ಮುಂದಿನ ಮುಖ್ಯಮಂತ್ರಿ ನಾನೇ: ಸಂಚಲನ ಸೃಷ್ಟಿಸಿದ ಸತೀಶ್ ಜಾರಕಿಹೊಳಿ ಹೇಳಿಕೆ
ರಾಯಚೂರು, ಜನವರಿ 07: ರಾಜ್ಯ ರಾಜಕೀಯದಲ್ಲಿ ಪದೇ ಪದೇ ಮುಖ್ಯಮಂತ್ರಿ ಬದಲಾವಣೆ ವಿಚಾರ ಸದ್ದು ಮಾಡುತ್ತಿರುತ್ತದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರಿದ್ದು, ಎರಡುವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ ಎನ್ನುವ ಮಾತು ಕೈ ಪಾಳಯದಲ್ಲಿ ಚರ್ಚೆಯಾಗುತ್ತಿದ್ದು, ಈ ಬೆಳವಣಿಗೆಯ ನಡುವೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಸಚಿವ ಸತೀಶ್ ಜಾರಕಿಹೊಳಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಈ ಕುರಿತು ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ 2028 ರಲ್ಲಿ ಬರುವ ವಿಧಾನಸಭೆ ಚುನಾವಣೆಯಲ್ಲಿ ನಾನೇ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಹೇಳಿದ್ದೇನೆ. ಆದರೆ ಸದ್ಯಕ್ಕೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದು ಸಿಎಂ ಬದಲಾವಣೆ ವಿಚಾರ ಸದ್ಯಕ್ಕೆ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಸಾರಿಗೆ ಬಸ್ ದರ ಹೆಚ್ಚಳ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಯವರು ಕೇಂದ್ರದ ಜಿಎಸ್‌ಟಿ ಹೇರಿಕೆ ಬಗ್ಗೆಯೂ ಮಾತನಾಡಬೇಕು, ಕೇಂದ್ರ ಹಣಕಾಸು ಸಚಿವ ಹಳೆಯ ಗಾಡಿಗಳಿಗೆ ಶೇ.18 ರಷ್ಟು ಜಿಎಸ್‌ಟಿ ಹಾಕಿದ್ದಾರೆ. ಸಕ್ಕರೆ, ಕಾರ್ ಸೇರಿ ಇತರೆ ವಸ್ತುಗಳಿಗೆ ಶೇ.12 ರಷ್ಟು ಜಿಎಸ್‌ಟಿ ಹೇರಿದ್ದಾರೆ. ಇದರ ವಿರುದ್ಧ ಬಿಜೆಪಿಗರು ಮಾತ ನಾಡುವುದಿಲ್ಲ. ಬರೀ ಬಸ್ ದರದ ಕುರಿತು ವಿರೋಧ ವ್ಯಕ್ತಪಡಿಸಿದರೆ ಹೇಗೆ ಎಂದು ಪ್ರಶ್ನಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಟ್ಟು ರಹಸ್ಯ ಸಭೆಯನ್ನು ಮಾಡಿಲ್ಲ. ಅದು ರಹಸ್ಯ ಸಭೆಯಲ್ಲ, ಎಲ್ಲರೂ ಕೂಡಿಯೇ ಸಭೆ ಮಾಡಿದ್ದು, ಅದು ಊಟದ ಸಭೆಯಾಗಿತ್ತು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬದಲಾವಣೆ, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಯಂತಹ ಚರ್ಚೆಗಳ್ಯಾವು ನಡೆಸಿಲ್ಲ, ಸಚಿವ ಸಂಪುಟದ ವಿಸ್ತರಣೆಯೂ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ರಾಜ್ಯದಲ್ಲಿ ಶೇ.60 ಪರ್ಸೇಂಟ್ ಸರ್ಕಾರವಿದೆ ಎಂದು ಬಿಜೆಪಿಗರು ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಅಗತ್ಯ ದಾಖಲೆಗಳೊಂದಿಗೆ ಸಾಬೀತುಪಡಿಸಬೇಕೆ ಹೊರತು ಸುಮ್ಮನೇ ಹೇಳಿಕೆಗಳನ್ನು ನೀಡಿದರೆ ಆಗುವುದಿಲ್ಲ ಎಂದು. ನಮ್ಮ ಸರ್ಕಾರ ಬಂದ ಬಳಿಕ ಅಭಿವೃದ್ಧಿ ಕೆಲಸಗಳು ನಡೆದಿವೆ. ರಾಜ್ಯದಲ್ಲಿ ಶೇ.60ರಷ್ಟು ಪರ್ಸೆಂಟೇಸ್ ಸರ್ಕಾರ ಎಂದು ಬಿಜೆಪಿಯವರು ಆರೋಪ ಮಾಡುತ್ತಾರೆ. ಬರೀ ಆರೋಪ ಮಾಡುವುದಲ್ಲ. ಅದನ್ನು ಸಾಬೀತು ಮಾಡಬೇಕು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದರು.
ಇನ್ನೂ ಗುತ್ತಿಗೆದಾರ ಸಚಿನ್ ಸಾವಿನ ಪ್ರಕರಣದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬೀದರ್‌ನ ಗುತ್ತಿಗೆದಾರರ ಡೆತ್ ನೋಟ್‌ನಲ್ಲಿ ಪ್ರಿಯಾಂಕ್ ಖರ್ಗೆ ಅವರ ಆಪ್ತರ ಹೆಸರಿದೆ. ಈಶ್ವರಪ್ಪನವರದ್ದು ನೇರವಾಗಿ ಪತ್ರದಲ್ಲಿ ಹೆಸರಿತ್ತು. ಆಪ್ತರ, ಪಿಎಂಗಳ ಹೆಸರು ಇದೆ ಎಂದ ಮಾತ್ರಕ್ಕೆ ಸಚಿವರು ನೇರವಾಗಿ ಹೊಣೆಗಾರರು ಆಗುವುದಿಲ್ಲ, ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.
ಹಣಕಾಸಿನ ಸಮತೋಲನೆಯಿಲ್ಲದೇ ಕೆಲಸ ಮಾಡಿದ್ದರಿಂದ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಿಲ್‌ಗಳಿಗೆ ಹಣ ಬಿಡುಗಡೆಯಾಗಿಲ್ಲ. ಈ ಹಿಂದೆ ಆಡಳಿತ ನಡೆಸಿದ ಸರ್ಕಾರದ ಅಸಮತೋಲನ ಬಜೆಟ್ ಅಡಿಯಲ್ಲಿ ಕೆಲಸ ಮಾಡಿದ್ದರಿಂದ ಇದೀಗ ಆ ಕಾಮಗಾರಿಗಳಿಗೆ ದುಡ್ಡು ಕೊಡಬೇಕಾಗಿದ್ದು, ಹೆಚ್ಚುವರಿ ಹಣವನ್ನು ಹೊಂದಿಸಲಾಗುತ್ತಿದೆ. ಸಾವಿರ ಕೋಟಿ ಬಜೆಟ್ ಇದೆ ಎಂದರೆ ಆ ಮೊತ್ತದಲ್ಲಿಯೇ ಕೆಲಸ ಆಗಿದ್ದರೆ ಹಣ ಬಿಡುಗಡೆ ಮಾಡಬಹುದು ಎಂದು ತಿಳಿಸಿದರು.












Click it and Unblock the Notifications