National Highway: ಹುಬ್ಬಳ್ಳಿ-ವಿಜಯಪುರ ಹೈವೇ ಸಂಚಾರ ಮತ್ತಷ್ಟು ಸುಗಮ, ಮಹತ್ವದ ಯೋಜನೆಗೆ ಟೆಂಡರ್ ಆಹ್ವಾನ
ಬೆಂಗಳೂರು: ಉತ್ತರ ಕರ್ನಾಟಕದ ಪ್ರಮುಖ ತಾಲೂಕು ಹಾಗೂ ನಗರವಾದ ಹುಬ್ಬಳ್ಳಿಯಿಂದ ವಿಜಯಪುರ ಜಿಲ್ಲೆಗೆ ಪ್ರಮುಖ ಹೆದ್ದಾರಿ ಯೋಜನೆ ಕೈಗೆತ್ತಿಕೊಳ್ಳಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಧರಿಸಿದೆ. ಇದರಿಂದ ಈ ಭಾಗದ ಅನೇಕ ಗ್ರಾಮ, ಪಟ್ಟಣ, ತಾಲೂಕಗಳಿಗೆ ಪ್ರಯೋಜನವಾಗಲಿದೆ. ಈ ಭಾಗದ ಜನ ಸಂಚಾರ, ಸರಕು ಸಾಗಾಣೆಗೆ ವೇಗ ಸಿಗಲಿದೆ. ಈ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಟೆಂಡರ್ ಆಹ್ವಾನಿಸಲಾಗಿದೆ. ಈ ಯೋಜನೆ ಹಾದು ಯೋಗುವ ಪ್ರದೇಶಗಳು, ಉದ್ದ, ಪ್ರಯೋಜನಗಳ ವಿವರ ಮುಂದಿದೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಿಂದ ವಿಜಯಪುರ ಜಿಲ್ಲೆಗೆ ಇರುವ ಹಾಲಿ ರಾಷ್ಟ್ರೀಯ ಹೆದ್ದಾರಿ (NH 52) ಮಾರ್ಗವು ಕೇವಲ ಎರಡು ಪಥ ಹೊಂದಿದೆ. ಇದನ್ನು ನಾಲ್ಕು ಪಥಗಳಿಗೆ ವಿಸ್ತರಣೆ ಮಾಡುವ ಪ್ರಮುಖ ಹೆದ್ದಾರಿ ಯೋಜನೆ ಇದಾಗಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ಎನ್‌ಎಚ್‌ಎಐ ನಿರ್ಧರಿಸಿದೆ. ನವಲಗುಂದ ಮತ್ತು ನರಗುಂದ ಬೈಪಾಸ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಅವರೆರಡು ಬೈಪಾಸ್ ಒಳಗೊಂಡ ಡಿಪಿಆರ್ (DPR) ತಯಾರಿಸುವಂತೆ ಟೆಂಡರ್ ಕರೆಯಲಾಗಿದೆ ಎಂದು ಡಿಎಚ್ ವರದಿ ಮಾಡಿದೆ.

ಉತ್ತರ ಭಾರತದ ಕೆಲವು ರಾಜ್ಯಗಳಿಂದ ದಕ್ಷಿಣ ಕರ್ನಾಟಕವರೆಗೆ ಅತೀ ಉದ್ದದ ಹೆದ್ದಾರಿ ಅಂತಲೂ ಈ ರಸ್ತೆ ಕರೆಸಿಕೊಳ್ಳುತ್ತದೆ. ರಾಜ್ಯದ ಹುಬ್ಬಳ್ಳಿ-ವಿಜಯಪುರ ಹೆದ್ದಾರಿಯನ್ನು ನಾಲ್ಕು ಪಥಗಳಾಗಿ ವಿಸ್ತರಿಸುವುದರಿಂದ ಈ ಭಾಗದಲ್ಲಿ ನಿರಂತರ ಹಾಗೂ ಸುಗಮ ಪ್ರಯಾಣ ಸಾಧ್ಯವಾಗುತ್ತದೆ. ಈ ಕಾರಿಡಾರ್ ಮೂಲಕ ಅತ್ಯಧಿಕ ವಾಹನಗಳು ನಿತ್ಯ ಓಡಾಡುತ್ತವೆ. ಈ ಹೆದ್ದಾರಿ ಬಳಕೆ ಪ್ರಮಾಣ ಕ್ರಮೇಣ ಹೆಚ್ಚಾಗಿದೆ. ಈ ಮಾರ್ಗದ ವಿಸ್ತರಣೆ (4ಲೈನ್) ಮಾಡುವುದು ಅಗತ್ಯವಾಗಿದೆ. ಎಲ್ಲವು ಅಂದುಕೊಂಡಂತಾದರೂ ನಿಧಾನಗತಿಯ ಸಂಚಾರ ಅಂತ್ಯಗೊಂಡು ಪ್ರಯಾಣಕ್ಕೆ ವೇಗ ಸಿಗಲಿದೆ. ಸಮಯ ಉಳಿತಾಯವಾಗುತ್ತದೆ.
ಯೋಜನೆ ಒಳಪಡುವ ಪ್ರಮುಖ ಮಾರ್ಗ, ಜಿಲ್ಲೆಗಳ ವಿವರ
ಹುಬ್ಬಳ್ಳಿಯಿಂದ ವಿಜಯಪುರ ವರೆಗೆ 199 ಕಿಲೋ ಮೀಟರ್ ಉದ್ದದ ಹೆದ್ದಾರಿ ಇದಾಗಿದೆ. ಧಾರವಾಡ, ಗದಗ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಮೂಲಕ ಈ ರಸ್ತೆ ಹಾದು ಹೋಗುತ್ತದೆ. ನವಲಗುಂದ, ನರಗುಂದ, ಕೊಣ್ಣೂರು, ಕುಳಗೇರಿ, ಕೆರೂರು, ಗದ್ದನಕೇರಿ, ಬೀಳಗಿ ಮತ್ತು ಕೊಲ್ಹಾರ ಸೇರಿದಂತೆ ವಿವಿಧ ಪಟ್ಟಣಗಳನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯು ನಿತ್ಯ ಲಕ್ಷಾಂತರ ವಾಹನಗಳಿಗೆ ಅನುಕೂಲ ಒದಗಿಸಲಿದೆ.
2,317 ಕಿಲೋ ಮೀಟರ್ ಉದ್ದ ರಸ್ತೆ
ಈ ಎಲ್ಲ ಜಿಲ್ಲೆ, ಪಟ್ಟಣಗಳ ಪ್ರಯಾಣಿಕರಿಗೆ ಮತ್ತು ವಾಣಿಜ್ಯ ವಾಹನಗಳೆರಡಕ್ಕೂ ಸಹಾಯವಾಗಲಿದೆ. ಉತ್ತರ ಕರ್ನಾಟಕವನ್ನು ದಕ್ಷಿಣ ಮಹಾರಾಷ್ಟ್ರಕ್ಕೆ ಸಂಪರ್ಕ ಒದಗಿಸುತ್ತಿದೆ. ಈ ರಸ್ತೆಯು ದೇಶದಲ್ಲಿ ಒಟ್ಟು 2,317 ಕಿಲೋ ಮೀಟರ್ ಉದ್ದ ಹೊಂದಿದೆ. ಉತ್ತರ ಹಾಗೂ ದಕ್ಷಿಣ ಪ್ರಮುಖ ರಸ್ತೆ ಕಾರಿಡಾರ್ ಇದು ಅಂತಲೂ ಹೇಳಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಅಂಕೋಲಾ (ಕರ್ನಾಟಕ) ದಿಂದ ಸಂಗ್ರೂರ್ (ಪಂಜಾಬ್) ವರೆಗೆ ಸಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ ಮೂಲಕ ಹಾದು ಹೋಗುವ ರಸ್ತೆಯು ಕರ್ನಾಟಕದ 200 ಕಿಲೋ ಮೀಟರ್ ಭಾಗವು ಮುಂದಿನ ದಿನಗಳಲ್ಲಿ ವಿಸ್ತರಣೆ ಆಗಲಿದೆ. ಈ ಸಂಬಂಧ ಈಗಾಗಲೇ ಪ್ಲಾನ್ ಮಾಡಿಕೊಂಡಿರುವ ಎನ್‌ಎಎಐ ಶೀಘ್ರವೇ ಟೆಂಡರ್ ಫೈನಲ್ ಮಾಡಿ ಕಾರ್ಯಾರಂಭ ಮಾಡಲಿದೆ.












Click it and Unblock the Notifications