ರೈತರನ್ನು ಅವಮಾನಿಸುವ ಉದ್ದೇಶ ನನಗಿಲ್ಲ: ಸಚಿವ ಶಿವಾನಂದ ಪಾಟೀಲ್
ಬೆಂಗಳೂರು, ಸೆಪ್ಟೆಂಬರ್ 7: ರೈತರ ಆತ್ಮಹತ್ಯೆ ಕುರಿತು ಜವಳಿ ಸಚಿವ ಶಿವಾನಂದ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ ಎರಡು ದಿನಗಳ ನಂತರ, ಗುರುವಾರ ಅವರು ನಾನು ರೈತರ ವಿರುದ್ಧ ಏನೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ತಮ್ಮ ವಿರುದ್ಧ ಹೇಳಿಕೆ ನೀಡಿರುವ ಬಿಜೆಪಿ ನಾಯಕರಾದ ಬಿವೈ ವಿಜಯೇಂದ್ರ ಮತ್ತು ಬಿ ಶ್ರೀರಾಮುಲು ವಿರುದ್ಧ ಸಚಿವರು ವಾಗ್ದಾಳಿ ನಡೆಸಿದರು. ಹಾವೇರಿ ಜಿಲ್ಲೆಯಲ್ಲಿ 18 ರೈತರ ಆತ್ಮಹತ್ಯೆಗಳು ನಡೆದಿವೆ ಎಂದು ವರದಿಗಳ ಬೆನ್ನಲ್ಲೇ ಎಫ್‌ಎಸ್‌ಎಲ್ ವರದಿ ಪಡೆದು ತನಿಖೆ ನಡೆಸಿದಾಗ ಕೇವಲ 6 ಅಸಲಿ ಪ್ರಕರಣಗಳು ಎಂಬುದು ಬೆಳಕಿಗೆ ಬಂದಿದೆ. ರೈತ ಸಮುದಾಯಕ್ಕೆ ಸಂಬಂಧಿಸಿದ ವ್ಯಕ್ತಿ ಮರಣಹೊಂದಿದರೆ ಅದನ್ನು ರೈತ ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತದೆ ಎಂದು ಹೇಳಿದ್ದರು.

ಅಲ್ಲದೆ ರೈತರು ಸಾಲ ಅಥವಾ ನಷ್ಟದಿಂದ ಸಾವನ್ನಪ್ಪಿದ್ದರೆ, ನಾವು ಅವರಿಗೆ ಪರಿಹಾರವನ್ನು ನೀಡುತ್ತೇವೆ. ಆದರೆ, ಅಪ್ಪ-ಮಗನ ಒಂದೇ 'ಪಹಣಿ' ಸಂಖ್ಯೆಯಿಂದ ಆಗುತ್ತಿರುವುದು, ದುಶ್ಚಟಗಳಿಂದ ಸತ್ತರೆ ಪರಿಹಾರ ನೀಡುವಂತೆ ಒತ್ತಡ ಹೇರುತ್ತಿರುವುದು ತಪ್ಪು. ನಾನು ರೈತರನ್ನು ಅವಮಾನಿಸುವ ಹೇಳಿಕೆ ನೀಡಿಲ್ಲ ಎಂದು ಪಾಟೀಲ್ ಹೇಳಿದ್ದರು.
ನಮ್ಮ ಇಬ್ಬರು ಶಾಸಕರು ಹೇಳಿದ್ದನ್ನಷ್ಟೇ ಹೇಳಿದ್ದೇನೆ. ನಮ್ಮ ರೈತರನ್ನು ಅವಮಾನಿಸುವಂಥ ಯಾವುದೇ ತಪ್ಪನ್ನು ನಾನು ಹೇಳಿಲ್ಲ. ತಪ್ಪು ವರದಿಗಳಿಂದಾಗಿ ಕೆಲವು ಜಿಲ್ಲೆಗಳು ಮಾನಹಾನಿಯಾಗುತ್ತಿದ್ದು, ಹಾಗಾಗಬಾರದು. ನಾವು ರೈತರ ಪ್ರಾಣ ತೆಗೆಯಲು ಅವರನ್ನು ಪ್ರಚೋದಿಸಬಾರದು, ಅಲ್ಲದೆ ಅಂತಹ ಘಟನೆಗಳಿಗೆ ನಾವು ಅವಕಾಶ ನೀಡಬಾರದು ಎಂದು ಸಚಿವರು ಹೇಳಿದರು.
2015ರಲ್ಲಿ ಪರಿಹಾರವನ್ನು 5 ಲಕ್ಷಕ್ಕೆ ಹೆಚ್ಚಿಸಿದ ನಂತರ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ ಎಂದು ಶಿವಾನಂದ ಪಾಟೀಲ್ ಸೆಪ್ಟೆಂಬರ್ 5 ರಂದು ಹೇಳಿದ್ದರು. ಇದಕ್ಕೆ ಶಾಸಕ ಬಿವೈ ವಿಜಯೇಂದ್ರ ಮತ್ತು ಬಿ ಶ್ರೀರಾಮುಲು ಅವರು ಸಚಿವರನ್ನು ತರಾಟೆಗೆ ತೆಗೆದುಕೊಂಡರು ಮತ್ತು ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ನಾನು ನಿಮ್ಮ ತಂದೆ (ಯಡಿಯೂರಪ್ಪ) ಸೇರಿದಂತೆ ಎಂಟು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ನೀವು ಈಗಷ್ಟೇ ಎಂಎಲ್ ಎ ಆಗಿದ್ದೀರಿ, ನಿಮಗೆ (ವಿಜಯೇಂದ್ರ) ಹೇಗೆ ಮಾತನಾಡಬೇಕು ಎಂಬುದು ಗೊತ್ತಿರಬೇಕು. ಶ್ರೀರಾಮುಲು ನನ್ನನ್ನು ಮೆಂಟಲ್ ಎಂದು ಕರೆದಿದ್ದಾರೆ. ನಾನು ಅವರನ್ನು ಆಹ್ವಾನಿಸುತ್ತೇನೆ, ಧಾರವಾಡದ ಮಾನಸಿಕ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡೋಣ. ನಾನು ನರಳುತ್ತಿದ್ದರೆ ನಾನು ಅಲ್ಲಿಯೇ ಇರುತ್ತೇನೆ, ಅವರು ಬಳಲುತ್ತಿದ್ದರೆ ಅವರು ಅಲ್ಲೇ ಉಳಿಯಲಿ ಎಂದು ಪಾಟೀಲ್ ಹೇಳಿದರು.












Click it and Unblock the Notifications