ಬಿಜೆಪಿ ನಾಯಕ ಅಣ್ಣಾಮಲೈ ಮೇಲೆ ಹೆಲಿಕಾಫ್ಟರ್‌ನಲ್ಲಿ ಅಪಾರ ಪ್ರಮಾಣದ ಹಣ ತಂದ ಆರೋಪ
ಉಡುಪಿ, ಏಪ್ರಿಲ್. 17: "ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಉಡುಪಿಗೆ ಬಂದಿಳಿದ ಹೆಲಿಕಾಪ್ಟರ್ ಮೂಲಕ ಜಿಲ್ಲೆಗೆ ಅಪಾರ ಪ್ರಮಾಣದ ಹಣವನ್ನು ತರಲಾಗಿದೆ" ಎಂದು ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಗಂಭೀರ ಆರೋಪ ಮಾಡಿದ್ದಾರೆ.
ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದರಾಜ್ ಕಾಂಚನ್ ನಾಮಪತ್ರ ಸಲ್ಲಿಕೆ ಸಮಾರಂಭದಲ್ಲಿ ಮಾತನಾಡಿದ ವಿನಯ್ ಕುಮಾರ್ ಸೊರಕೆ, ನನ್ನ ಮಾಹಿತಿಯಂತೆ ಅಣ್ಣಾಮಲೈ ಅವರ ಹೆಲಿಕಾಪ್ಟರ್ ಮೂಲಕ ನಮ್ಮ ಜಿಲ್ಲೆಗೆ ನಗದು ಸಾಗಿಸಲಾಗಿದೆ. ಹೆಲಿಕಾಪ್ಟರ್‌ನಲ್ಲಿ ಭಾರೀ ಮೊತ್ತದ ಹಣದ ಬ್ಯಾಗ್ ಬಂದಿದೆ. ಈ ಕುರಿತು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.

ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ನಾಮಪತ್ರ ಸಲ್ಲಿಕೆಗೂ ಮುನ್ನ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ವಿನಯ್ ಕುಮಾರ್ ಸೊರಕೆ ಮಾತನಾಡಿದರು. ಕಳೆದ ಚುನಾವಣೆಯಲ್ಲಿ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಸುಳ್ಳು ರಾಜಕೀಯ ಪ್ರಚಾರದಿಂದಲೇ ಗೆಲುವು ಸಾಧಿಸಿರಬಹುದು, ಆದರೆ, ಈ ಬಾರಿ ಅದು ಫಲಕಾರಿಯಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
"ಅಭ್ಯರ್ಥಿ ಘೋಷಣೆಯ ಸಂಭ್ರಮಕ್ಕೆ ಈಗ ಅವರು ಪಟಾಕಿ ಸಿಡಿಸುತ್ತಿದ್ದರೆ, ತಮ್ಮ ಅಭ್ಯರ್ಥಿ ಗೆದ್ದರೆ ಬಾಂಬ್ ಸಿಡಿಸಬಹುದು. ಚುನಾವಣೆ ಘೋಷಣೆಗೂ ಮುನ್ನವೇ ನಾಲ್ಕು ಭರವಸೆಗಳನ್ನು ನಾವು ಘೋಷಿಸಿದ್ದೇವೆ. ಕಳೆದ ಚುನಾವಣೆಯಲ್ಲಿ ಸುಳ್ಳು ಹೇಳಿಕೆಗಳು ಮತ್ತು ಆರೋಪಗಳಿಂದ ನಾವು ಸೋತಿದ್ದೇವೆ" ಎಂದು ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

"ನಾವೂ ಹಿಂದೂಗಳು, ಆದರೆ ಮೂಲಭೂತವಾದಿಗಳಲ್ಲ. ನಾವು ಪ್ರತಿದಿನವೂ ಪೂಜೆ ಮಾಡುತ್ತೇವೆ. ಕ್ರಿಸ್ತನಿಗೂ ಕೃಷ್ಣನಿಗೂ ಸಾಮ್ಯತೆಗಳಿವೆ. 2014ರ ಲ್ಲಿ ನಾವು ಭಾರತವನ್ನು ಮೋದಿಯವರ ಕೈಗೆ ಕೊಟ್ಟಾಗ ಭಾರತ ಅಂತರಾಷ್ಟ್ರೀಯ ಬ್ರ್ಯಾಂಡ್ ಆಗಿತ್ತು. ಸೂಜಿಯನ್ನೂ ಉತ್ಪಾದಿಸಲು ಸಾಧ್ಯವಾಗದ ರಾಜ್ಯದಿಂದ ದೇಶವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತಂದಿದ್ದೇವೆ" ಎಂದು ತಿಳಿಸಿದ್ದಾರೆ.
"ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ಏಕೈಕ ವ್ಯಕ್ತಿ ಸಿದ್ದರಾಮಯ್ಯ. ಏಕೆಂದರೆ ಅವರು ನ್ಯಾಯಯುತ ಮತ್ತು ಜನಸ್ನೇಹಿ ಆಡಳಿತ ನೀಡಿದ್ದಾರೆ. ಅವರ ಆಡಳಿತ ಈ ರಾಜ್ಯಕ್ಕೆ ವರದಾನವಾಗಿದೆ. ಪ್ರಸಾದ್ ರಾಜ್ ಕಾಂಚನ್ ಅವರಿಗೆ ಉಡುಪಿಯ ಅಭಿವೃದ್ಧಿ ಬಗ್ಗೆ ಉತ್ತಮ ಹಲವು ಕನಸುಗಳನ್ನು ಇಟ್ಟುಕೊಂಡಿದ್ದಾರೆ. ನಾವು ಅವರನ್ನು ಗೆಲ್ಲಿಸಬೇಕಾಗಿದೆ" ಎಂದು ಮನವಿ ಮಾಡಿದ್ದಾರೆ.
ಇದೇ ವೇಳೆ "ಪ್ರಮೋದ್ ಮಧ್ವರಾಜ್ ಸೋತಿದ್ದು ಸ್ವಂತ ತಪ್ಪುಗಳಿಂದ ಹೊರತು ಕಾಂಗ್ರೆಸ್ ಕಾರ್ಯಕರ್ತರಿಂದಲ್ಲ,'' ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹೇಳಿದ್ದಾರೆ.
ಇನ್ನು, ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಅಣ್ಣಾಮಲೈ, "ನಾನು ಹೆಲಿಕಾಪ್ಟರ್ ನಲ್ಲಿ ಬಂದಿದ್ದು ನಿಜ. ಆದರೆ, ವಿನಯ್ ಕುಮಾರ್ ಸೊರಕೆ ಅವರು ಎಲ್ಲರೂ ಅವರ ರೀತಿಯೇ ಇದ್ದಾರೆ ಎಂದುಕೊಂಡಿರಬೇಕು. ನಾವು ಪ್ರಾಮಾಣಿಕವಾಗಿದ್ದೇವೆ. ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುವ ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸೋಲಿಗೆ ಹೆದರಿ ಅವರು ಹೀಗೆ ಮಾತನಾಡುತ್ತಿದ್ದಾರೆ. ಇದರಿಂದ ನಮ್ಮ ಕಾಪು ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಗೆಲುವು ಖಚಿತ ಎನ್ನುವುದು ತಿಳಿಯುತ್ತಿದೆ" ಎಂದಿದ್ದಾರೆ.












Click it and Unblock the Notifications