ಅಯೋಧ್ಯೆಯಲ್ಲಿ ಭರತನಾಟ್ಯ ಪ್ರದರ್ಶನಕ್ಕೆ ಹುಬ್ಬಳ್ಳಿ ಕಲಾವಿದ: ವಾದ್ಯ ಮೇಳಕ್ಕೆ ಕನ್ನಡತಿಗೆ ಆಹ್ವಾನ
ಹುಬ್ಬಳ್ಳಿ, ಜನವರಿ 19: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಹುಬ್ಬಳ್ಳಿ ಭರತನಾಟ್ಯ ಕಲಾವಿದರೊಬ್ಬರಿಗೆ ಆಹ್ವಾನ ಬಂದಿದೆ.
ಕರ್ನಾಟಕಕ್ಕೂ ಅಯೋಧ್ಯೆಗೂ ಅವಿನಾಭಾವ ಸಂಬಂಧವಿದೆ. ಒಂದು ಕಡೆ ಈಗಾಗಲೇ ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ. ಇನ್ನೊಂದು ಕಡೆ ಹುಬ್ಬಳ್ಳಿಯ ಯುವಕನಿಗೆ ಅಯೋಧ್ಯೆಯಲ್ಲಿ ಭರತನಾಟ್ಯ ಪ್ರದರ್ಶನಕ್ಕೆ ಆಹ್ವಾನ ಬಂದಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಚಾರವಾಗಿದೆ.

ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನಾ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹುಬ್ಬಳ್ಳಿಯ ವಿದ್ವಾನ್ ಸುಜಯ ಶಾನಭಾಗ ಅವರಿಗೆ ಅಹ್ವಾನ ಬಂದಿದ್ದು, ಜಜನವರಿ 25ರಂದು ಅಯೋಧ್ಯೆಯಲ್ಲಿ ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ.
ಸಂಪೂರ್ಣ ದೇಶವೇ ಎದುರು ನೋಡುತ್ತಿರುವ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಅವಕಾಶ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಜಯ ಶಾನಭಾಗ, ತಮಗೆ ಅವಕಾಶ ಸಿಕ್ಕಿದಕ್ಕೆ ಖುಷಿ ವ್ಯಕ್ತಪಡಿಸಿದ್ದು, ಮೈಸೂರಿನ ವಸುಂಧರ ದೊರೆಸ್ವಾಮಿಯವರ ನೇತೃತ್ವದಲ್ಲಿ 'ಶ್ರೀರಾಮಂ ಭಜೆ' ಎನ್ನುವ ನೃತ್ಯ ಸಮರ್ಪಣೆಯಾಗಲಿದೆ. ಅವರ ಹಿರಿಯ ಶಿಷ್ಯನಾಗಿ ಅವರ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದೇನೆ ಎಂದರು.
ರಾಮಪ್ರಾಣ ಪ್ರತಿಷ್ಟಾಪನೆ ಸುಸಂದರ್ಭದಲ್ಲಿ ಈ ಅವಕಾಶ ಸಿಕ್ಕಿದು ನಮ್ಮ ಸೌಭಾಗ್ಯ. ಹುಬ್ಬಳ್ಳಿಯವನಾಗಿ ನಾನು ಶ್ರೀರಾಮನಿಗೆ ಪುಷ್ಪ ಅರ್ಪಣೆ ಮಾಡುತ್ತಿರುವ ಖುಷಿ ಇದೆ. 45 ನಿಮಿಷಗಳ ಕಾಲ ನೃತ್ಯ ರೂಪಕ ಇದಾಗಿದೆ. ವಸುಂಧರ ದೊರೆಸ್ವಾಮಿ ಸೇರಿದಂತೆ ನಾಲ್ವರ ತಂಡ ನೃತ್ಯ ರೂಪಕದಲ್ಲಿ ಪಾಲ್ಗೊಳ್ಳುತ್ತಿದ್ದು, ಅಯೋಧ್ಯೆಯಲ್ಲಿ ಕಾರ್ಯಕ್ರಮ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದು ಸುಜಯ ಶಾನಭಾಗ ಖುಷಿಯನ್ನು ಹಂಚಿಕೊಂಡಿದ್ದಾರೆ.

ಅಯೋಧ್ಯೆ ವಾದ್ಯ ಮೇಳಕ್ಕೆ ಕನ್ನಡತಿಗೆ ಆಹ್ವಾನ
ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ನಡೆಯಲಿರುವ ವಾದ್ಯ ಮೇಳಕ್ಕೆ ಕನ್ನಡತಿ ಶುಭಾ ಸಂತೋಷ್ ಅವರಿಗೆ ಆಹ್ವಾನ ಬಂದಿದೆ. ಕರ್ನಾಟಕ ಮೂಲದವರಾದ ಶುಭಾ ಸಂತೋಷ್ ಅವರನ್ನು ಅಯೋಧ್ಯೆಯಲ್ಲಿ ವೀಣೆ ನುಡಿಸಲು ಆಹ್ವಾನಿಸಲಾಗಿದೆ.
ರಾಮ ಮಂದಿರ ಉದ್ಘಾಟನೆ ದಿನವೇ ವಾದ್ಯ ಮೇಳ ನಡೆಯಲಿದೆ. ಅಂದು ಅಯ್ಯೋಧೆಯಲ್ಲಿ ಸುಮಾರು 22 ರಾಜ್ಯಗಳ ಶಾಸ್ತ್ರೀಯ ಸಂಗೀತಾ ವಾದ್ಯಗಳು ಹಾಗೂ ಹಿಂದುಸ್ತಾನಿ ಸಂಗೀತ ವಾದ್ಯಗಳು ಮೊಳಗಲಿವೆ. ಈ ಪೈಕಿ ಕರ್ನಾಟಕದ ಶುಭಾ ವೀಣೆ ನುಡಿಸಲಿದ್ದಾರೆ.
ಶುಭಾ ಸಂತೋಷ್ ಈಗಾಗಲೇ 250ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ವೀಣೆ ನುಡಿಸಿದ್ದಾರೆ. ಶ್ರೀ ವಿದ್ಯೆಶ ತೀರ್ಥ ಶ್ರೀ ಪಾದರ ಅವರ ಶಿಷ್ಯೆಯಾಗಿರುವ ಶುಭಾ ರಾಮಂದಿರಲ್ಲಿ ಜಯತು ಕೋಂದಡ ರಾಮ ಜಯತು ದಶರತ ರಾಮ ಎನ್ನುವ ಹಾಡನ್ನು ಹಾಡುತ್ತಾ ವೀಣೆ ನುಡಿಸಲಿದ್ದಾರೆ. ರಾಮನ ಮುಂದೆ ಹಾಡಲು 40 ವರ್ಷದ ತಂಜಾವೂರಿನ ವೀಣೆಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನಲಾಗಿದೆ.
ಇಂತಹ ಮಹತ್ವದ ಅವಕಾಶ ಸಿಕ್ಕಿರುವುದಕ್ಕೆ ಶುಭಾ ಸಂತೋಷ್ ತಮ್ಮ ಗುರುಗಳಾದ ಶ್ರೀ ಶ್ರೀನಿವಾಸ ಮೂರ್ತಿ ಆಚಾರ್, ಸುಧಾವ್ಯಾದರಾಜ್ , ಹೆಚ್ . ಸುಧೀಂದ್ರ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಶುಭಾ ಸಂತೋಷ್ ಅಯೋಧ್ಯೆಯಲ್ಲಿ ನಡೆಯಲಿರುವ ವಾದ್ಯ ಮೇಳದಲ್ಲಿ ಭಾಗವಹಿಸುತ್ತಿರುವುದಕ್ಕೆ ಕುಟುಂಬಸ್ಥರು ಹಾಗೂ ಸ್ನೇಹಿತರು ಸಂತೋಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications