ಹಾಗೂ ಇತರರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ದುರದೃಷ್ಟವಶಾತ್ ಅವರ ಅಗಲಿಕೆ ನಮಗೆಲ್ಲಾ ತೀವ್ರ ನೋವು ಉಂಟುಮಾಡಿದೆ.
ಈ ದುರ್ಘಟನೆಯಲ್ಲಿ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಸಾವನ್ನಪ್ಪಿದ್ದಾರೆ ಹಾಗೂ ಹತ್ತಕ್ಕೂ ಹೆಚ್ಚು ಮಂದಿ ಇತರ ಸೇನಾ ಸಿಬ್ಬಂದಿಗಳು ಅಸುನೀಗಿದ್ದಾರೆ ಎಂಬ ಸಂಗತಿಯೂ ತೀವ್ರ ದುಃಖದಾಯಕವಾಗಿದೆ. ಇದರಿಂದಾಗಿ ನಮ್ಮ ದೇಶದ ಭದ್ರತಾ ಪಡೆಗಳಿಗೆ ತುಂಬಲಾರದ ದೊಡ್ಡ ನಷ್ಟವಾಗಿದೆ. ಅಗಲಿದ ಈ ಮಹಾನುಭಾವರಿಗೆ ನನ್ನ ಅಂತಿಮ ನಮನಗಳು ಮತ್ತು ಅವರ ಕುಟುಂಬಕ್ಕೆ, ಬಂಧುಬಾಂಧವರಿಗೆ ನನ್ನ ಸಾಂತ್ವನಗಳು ಎಂದು ಸಚಿವ ಸಿ.ಸಿ. ಪಾಟೀಲ್ ತಿಳಸಿದ್ದಾರೆ.












Click it and Unblock the Notifications