Israel-Iran War: ಇರಾನ್‌ನಲ್ಲಿ ಸಿಲುಕಿದ ಗೌರಿಬಿದನೂರು ವಿದ್ಯಾರ್ಥಿಗಳು
ಚಿಕ್ಕಬಳ್ಳಾಪುರ, ಜೂನ್ 17: ಯುದ್ದಪೀಡಿತ ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಗೌರಿಬಿದನೂರು ತಾಲೂಕಿನ ಏಳು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಗೌರಿಬಿದನೂರಿನ ಹಸನ್ ಸೈಯದ್ ಎಂಬುವವರು ಯುದ್ಧಪೀಡಿತ ಇರಾನ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ 7 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಕೂಡಲೇ ರಕ್ಷಣೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಅವರನ್ನು ಸ್ಥಳಾಂತರಿಸಬೇಕಿದೆ ಎಂದು ಕೋರಿದ್ದಾರೆ. ಗೌರಿಬಿದನೂರು ತಾಲ್ಲೂಕು ಅಲೀಪುರ ಗ್ರಾಮದ ಹಬೀಬ್ ರಾಜಾ, ಶಬ್ಬೀರ್ ಅಲಿ, ಇಲ್ಹಾನ್ ಅಲಿ, ಇರ್ಫಾನ್ ಹೈದರ್, ರಾಜಾ ಅಬ್ಬಾಸ್, ಹಬೀಬ್, ನಕೀರ್ ರಾಜಾ ಅವರು ಟೆಹರಾನ್‌ನಲ್ಲಿ ಸಿಲುಕಿಕೊಂಡಿದ್ದಾರೆ.

ಈ ಮಾಹಿತಿ ಆಧರಿಸಿ ಮಾಜಿ ಸಚಿವ ಶಿವಶಂಕರ್ ರೆಡ್ಡಿ ಅವರು ಸಹ ಕೂಡಲೇ ವಿದ್ಯಾರ್ಥಿಗಳಿಗೆ ರಕ್ಷಣೆಗೆ ಧಾವಿಸುವಂತೆ ಎಕ್ಸ್ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕೋರಿದ್ದಾರೆ. ಇನ್ನೂ ಇರಾನ್ ಹಾಗೂ ಇಸ್ರೇಲ್ ದೇಶಗಳ ನಡುವಿನ ಯುದ್ಧ ತಾರಕಕ್ಕೇರಿದ್ದು, ಈ ನಡುವೆ ಕೇರ್ ಟೇಕರ್ ಕೆಲಸ ಅರಸಿ ಇಸ್ರೇಲ್‌ಗೆ ತೆರಳಿರುವ ಹಾಸನ ಜಿಲ್ಲೆ ಆಲೂರು ತಾಲೂಕಿನ ಮಗ್ಗೆ ಹೋಬಳಿಯ 5 ಗ್ರಾಮಗಳ ಒಟ್ಟು 19 ಜನರು ಸುರಕ್ಷಿತವಾಗಿದ್ದಾರೆ. ಈ ಬಗ್ಗೆ ತಮ್ಮ ತಮ್ಮ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.
ಇನ್ನೂ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಘ ತೀವ್ರಗೊಂಡಿರುವುದರಿಂದ ಟೆಹರಾನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಮಂಗಳವಾರ ರಕ್ಷಣವೇ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ತಮ್ಮ ಸ್ಥಳ ಮತ್ತು ಸಂಪರ್ಕ ಸಂಖ್ಯೆಗಳನ್ನು ಒದಗಿಸುವಂತೆ ಕೋರಲಾಗಿದೆ. ಇನ್ನೂ ಭಾರತೀಯ ಮಿಷನ್ ಈಗಾಗಲೇ ತಮ್ಮ ಸ್ವಂತ ಸಂಪನ್ಮೂಲಗಳನ್ನು ಬಳಸಿಕೊಂಡು ಟೆಹರಾನ್‌ನಿಂದ ಹೊರಹೋಗಲು ಸಾಧ್ಯವಿರುವ ಎಲ್ಲಾ ಭಾರತೀಯ ಪ್ರಜೆಗಳು ನಗರದ ಹೊರಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸಲಹೆ ನೀಡಿದೆ.
ಈ ಕುರಿತು ಎಕ್ಸ್ ಪೋಸ್ಟ್‌ನಲ್ಲಿ ಭಾರತೀಯ ರಾಯಭಾರ ಕಚೇರಿ, ಎಲ್ಲಾ ಭಾರತೀಯ ಪ್ರಜೆಗಳು ತಕ್ಷಣ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಮತ್ತು ಅವರ ಸ್ಥಳ, ಸಂಪರ್ಕ ಸಂಖ್ಯೆಗಳನ್ನು ಒದಗಿಸುವಂತೆ ಕೋರಲಾಗಿದೆ. +989010144557; +989128109115; +989128109109 ಮೂಲಕ ಸಂಪರ್ಕಿಸುವಂತೆ ತಿಳಿಸಿದೆ. ಇತ್ತ ಇರಾನ್ ಹಾಗೂ ಇಸ್ರೇಲ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಸಚಿವಾಲಯದಲ್ಲಿ 24x7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯವೂ ತಿಳಿಸಿದೆ.












Click it and Unblock the Notifications