ವಿವಿಧ ಕಡೆಗಳಿಂದ ಸ್ಪರ್ಧೆಗೆ ಆಹ್ವಾನ ಬರುತ್ತಿದೆ: ಸಿದ್ದರಾಮಯ್ಯ
ಬೆಳಗಾವಿ, ನವೆಂಬರ್ 7: ಬೇರೆ ಬೇರೆ ಕಡೆಗಳಿಂದ ಸ್ಪರ್ಧೆಗೆ ಆಹ್ವಾನ ಬರುತ್ತಿದೆ. ಎಲ್ಲಿಂದ ನಿಲ್ಲಬೇಕು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನಗೆ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರವೇ ಇಲ್ಲದೆ ಹೋದರೆ ನನ್ನನ್ನು ಬೇರೆ ಕಡೆಗಳಿಂದ ಬಂದು ಇಲ್ಲಿಂದಲೇ ಸ್ಪರ್ಧೆ ಮಾಡಿ ಎಂದು ಕರೆಯುತ್ತಾರೆ. ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಬಾದಾಮಿಯಿಂದ ಸ್ಪರ್ಧೆ ಮಾಡುವಂತೆ ಒತ್ತಾಯಿಸಿ ಸಾವಿರಾರು ಜನ ಮಹಿಳೆಯರು ಬಂದು ನಮ್ಮ ಮುಂದೆ ಕೂತುಕೊಳ್ತೇವೆ ಎಂದು ಪತ್ರ ಬರೆದಿದ್ದಾರೆ. ಆದರೆ ನನ್ನ ಯೋಚನೆ ಏನೆಂದರೆ ಪ್ರತಿ ವಾರಕ್ಕೊಮ್ಮೆ ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿ, ಕಾರ್ಯಕರ್ತರನ್ನು ಭೇಟಿಯಾಗಿ, ಜನರ ಸಮಸ್ಯೆಗಳಿಗೆ ತತ್ ಕ್ಷಣದಲ್ಲಿ ಸ್ಪಂದನೆ ನೀಡಲು ಸಾಧ್ಯವಾಗುವುದಿಲ್ಲ.
ಜನ ನೀವು ನಿರಂತರ ಭೇಟಿ ನೀಡದಿದ್ದರೂ ಪರವಾಗಿಲ್ಲ ಇಲ್ಲಿಂದಲೇ ಸ್ಪರ್ಧೆಮಾಡಿ ಎಂದು ಹೇಳಬಹುದು ಆದರೆ ನನ್ನ ಮನಸು ಇದಕ್ಕೆ ಒಪ್ಪುತ್ತಿಲ್ಲ. ನಾನು ಬಾದಾಮಿಗೆ ಹೋಗದೆ ಎರಡು ತಿಂಗಳು ಕಳೆದಿದೆ. ನಾಳೆ ಭೇಟಿ ನೀಡಬೇಕು ಎಂದುಕೊಂಡಿದ್ದೆ ಬೇರೆ ಯಾವುದೋ ತುರ್ತು ಕೆಲಸ ಬಂದಿರುವುದರಿಂದ ನಾಳೆಯೂ ಹೋಗಲು ಆಗಲ್ಲ. ಕೋಲಾರದಿಂದ ಸ್ಪರ್ಧೆ ಮಾಡಿ ಎಂದು ಕರೆಯುತ್ತಿದ್ದಾರೆ. ವರುಣಾದಿಂದ ಸ್ಪರ್ಧೆ ಮಾಡಿ ಎಂದು ನನ್ನ ಪುತ್ರ ಯತೀಂದ್ರ ಹೇಳುತ್ತಿದ್ದಾರೆ, ಚಾಮರಾಜಪೇಟೆಯಿಂದ ಸ್ಪರ್ಧೆ ಮಾಡುವಂತೆ ಜಮೀರ್ ಅಹ್ಮದ್ ಕರೆಯುತ್ತಿದ್ದಾರೆ, ಆದರೆ ಎಲ್ಲಿಂದ ನಿಲ್ಲಬೇಕು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದರು.

ವರುಣಾದಿಂದ ಸ್ಪರ್ಧೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸಲಹೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಸಿಎಂ ಇಬ್ರಾಹಿಂ ನನ್ನ ಒಳ್ಳೆಯ ಗೆಳೆಯ ಆದರೆ ಅವರು ನಮ್ಮನ್ನು ಬಿಟ್ಟು ಜೆಡಿಎಸ್ ಗೆ ಹೊರಟು ಹೋಗಿ ಅಧ್ಯಕ್ಷರಾಗಿದ್ದಾರೆ. ಅವರು ಭದ್ರಾವತಿಯಿಂದ ಬೇಕಾದರೆ ಸ್ಪರ್ಧೆ ಮಾಡಬಹುದು, ಅಲ್ಲಿ ಅಪ್ಪಾಜಿ ಗೌಡ ಅವರು ತೀರಿಹೋಗಿದ್ದಾರೆ. ನಾನು ಎಲ್ಲಿಂದ ಚುನಾವಣೆಗೆ ನಿಲ್ಲಬೇಕು ಎಂದು ನಮ್ಮ ಪಕ್ಷ ತೀರ್ಮಾನ ಮಾಡುತ್ತದೆ. ಜೆಡಿಎಸ್ ಪಕ್ಷ ಅಲ್ಲ. ಆತ್ಮೀಯನಾಗಿ ಬೇಕಾದರೆ ವೈಯಕ್ತಿಕವಾಗಿ ಭೇಟಿ ಮಾಡಿ ಸಲಹೆ ನೀಡಲಿ. ಹಾಲಿ ಶಾಸಕರ ಟಿಕೆಟ್ ತಪ್ಪಿಸಿ ಇಬ್ರಾಹಿಂ ಅವರಿಗೆ ಭದ್ರಾವತಿಯಲ್ಲಿ ಟಿಕೇಟ್ ನೀಡಿದ್ದೆವು. ಆದರೆ ಭದ್ರಾವತಿಯಲ್ಲಿ ಡೆಪಾಸಿಟ್ ಕಳೆದುಕೊಂಡಿದ್ದರು ಅಂದರೆ ಅವರ ಲೆಕ್ಕಾಚಾರ ಸರಿಯಿಲ್ಲ ಎಂದರ್ಥವಲ್ವಾ? ನಾನು ಒಬ್ಬಂಟಿಗನಾಗಿದ್ದರೆ ನನ್ನ ಜೊತೆ ಇಷ್ಟೊಂದು ಜನ ಶಾಸಕರು, ಪಕ್ಷದ ಹಿರಿಯ ನಾಯಕರು, ಎಲ್ಲಾ ಜಾತಿ ಧರ್ಮಗಳ ನಾಯಕರು ಇದ್ದಾರೆ, ಒಬ್ಬಂಟಿಯಾಗಿದ್ದರೆ ಇವರೆಲ್ಲ ನನ್ನ ಜೊತೆ ಇಲ್ಲಿ ಇರುತ್ತಿದ್ದರಾ ಎಂದು ಪ್ರಶ್ನಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿರುವುದನ್ನು ಸಂವಿಧಾನ ಬದ್ಧ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಪ್ರತಿಕ್ರಿಯಿಸಿ, ತೀರ್ಪು ನೀಡಿರುವುದು 5 ಜನರ ನ್ಯಾಯಮೂರ್ತಿಗಳ ಪೀಠ, ಇದರಲ್ಲಿ 3 ಜನರ ಅಭಿಪ್ರಾಯ ಒಂದು ರೀತಿ ಇದೆ. ಇನ್ನುಳಿದ ಇಬ್ಬರು ನ್ಯಾಯಮೂರ್ತಿಗಳ ಅಭಿಪ್ರಾಯ ಬೇರೆ ರೀತಿ ಇದೆ. ನಾನು ಸುಪ್ರೀಂ ಕೋರ್ಟ್ ನಿರ್ಣಯದ ಬಗ್ಗೆ ಮಾತನಾಡಲ್ಲ. ನನ್ನ ವೈಯಕ್ತಿಕ ಅಭಿಪ್ರಾಯ ಏನೆಂದರೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬಹುದು ಎಂದು ಸಂವಿಧಾನದ 15 ಮತ್ತು 16ನೇ ವಿಧಿ ಹೇಳುವುದಿಲ್ಲ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು ಎಂದು ಹೇಳಿದೆ. ಈಗ ಕೋರ್ಟ್ ತೀರ್ಪು ಬಂದಿದೆ, ಈ ತೀರ್ಪಿನ ಪೂರ್ಣ ಪ್ರತಿ ಸಿಕ್ಕಮೇಲೆ ಮುಂದೆ ನೋಡೋಣ ಎಂದರು.
ನರೇಂದ್ರ ಮೋದಿ ಅವರು ರಾಜ್ಯ ಮತ್ತು ಕೇಂದ್ರದಲ್ಲಿ ಡಬ್ಬಲ್ ಇಂಜಿನ್ ಸರ್ಕಾರ ಇದೆ ಎಂದು ಹೇಳಿದ್ದರು. ಆದರೆ ಅವರು ನಮ್ಮ ರಾಜ್ಯಕ್ಕೆ ಏನು ಮಾಡಿದ್ದಾರೆ? ಪ್ರವಾಹ ಬಂದಾಗ ಇಲ್ಲಿಗೆ ಬಂದು ಜನರ ಕಷ್ಟ ಕೇಳಲಿಲ್ಲ. ಚುನಾವಣೆ ಹತ್ತಿರ ಬಂದಿರುವುದರಿಂದ ರಾಜ್ಯಕ್ಕೆ ಬರುತ್ತಿದ್ದಾರೆ. ಬೆಲೆಯೇರಿಕೆ, ನಿರುದ್ಯೋಗ, ರೈತರ ಆದಾಯ ದುಪ್ಪಟ್ಟು ಮಾಡಲು ಏನು ಕ್ರಮ ಕೈಗೊಂಡಿದ್ದಾರೆ? ಇವರು ಅಧಿಕಾರಕ್ಕೆ ಬಂದ ಮೇಲೆ ದ್ವೇಷ ರಾಜಕಾರಣ ಹೆಚ್ಚಾಗಿದೆ, ಶೇ 40 ಕಮಿಷನ್ ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಜ್ಯ ಸರ್ಕಾರದ ಮೇಲೆ ಯಾವ ಕ್ರಮ ಕೈಗೊಂಡಿದ್ದಾರ? ರಾಜ್ಯ ಬಿಜೆಪಿ ಚುನಾವಣೆಗೆ ಮೊದಲು ನೀಡಿದ್ದ ಭರವಸೆಗಳಲ್ಲಿ ಶೇ 10 ಅನ್ನು ಕೂಡ ಈಡೇರಿಸಿಲ್ಲ. ಬರೀ ನ ಖಾವೂಂಗ, ನಾ ಖಾನೇದೂಂಗ ಅಂದರೆ ಸಾಕೆ ಎಂದು ಪ್ರಶ್ನಿಸಿದರು.

ಡಿ.ಕೆ ಶಿವಕುಮಾರ್ ಮತ್ತು ತಾವು ಜೊತೆಗೆ ಓಡಾಡಿದರೂ ತಮ್ಮ ನಡುವಿನ ಸಂಬಂಧ ಸರಿಯಿಲ್ಲ ಎಂಬ ಬಿಜೆಪಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ನಡುವಿನ ಸಂಬಂಧ ಹಳಸೋಗಿದೆ. ಆದರೆ ನನ್ನ ಮತ್ತು ಶಿವಕುಮಾರ್ ಅವರ ನಡುವಿನ ಸಂಬಂಧ ಚೆನ್ನಾಗಿಯೇ ಇದೆ ಎಂದರು.












Click it and Unblock the Notifications