ಐಟಿ ದಾಳಿಯಲ್ಲಿ ಬೇನಾಮಿ ವಹಿವಾಟು ಪತ್ತೆ: ಶೀಘ್ರದಲ್ಲಿಯೇ ಎಂಟ್ರಿ ಕೊಡಲಿದೆ ED?
ಬೆಂಗಳೂರು,ಅ. 07: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಉಮೇಶ್ ಸೇರಿದಂತೆ 28 ಗುತ್ತಿಗೆದಾರರ ನಿವಾಸ ಕಚೇರಿಗಳ ಮೇಲೂ ಐಟಿ ದಾಳಿ ನಡೆದಿದೆ. ಐವತ್ತಕ್ಕೂ ಹೆಚ್ಚು ಕಡೆ ದಾಳಿ ನಡೆದಿದೆ. ಐಟಿ ದಾಳಿಯಲ್ಲಿ ನೂರಾರು ಕೋಟಿ ರೂ. ಬೇನಾಮಿ ವಹಿವಾಟು ನಡೆದಿದೆ ಎನ್ನಲಾಗಿದ್ದು, ಎರಡನೇ ಹಂತದಲ್ಲಿ ಜಾರಿ ನಿರ್ದೇಶನದ ಅಧಿಕಾರಿಗಳು ಎಂಟ್ರಿ ಕೊಡುವ ಸಾಧ್ಯತೆಯಿದೆ.
ಬೇನಾಮಿ ವಹಿವಾಟಿಗೆ ಸಂಬಂಧಿಸಿದಂತೆ ನೇರ ದಾಖಲೆಗಳ ಸಿಗದ ಹೊರತು ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸುವುದಿಲ್ಲ. ಯಾವುದೇ ತನಿಖಾ ಸಂಸ್ಥೆಗಳು ನೀಡುವ ವರದಿ ಆಧರಿಸಿ ಜಾರಿ ನಿರ್ದೇಶನಾಲಯ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತವೆ. ಬಸವಸಾಗರ ಜಲಾಶಯ ಕಾಲುವೆ ನಿರ್ಮಾಣ ಸೇರಿದಂತೆ ಅನೇಕ ನೀರಾವರಿ ಗುತ್ತಿಗೆಯಲ್ಲಿ ಕಾಮಗಾರಿಗಳು ನಡೆಯದೇ ಬಹುಕೋಟಿ ವಹಿವಾಟು ನಡೆದಿದ್ದು, ವಹಿವಾಟಿಗೆ ಸಂಬಂಧಿಸಿದಂತೆ ತೆರಿಗೆ ವಂಚಿಸಿ ಅಕ್ರಮ ವಹಿವಾಟು ನಡೆದಿದೆ ಎನ್ನಲಾಗಿದೆ. ಈ ಕುರಿತು ಪೂರ್ಣ ದಾಖಲೆಗಳನ್ನು ಸಂಗ್ರಹಿಸಿ ಮೂರು ತಿಂಗಳಿನಿಂದ ದಾಖಲೆಗಳ ಅಧ್ಯಯನ ಬಳಿಕ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೀಗ ಬೇನಾಮಿ ವಹಿವಾಟು ಕಂಡು ಬಂದಲ್ಲಿ ವರದಿಯನ್ನು ಐಟಿ ಅಧಿಕಾರಿಗಳು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಲಿದ್ದಾರೆ. ಆ ದಾಖಲೆ ಆಧರಿಸಿ ಇಡಿ ಅಧಿಕಾರಿಗಳು ಎಂಟ್ರಿ ಕೊಡಲಿದ್ದಾರೆ.
ಇನ್ನು ಒಬ್ಬ ಬಿಎಂಟಿಸಿ ನೌಕರ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ನೂರಾರು ಕೋಟಿ ವಹಿವಾಟು ನಡೆಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶಿವಮೊಗ್ಗ ಮೂಲದ ಉಮೇಶ್ ಬಿಎಂಟಿಸಿ ನೌಕರನಾಗಿದ್ದು, ನಿಯೋಜನೆ ಮೇರೆಗೆ ಬಿ.ಎಸ್. ಯಡಿಯೂರಪ್ಪ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಪ್ರಮುಖವಾಗಿ ನೀರಾವರಿ ಇಲಾಖೆಯ ಟೆಂಡರ್ ನಿರ್ವಹಣೆ ಮಾಡುತ್ತಿದ್ದ. ಬಿ.ವೈ. ವಿಜಯೇಂದ್ರ ಅವರಿಗೂ ಆಪ್ತನಾಗಿದ್ದ. ಉಮೇಶ್ ಹಸ್ತಕ್ಷೇಪದ ಕುರಿತು ನೀರಾವರಿ ಸಚಿವರು ಈ ಹಿಂದೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಉಮೇಶ್ ಅವರ ಮನೆ ಮೇಲೆ ದಾಳಿ ಮಾಡಿರುವುದು, ಭವಿಷ್ಯದಲ್ಲಿ ವಿಜಯೇಂದ್ರ ಸೇರಿದಂತೆ ಟೆಂಡರ್ ಸಂಬಂಧ ಹಲವು ಅಧಿಕಾರಿಗಳಿಗೂ ಐಟಿ ಉರುಳು ಎದುರಾಗಲಿದೆ. ಈ ಪ್ರಕರಣದ ಗಂಭೀರತೆ ನೋಡುತ್ತಿದ್ದರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಕೈಗೆತ್ತಿಕೊಳ್ಳುವ ಲಕ್ಷಣ ಗೋಚರಿಸುತ್ತಿದೆ.

ಈಗಾಗಲೇ ಗುತ್ತಿಗೆ ಕಂಪನಿಯಿಂದ ಕಪ್ಪ ಸಂಗ್ರಹ ಮಾಡಿರುವ ಸಂಬಂಧ ಬಿ.ವೈ. ವಿಜಯೇಂದ್ರ, ಬಿ.ಎಸ್. ಯಡಿಯೂರಪ್ಪ, ರಾಮಲಿಂಗಂ ಕಸ್ಟ್ರಕ್ಷನ್ ಕಂಪನಿ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಲಾಗಿದೆ. ಐಟಿ ಅಧಿಕಾರಿಗಳಿಗೂ ದೂರು ಸಲ್ಲಿಕೆಯಾಗಿತ್ತು. ರಾಮಲಿಂಗಂ ಕಂಪನಿ ಅಕ್ರಮದ ಬಳಿಕವೇ ಬಿ.ಎಸ್. ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಅವರ ಹಸ್ತಕ್ಷೇಪದ ಬಗ್ಗೆ ಪಕ್ಷದಲ್ಲಿಯೇ ದೊಡ್ಡ ಚರ್ಚೆ ಆಗಿತ್ತು. ಅಧಿಕಾರದಿಂದ ನಿರ್ಗಮಿಸಿರುವ ಯಡಿಯೂರಪ್ಪ ಅವರ ಆಪ್ತರ ಮೇಲೆ ನಡೆದಿರುವ ದಾಳಿಯಲ್ಲಿ ಸದ್ಯ ಸಿಕ್ಕಿರುವ ದಾಖಲೆಗಳನ್ನು ನೋಡುತ್ತಿದ್ದರೆ, ಅತಿ ಶೀಘ್ರದಲ್ಲಿಯೇ ಈ ಪ್ರಕರಣದಲ್ಲಿ ಇಡಿ ಎಂಟ್ರಿ ಕೊಡುವ ನಿಶ್ಚಳತೆ ಕಾಣುತ್ತಿದೆ.

ಘಟನಾನುಘಟಿಗಳ ಮನೆಗಳ ಮೇಲೆ ದಾಳಿ: ಚಾರ್ಟೆಡ್ ಅಕೌಂಟೆಂಟ್ ಅಮಲಾ ಎಂಬುವರ ಮನೆ ಮೇಲೆ ದಾಳಿ ನಡೆಸಿದ್ದು, ಲಭ್ಯವಾದ ನಗದು ಎಣಿಸಲು ಹಣ ಎಣಿಕೆ ಯಂತ್ರಗಳನ್ನು ಐಟಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ. ಇನ್ನು ಯಡಿಯೂರಪ್ಪ ಕುಟುಂಬದ ಪರಮಾಪ್ತರಾಗಿ ಗುರುತಿಸಿಕೊಂಡಿರುವ ಬಾಗಲಕೋಟೆ ಮೂಲದ ಡಿ.ಆರ್. ಉಪ್ಪಾರ್ ಗುತ್ತಿಗೆ ಕಂಪನಿ ಮೇಲೂ ದಾಳಿ ನಡೆದಿದೆ. ಅಲ್ಲದೇ ವಿಜಯೇಂದ್ರ ಅವರಿಂದ ಹಲವು ಗುತ್ತಿಗೆ ಪಡೆದಿದ್ದಾರೆ ಎನ್ನಲಾದ ಮನೋಹರ್ ಮತ್ತು ಜಿ. ಶಂಕರ್ ಅವರ ಮನೆ ಹಾಗೂ ಕಚೇರಿ ಮೇಲೂ ಐಟಿ ದಾಳಿ ನಡೆದಿದ್ದು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಎ ಅಮಲಾ ಮನೆ ಮೇಲೆ ದಾಳಿ: ಚಾರ್ಟೆಡ್ ಅಕೌಂಟೆಟ್ ಅಮಲಾ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ನಗದು ಹಣ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಗಡೆ ನಗರ ಬಳಿ ಇರುವ ಎನ್.ಆರ್. ರಾಯಲ್ ಅಪಾರ್ಟ್ ಮೆಂಟ್ ಪ್ಲಾಟ್ ನಂ. 212 ರಲ್ಲಿ ಅಮಲಾ ವಾಸವಾಗಿದ್ದರು. ಅಮಲಾ ಮನೆ ಮೇಲೆ ದಾಳಿ ಮಾಡಿದ ಕೆಲವೇ ಕ್ಷಣಗಳಲ್ಲಿ ಐಟಿ ಅಧಿಕಾರಿಗಳು ಮೂರು ಬ್ಯಾಗು ಹಾಗೂ ಹಣ ಎಣಿಸುವ ಯಂತ್ರ ತೆಗೆದುಕೊಂಡು ಹೋದರು. ಬಳಿಕ ಚಿನ್ನದ ಅಸಲಿತನ ಪರಿಶೀಲಿಸಿ ತೂಕ ಹಾಕುವ ಅಕ್ಕ ಸಾಲಿಗನನ್ನು ಕೂಡ ಐಟಿ ಅಧಿಕಾರಿಗಳು ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದರು. ಅಮಲಾ ಬ್ಯಾಂಕ್ ಖಾತೆ, ನಗದು ಚಿನ್ನಾಭರಣ ವಶಪಡಿಸಿಕೊಂಡು ಐಟಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಉಪ್ಪಾರ್ ಕಂಪನಿ ಮೇಲೆ ದಾಳಿ :
ಜಲ ಸಂಪನ್ಮೂಲ ಇಲಾಖೆ ಹಾಗೂ ನೀರಾವರಿ ಇಲಾಖೆಯ ಬಹುತೇಕ ಗುತ್ತಿಗೆಗಳನ್ನು ನಿರ್ವಹಿಸಿರುವ ಬಾಗಲಕೋಟೆಯ ಡಿ.ಆರ್. ಉಪ್ಪಾರ್ ಕಂಪನಿ ಮೇಲೂ ಐಟಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಾಗಲಕೋಟೆಯ ನವನಗರದಲ್ಲಿರುವ ಡಿ.ಆರ್. ಉಪ್ಪಾರ್ ಅವರ ಮನೆ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಉಪ್ಪಾರ್ ಮಾತ್ರವಲ್ಲದೇ ಜಿ. ಶಂಕರ್ ಹಾಗೂ ಮನೋಹರ್ ಸೇರಿದಂತೆ ಸುಮಾರು 28 ಗುತ್ತಿಗೆದಾರರ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ. ನೀರಾವರಿ ಇಲಾಖೆಯ ಕಾಮಗಾರಿ ಟೆಂಡರ್ ಅಕ್ರಮಕ್ಕೆ ಸಂಬಂಧಿಸಿದಂತೆ ನಡೆದಿರುವ ಬೇನಾಮಿ ವಹಿವಾಟಿಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಐಟಿ ದಾಳಿ ಮೂಲಕ ತನಿಖೆ ಆರಂಭಿಸಿದ್ದು, ಬೇನಾಮಿ ವಹಿವಾಟು ಪತ್ತೆಯಾದರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂಟ್ರಿ ಕೊಡಲಿದ್ದಾರೆ.











Click it and Unblock the Notifications