ಬೆಂಗಳೂರು-ಮೈಸೂರು ಹೈವೇ ನಿರ್ಮಾಣ ಕ್ರೆಡಿಟ್ ವಾರ್: ಹೈವೇ ಮಾಡಿಸಿದ್ದು ನಾನೇ ಎಂದ ಸಂಸದ
ಬೆಂಗಳೂರು,ಡಿಸೆಂಬರ್ 29: ಬೆಂಗಳೂರು-ಮೈಸೂರು ಹೈವೇ ನಿರ್ಮಾಣ ಕ್ರೆಡಿಟ್ ವಾರ್ ಮತ್ತೆ ಮುನ್ನೆಲೆ ಬಂದಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ವಾರ್ ಶುರುವಾಗಿದೆ. ಬೆಂಗಳೂರು-ಮೈಸೂರು ಹೈವೇ ಮಾಡಿಸಿದ್ದು ನಾನೇ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹೈವೇ ನಿರ್ಮಾಣಕ್ಕೆ 8,500 ಕೋಟಿ ವೆಚ್ಚವಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಎಂಟೂವರೆ ರೂಪಾಯಿ ಕೂಡ ನೀಡಿಲ್ಲ.
ಹೈವೇ ನಿರ್ಮಿಸಿದ್ದು ಕೇಂದ್ರ ಸರ್ಕಾರ. ಹೈವೇ ಉದ್ಘಾಟನೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಬೇಕಾದರೆ ಹೈವೇಯಲ್ಲಿ ಓಡಾಡುವವರನ್ನು ಕೇಳಿದರೂ, ರಸ್ತೆಯನ್ನು ಯಾರು ಮಾಡಿಸಿದ್ದಾರೆ ಎಂದು ಹೇಳುತ್ತಾರೆ ಎಂದು ಪ್ರತಾಪ್ ಸಿಂಹ ಹೇಳಿದ ಅವರು, ಹೈವೇ ನಿರ್ಮಾಣದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ಪಾತ್ರವೇನೂ ಇಲ್ಲ ಎಂದು ಹರಿಹಾಯ್ದರು.

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣದ ಅಗತ್ಯವಿಲ್ಲ. ನಂದಿ ಬೆಟ್ಟಕ್ಕೆ ಬೇಕಾದರೆ ರೋಪ್ ವೇ ನಿರ್ಮಾಣ ಮಾಡಿಕೊಳ್ಳಲಿ. ಈ ಹಿಂದೆಯೇ ಶಾಸಕ ಜಿ ಟಿ ದೇವೆಗೌಡ ಹಾಗೂ ನಾವೆಲ್ಲರೂ ಸೇರಿ ಸಭೆ ನಡೆಸಿ ಇದರ ಬಗ್ಗೆ ತೀರ್ಮಾನ ಕೈಗೊಂಡಿದ್ದೇವೆ. ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡಲು ನಮ್ಮ ಪ್ರಬಲ ವಿರೋಧವಿದೆ. ಚಾಮುಂಡಿ ಬೆಟ್ಟ ಪ್ರೇಕ್ಷಣೀಯ ಸ್ಥಳವಲ್ಲ, ಧಾರ್ಮಿಕ ತಾಣ. ಚಾಮುಂಡಿ ಬೆಟ್ಟಕ್ಕೆ ಭಕ್ತಿ ಭಾವದಿಂದ ಹೋಗಬೇಕು. ಚಾಮುಂಡಿ ಬೆಟ್ಟ ರೋಪ್ ವೇ ನಲ್ಲಿ ಹೋಗಿ ನೋಡುವಂತಹ ಸ್ಥಳವಲ್ಲ. ರೋಪ್ ವೇ ಯನ್ನು ನಾವು ವಿರೋಧಿಸುತ್ತೇವೆ ಎಂದು ಪ್ರತಾಪ್ ಸಿಂಹ ಹೇಳಿದರು.

2024 ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ನೆರವೇರಲಿದೆ. ಅಂದು ಮೈಸೂರು-ಕೊಡಗು ಜಿಲ್ಲೆಯ ಎಲ್ಲಾ ದೇಗುಲಗಳಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು.












Click it and Unblock the Notifications