DK Shivakumar: ಬಿಜೆಪಿ-ಆರ್ ಎಸ್ ಎಸ್ ಜೊತೆ ಕೈ ಜೋಡಿಸಿದ್ರಾ ಕನಕಪುರ ಬಂಡೆ: ಸ್ಪಷ್ಟನೆ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಆಗಸ್ಟ್ 22: ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಆರ್‌ಎಸ್‌ಎಸ್ ಪ್ರಾರ್ಥನಾ ಗೀತೆಯನ್ನು ಹಾಡಿ ಗಮನ ಸೆಳೆದಿದೆ. ವಿಧಾನಸಭೆಯಲ್ಲಿ ಮಾತನಾಡುತ್ತಾ 'ನಮಸ್ತೇ ಸದಾ ವತ್ಸಲೇ ಮಾತೃಭೂಮಿ' ಗೀತೆ ಎಂದು ಪಠಿಸಿದ್ದಾರೆ. ವಿಧಾನಸಭೆಯಲ್ಲಿ ಗುರುವಾರ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಶಿವಕುಮಾರ್ ಅವರು ಹಿಂದೆ ಆರ್‌ಎಸ್ಎಸ್ ಸಮವಸ್ತ್ರ ಧರಿಸಿದ್ದರು ಎಂದು ಹೇಳಿದಾಗ, ಶಿವಕುಮಾರ್ ಅವರು, ನನಗೂ ಆರ್‌ಎಸ್‌ಎಸ್ ಬಗ್ಗೆ ಗೊತ್ತು ಎಂದು ಹೇಳಿದ್ದರು.
ವಿಧಾನಸಭೆಯಲ್ಲಿ ಆರ್ ಎಸ್ ಎಸ್ ಗೀತೆ ಹಾಡಿದ್ದರ ಪರಿಣಾಮ ನೀವು ಬಿಜೆಪಿ ಹಾಗೂ ಆರ್ ಎಸ್ ಎಸ್ ಜೊತೆ ಕೈ ಜೋಡಿಸುವ ಬಗ್ಗೆ ಚರ್ಚೆಯಾಗುತ್ತಿದೆ ಎಂಬ ಪ್ರಶ್ನೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ ಇರುತ್ತೇನೆ. ನನ್ನ ಜೀವ, ನನ್ನ ರಕ್ತ ಎಲ್ಲವೂ ಕಾಂಗ್ರೆಸ್. ನಾನೀಗ ಪಕ್ಷವನ್ನು ಮುನ್ನಡೆಸುತ್ತಿದ್ದೇನೆ. ಅದಕ್ಕೆ ಆಧಾರಸ್ತಂಭವಾಗಿ ನಿಲ್ಲುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಖಡಕ್ಕಾಗಿ ಹೇಳಿದ್ದಾರೆ.

ನಾನು ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಯಾವುದೇ ರೀತಿಯಲ್ಲೂ ಅವರ ಜೊತೆ ಕೈ ಜೋಡಿಸುವ ಪ್ರಮೇಯವೇ ಇಲ್ಲ. ನಾನು ಅಪ್ಪಟ ಕಾಂಗ್ರೆಸ್ಸಿಗ. ಜನತಾದಳ, ಬಿಜೆಪಿ ಬಗ್ಗೆ ಸಂಶೋಧನೆ ಮಾಡುತ್ತಿರುತ್ತೇನೆ. ಅದೇ ರೀತಿ ಆರ್ ಎಸ್ ಎಸ್ ಬಗ್ಗೆಯೂ ತಿಳಿದುಕೊಂಡಿದ್ದೇನೆ ಎಂದರು. ನಾನು ಪ್ರತಿಯೊಂದು ರಾಜಕೀಯ ಪಕ್ಷಗಳ ಬಗ್ಗೆಯೂ ನನ್ನದೇ ಆದ ಸಂಶೋಧನೆ ನಡೆಸಿದ್ದೇನೆ. ಆರ್ ಎಸ್ ಎಸ್ ರಾಜ್ಯದಲ್ಲಿ ಹೇಗೆ ತನ್ನ ಸಂಘಟನೆ ಕಟ್ಟಿತು ಎಂಬುದು ನನಗೆ ತಿಳಿದಿದೆ. ಆರ್ ಎಸ್ ಎಸ್ ಪ್ರತಿ ತಾಲ್ಲೂಕು, ಜಿಲ್ಲೆ ಸೇರಿದಂತೆ ಎಲ್ಲಾ ಕಡೆ ಶಿಕ್ಷಣ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಸಾಕಷ್ಟು ಹಣ ಹೂಡಿಕೆ ಮಾಡುತ್ತಿದೆ. ಮಕ್ಕಳನ್ನು ತಲುಪುವ ಕೆಲಸ ಮಾಡುತ್ತಿದೆ ಎಂದರು.
ರಾಜಕೀಯವಾಗಿ ನಾವು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ರಾಜಕೀಯ ವ್ಯಕ್ತಿಯಾದ ನಾನು ರಾಜಕೀಯ ಎದುರಾಳಿಗಳಲ್ಲಿ ಯಾರು ಸ್ನೇಹಿತರಿದ್ದಾರೆ, ಯಾರು ಶತ್ರುಗಳಿದ್ದಾರೆ ಎನ್ನುವುದನ್ನು ತಿಳಿಯಬೇಕಲ್ಲವೇ? ಆದ ಕಾರಣಕ್ಕೆ ಆರ್ ಎಸ್ ಎಸ್ ಇತಿಹಾಸ ತಿಳಿದುಕೊಂಡಿದ್ದೇನೆ ಎಂದರು. ಕೆಲವೊಂದು ಸಂದರ್ಭದಲ್ಲಿ ಕೆಲವೊಂದು ಸಂಸ್ಥೆಗಳಲ್ಲಿ ಒಂದಷ್ಟು ಒಳ್ಳೆಯ ಗುಣಗಳಿರುತ್ತವೆ. ಅವುಗಳನ್ನೂ ನಾವು ಗಮನಿಸಬೇಕಲ್ಲವೇ? ನೇರವಾಗಿ, ದಿಟ್ಟವಾಗಿ ಮಾತನಾಡುವುದು ನಮ್ಮ ಗುಣ. ಬೇರೆಯವರಲ್ಲಿರುವ ಒಳ್ಳೆಯ ಗುಣಗಳನ್ನು ಗಮನಿಸಬೇಕು ಅದೇ ರೀತಿ ನಾವು ಮಾಡಿದ್ದೇವೆ ಎಂದು ಹೇಳಿದರು. ನಿಮ್ಮಲ್ಲೂ (ಮಾಧ್ಯಮ) ಒಬ್ಬೊಬ್ಬರದು ಒಂದೊಂದು ಗುಣ. ಹಿಡಿಯಲು ಬಂದರೆ ಜಾರಿಕೊಳ್ಳುವ ಗುಣವಿದೆ. ಒಳ್ಳೆಯ ಗುಣವೂ ಇದೆ. ಅವನ್ನು ನಾವು ಗಮನಿಸಬೇಕಲ್ಲವೇ? ಎಂದು ಡಿಸಿಎಂ ಅವರು ಉದಾಹರಣೆ ಕೊಟ್ಟರು.
ಬಿಜೆಪಿಯವರು ಧರ್ಮಸ್ಥಳ ಯಾತ್ರೆ ಮಾಡುತ್ತಿರುವ ಬಗ್ಗೆ ಕೇಳಿದಾಗ, "ಬಿಜೆಪಿ ಒಂದು ಠುಸ್ ಗಿರಾಕಿ. ಅವರು ಮಾಡುತ್ತಿರುವುದು ರಾಜಕಾರಣ. ಹಿರಿಯ ಅಧಿಕಾರಿ ಮೊಹಾಂತಿ ಅವರ ನೇತೃತ್ವದಲ್ಲಿ ತನಿಖಾ ತಂಡವು ಅಚ್ಚುಕಟ್ಟಾಗಿ ತಮ್ಮ ಕೆಲಸ ನಿರ್ವಹಿಸುತ್ತಿದೆ ಎಂದು ಡಿ ಕೆ ಶಿವಕುಮಾರ್ ಅವರು ಹೇಳಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆ ಆರೋಪ ಮಾಡಿದವನನ್ನು (ಮಹೇಶ್ ಶೆಟ್ಟಿ ತಿಮರೋಡಿ) ಬಂಧಿಸಲಾಗಿದೆ. ಆರೋಪ ಮಾಡಲು ಆತನ ಬಳಿ ದಾಖಲೆ ಏನಿದೆ? ನಮ್ಮ ನಡುವೆ ರಾಜಕೀಯವಾಗಿ ಸಾಕಷ್ಟು ಭಿನ್ನಾಭಿಪ್ರಾಯ ಹೊಂದಿರಬಹುದು ಆದರೆ ನಮ್ಮ ವಿರೋಧಿಗಳ ಬಗ್ಗೆ ಏನೇನೋ ಮಾತನಾಡುತ್ತಾನೆ ಎಂದು ನಾವು ಖುಷಿಪಡುವುದಲ್ಲ ಎಂದು ತಿಳಿಸಿದರು.
ಇಂದು ಅವರ ಬಗ್ಗೆ ಮಾತನಾಡಿದವರು, ನಾಳೆ ನಮ್ಮ ಬಗ್ಗೆಯೂ ಮಾತನಾಡುತ್ತಾರೆ. ಈ ಹಿಂದೆ ಮುಖ್ಯಮಂತ್ರಿಯವರು ಹಾಗೂ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಈ ರಾಜ್ಯದಲ್ಲಿ ಯಾರ ಸ್ವಾಭಿಮಾನಕ್ಕೂ ಧಕ್ಕೆ ಬರದಂತೆ ಕೆಲಸ ಮಾಡಬೇಕು. ರಾಜಕೀಯ ಮಾಡಲಿ, ರಾಜಕೀಯವಾಗಿ ಆರೋಪಗಳನ್ನು ಮಾಡಲಿ. ಆದರೆ ಆಧಾರಗಳನ್ನಿಟ್ಟುಕೊಂಡು ಆರೋಪ ಮಾಡಲಿ ಎಂದರು.












Click it and Unblock the Notifications