ಶ್ರಾವಣದ ಶುಭಸುದ್ದಿ: ಹುಬ್ಬಳ್ಳಿ-ವಾರಣಾಸಿ ರೈಲು ವಾರಕ್ಕೆ ಒಂದಲ್ಲ, 3 ದಿನ ರೈಲು ಸಂಚಾರ ಶೀಘ್ರ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಶ್ರಾವಣ ಆರಂಭದ ಶುಭ ಸಂದರ್ಭದಲ್ಲಿ ಹುಬ್ಬಳ್ಳಿ ಹಾಗೂ ಸಮಸ್ತ ಉತ್ತರ ಕರ್ನಾಟಕದ ಜನತೆಗೆ ಶುಭ ಸುದ್ದಿಯೊಂದನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ನೀಡಿದ್ದಾರೆ. ಆದಷ್ಟು ಶೀಘ್ರವೇ ಹುಬ್ಬಳ್ಳಿಯಿಂದ ಉತ್ತರ ಪ್ರದೇಶದ ವಾರಣಾಸಿಗೆ ಒಂದು ಬಾರಿ ಸಂಚಾರ ಮಾಡುವ ಎಕ್ಸ್‌ಪ್ರೆಸ್ ರೈಲಿನ ಸೇವೆ ವಿಸ್ತರಣೆಗೆ ಕೇಂದ್ರ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದಷ್ಟು ಬೇಗ ಪ್ರಯಾಣಿಕರ ಆಸೆ ನೆರವೇರಲಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ಬುಧವಾರ ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ ಪ್ರಹ್ಲಾದ್ ಜೋಶಿಯವರು ಹುಬ್ಬಳ್ಳಿ ಭಾಗದ ರೈಲ್ವೆ ಅಭಿವೃದ್ಧಿ ಹಾಗೂ ವಾರಣಾಸಿ ರೈಲು ಸೇವೆಯ ವಿಸ್ತರಣೆ ಕುರಿತು ಮನವಿ ಮಾಡಿದರು.

ವಾರಕ್ಕೆ ಒಂದಲ್ಲ, 3 ದಿನ ಸಂಚಾರ
ಉತ್ತರ ಕರ್ನಾಟಕ ಹಾಗೂ ಕಾಶಿ (ವಾರಣಾಸಿ) ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಹುಬ್ಬಳ್ಳಿ - ವಾರಣಾಸಿ ಎಕ್ಸ್‌ಪ್ರೆಸ್ ರೈಲು (07323/24) ಸೇವೆಯನ್ನು ವಾರಕ್ಕೆ 3 ದಿನಗಳಿಗೆ (Tri-weekly) ಹೆಚ್ಚಿಸಬೇಕು. ಶ್ರೀ ಸಿದ್ದರೂಢ ಸ್ವಾಮಿ ಹುಬ್ಬಳ್ಳಿ ರೈಲ್ವೆ ನಿಲ್ದಾಣವನ್ನು ಆಧುನಿಕ ಹಾಗೂ ಹೈಟೆಕ್ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೆ ಏರಿಸಬೇಕು.
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಉತ್ತಮ ಪಾರ್ಕಿಂಗ್ ವ್ಯವಸ್ಥೆ, ಶಾಪಿಂಗ್ ಮಾಲ್, ಮಲ್ಟಿಪ್ಲೆಕ್ಸ್, ರೆಸ್ಟೋರೆಂಟ್‌ಗಳು, ವಾಣಿಜ್ಯ ಮಳಿಗೆಗಳು ಸೇರಿದಂತೆ ಪ್ರಯಾಣಿಕರಿಗೆ ಅಗತ್ಯವಿರುವ ಹಲವು ಸೌಲಭ್ಯಗಳನ್ನು ಕಲ್ಪಿಸುವಂತೆ ಜೋಶಿಯವರು ಮನವಿ ಪತ್ರ ಸಲ್ಲಿಸಿದರು. ಜೊತೆಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಅಭಿವೃದ್ಧಿಯ ಅಗತ್ಯತೆ, ದೈನಂದಿನ ಪ್ರಯಾಣಿಕರ ಬಳಕೆ ಕುರಿತು ಮಾಹಿತಿ ನೀಡಿದರು.
ಬೇಡಿಕೆಗೆ ಅಶ್ವಿನಿ ವೈಷ್ಣವ್ ಸಮ್ಮತಿ
ಮನವಿ ಸ್ವೀಕರಿಸಿದ ಅಶ್ವಿನಿ ವೈಷ್ಣವ್ ಅವರು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲಿಯೇ ಹುಬ್ಬಳ್ಳಿ- ವಾರಣಾಸಿ ರೈಲು (07323/24) ಸೇವೆಯನ್ನು ವಾರಕ್ಕೆ ಮೂರು ದಿನಗಳಿಗೆ ಹೆಚ್ಚಿಸಲಾಗುವುದೆಂದು ಭರವಸೆ ನೀಡಿದ್ದಾರೆ. ಈ ಸೇವೆಯ ವಿಸ್ತರಣೆಯಿಂದ ಧಾರ್ಮಿಕ ಯಾತ್ರೆ ಕೈಗೊಳ್ಳುವ ಭಕ್ತಾಧಿಗಳಿಗೆ, ಪ್ರವಾಸಿಗರಿಗೆ ಹಾಗೂ ಉದ್ಯೋಗ-ವ್ಯಾಪಾರ ನಿಮಿತ್ತ ಪ್ರಯಾಣಿಸುವ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಇನ್ನೂ ಮುಂಬರುವ ದಿನಗಳಲ್ಲಿ ಹುಬಳ್ಳಿ ರೈಲ್ವೆ ನಿಲ್ದಾಣವನ್ನು ಉನ್ನತಿಕರಣಕ್ಕೂ ಕೇಂದ್ರ ಸಚಿವರು ಸಮ್ಮತಿಸಿದ್ದಾರೆ. ಶೀಘ್ರವೇ ಯೋಜನೆ/ಕಾಮಗಾರಿ ಕೈಗೆತ್ತಿಕೊಳ್ಳುವ ಕುರಿತು ಅಧಿಕೃತ ಮಾಹಿತಿಗಳು ಸಿಗಲಿವೆ ಎಂದರು.
ಸದ್ಯ ವಾರದಲ್ಲಿ ಹುಬ್ಬಳ್ಳಿ-ವಾರಣಾಸಿ ರೈಲು ಒಮ್ಮೆ ಸಂಚಾರ
ಸದ್ಯ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಬನಾರಸ್‌ಗೆ ಪ್ರತಿ ಶುಕ್ರವಾರ ವಾರಣಾಸಿ ಎಕ್ಸ್‌ಪ್ರೆಸ್ ರೈಲು ಸಂಚಾರ ಮಾಡುತ್ತಿದೆ. ಈ ರೈಲು ಹುಬ್ಬಳ್ಳಿಯಿಂದ 18.15ಕ್ಕೆ ಹೊರಡುತ್ತದೆ. ಒಟ್ಟು 38 ಗಂಟೆಗಳಲ್ಲಿ ಇದು ಬನಾರಸ್ ತಲುಪುತ್ತದೆ.


Click it and Unblock the Notifications
