10 ವರ್ಷಗಳ ಕಾಲ ಸಿದ್ದರಾಮಯ್ಯನವರೇ ಸಿಎಂ ಆಗ್ಲಿ ಎಂದ ಬಿಜೆಪಿ ಶಾಸಕ- ಅಚ್ಚರಿ ಮೂಡಿಸಿದ ಪಾಟೀಲ್ ಹೇಳಿಕೆ
ರಾಯಚೂರು, ಡಿಸೆಂಬರ್ 01: ರಾಜ್ಯ ಕಾಂಗ್ರೆಸ್ ನಲ್ಲಿ ಬರೋಬ್ಬರಿ 135 ಸ್ಥಾನಗಳನ್ನ ಗೆದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಸ್ಥಾನಗ ಗದ್ದುಗೆಗಾಗಿ ಗುದ್ದಾಟ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ.
ಹೌದು, ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ವಿಚಾರವಾಗಿ ಹೇಳಿಕೆಯನ್ನ ನಿಲ್ಲಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಖಡಕ್ ಆದೇಶ ನೀಡಿದ್ದು, ಸದ್ಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಮುಖ್ಯಮಂತ್ರಿ ವಿಚಾರವಾಗಿ ಸೈಲೆಂಟ್ ಆಗಿದ್ರೆ, ಬಿಜೆಪಿ ಶಾಸಕರೊಬ್ಬರು ಮುಂದಿನ ಹತ್ತು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರಲಿ ಎಂದು ಹೇಳಿದ್ದಾರೆ.

ರಾಯಚೂರು ನಗರದಲ್ಲಿ ಆಯೋಜಿಸಲಾಗಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ರಾಯಚೂರು ನಗರದ ಬಿಜೆಪಿ ಶಾಸಕ ಡಾ ಶಿವರಾಜ್ ಪಾಟೀಲ್ ಮಾತನಾಡಿ, ಮುಂದಿನ ಹತ್ತು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರಲಿ ಎಂದು ಹೇಳಿದ್ದು, ಬಿಜೆಪಿ ಶಾಸಕರ ಈ ಹೇಳಿಕೆ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಮುಂದಿನ ಹತ್ತು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರಲಿ ಅಂತ ಹೇಳಿ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೆರೆದಿದ್ದ ಜನರ ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸುತ್ತಾರೆ. ಹಿಂದೆ ದೇವರಾಜ ಅರಸು ಸಾಹೇಬರು ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು, ಸಿದ್ದರಾಮಯ್ಯನವರು ಹತ್ತು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರಲಿ. ಅವರು ಮುಖ್ಯಮಂತ್ರಿಯಾಗಿರುವವರೆಗೆ ಕುರುಬ ಸಮಾಜಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

ಇನ್ನೂ ಕಾಂಗ್ರೆಸ್ ನಾಯಕರು ಅಥವಾ ಶಾಸಕರು ಈ ರೀತಿಯಾಗಿ ಕಾಂಗ್ರೆಸ್ ಸರ್ಕಾರದ ನಾಯಕರನ್ನ ಅಥವಾ ಮುಖ್ಯಮಂತ್ರಿಗಳ ಪರವಾಗಿ ಮಾತನಾಡುವುದು ಸಹಜ. ಆದರೆ, ಬಿಜೆಪಿಯ ಹಾಲಿ ಶಾಸಕರೊಬ್ಬರು ಕಾಂಗ್ರೆಸ್ ಮುಖ್ಯಮಂತ್ರಿಯ ಪರವಾಗಿ ಸಾರ್ವಜನಿಕ ಸಭೆಯೊಂದರಲ್ಲಿ ಇಷ್ಟು ನಿರ್ಭೀತಿಯಿಂದ ಇಂಥ ಘೋಷಣೆಗಳನ್ನು ಮಾಡುವುದನ್ನ ನೋಡಿದ್ರೆ ಬಿಜೆಪಿ ಶಾಸಕರಿಗೆ ಹೈಕಮಾಂಡ್ ಬಗ್ಗೆ ಭಯವಿದ್ದಂತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.












Click it and Unblock the Notifications