ಬಹುಶಃ ಇದೊಂದು ವಿಡಿಯೋ ನಿಮ್ಮನ್ನು ವ್ಯಸನಗಳಿಂದ ದೂರ ಮಾಡಬಹುದು
ಮನುಷ್ಯನ ಸ್ವಭಾವದಲ್ಲಿ ಕೆಲವನ್ನು ಅಭ್ಯಾಸಗಳೆಂದು ಕರೆಯುತ್ತೇವೆ. ಈ ಅಭ್ಯಾಸಗಳು ನಮ್ಮನ್ನು ಬಿಡುವುದೇ ಇಲ್ಲ. ಆ ಅಭ್ಯಾಸಗಳು ಹೇಗಿರಬೇಕು ಎಂದರೆ; ನಾನು ಇಷ್ಟೊತ್ತಿಗೆ ಏಳುತ್ತೇನೆ, ಇಷ್ಟೊತ್ತಿಗೆ ಮಲಗುತ್ತೇನೆ, ಇಂಥಹದ್ದೇ ಕೆಲಸ ಮಾಡುತ್ತೇನೆ ಎನ್ನುವುದಕ್ಕೆ ಸೀಮಿತವಾಗಿರಬೇಕು.
ಎಲ್ಲಾ ಅಭ್ಯಾಸಗಳಿಗೂ ಒಂದು ಅವಧಿ ಎನ್ನುವುದು ಇರುತ್ತದೆ, ಆ ಅವಧಿ ಮೀರಿದಾಗ ಮನಸ್ಸಿಗೇನೋ ಅಹಿತ ಶುರುವಾಗುತ್ತೆ. ಅಹಿತ ಶುರುವಾದಾಗ ಬೇಸರ ಆಗುತ್ತೋ, ಕಳವಳ ಆಗುತ್ತೋ ಆಗ ಅದರಿಂದ ಹೊರಬರಲು ಹೊಸ ಅಭ್ಯಾಸಗಳತ್ತ ಮುಖ ಮಾಡುತ್ತೇವೆ.
ಉದಾಹರಣೆ, ಒಬ್ಬ ಸ್ನೇಹಿತ ಹೇಳ್ತಾನೆ ಸಿಗರೇಟ್ ಸೇದು ಎಂದು, ಏನು ಆಗಲ್ಲ ನಾನು ಇಷ್ಟು ವರ್ಷದಿಂದ ಸೇದ್ತಿದೀನಿ, ಶುರು ಮಾಡು ಖುಷಿ ಸಿಗುತ್ತೆ ಎಂದು ಹೇಳ್ತಾನೆ, ಮೊದಲ ಬಾರಿಗೆ ಈತನೂ ಅದಕ್ಕೆ ತಲೆಯಾಡಿಸಿ ಸೇದಿದ ಬಳಿಕ ಅಯ್ಯೋ ನಾನು ಸೇದಿಬಿಟ್ಟೆ ಎನ್ನುವ ಪಾಪಪ್ರಜ್ಞೆ ಕಾಡಲು ಆರಂಭಿಸುತ್ತೆ.
ಪಾಪಪ್ರಜ್ಞೆಯಿಂದ ಬಿಡಲು ಹೊರಡುತ್ತೇವೆ. ಆದರೆ ಪ್ರಜ್ಞೆಗೆ ವಿರುದ್ಧವಾಗಿ, ಇದೇ ಕೊನೆಯ ಬಾರಿ ಎಂಬಂತೆ ಮತ್ತೊಂದು ಸಿಗರೇಟು ಸೇದುತ್ತೇವೆ. ಇದು ಚಟ ಶುರುವಾಗುವ ಮೊದಲ ಲಕ್ಷಣ.
ಹೀಗೆ, ಖುಷಿಗಾಗಿಯೋ, ಮತ್ತೊಂದಕ್ಕೊ ನಿಧಾನವಾಗಿ ಅವಲಂಬನೆ ಸೃಷ್ಟಿಯಾಗುತ್ತೆ, ಕೆಲವರಿಗೆ ಓದುವ ಚಟ, ಸಿನಿಮಾ ನೋಡುವ ಚಟ, ಇನ್ನೂ ಕೆಲವರಿಗೆ ಮಾತಿನ ಚಟ. ಕೊನೆಗೆ ಅದೊಂದು ಅಡಿಕ್ಷನ್ ಅಷ್ಟೆ. ಅಡಿಕ್ಷನ್ ಎಂಬ ಪದವೇ ಒತ್ತಡ, ಅಸಹಾಯಕತೆಯನ್ನು ಸೃಷ್ಟಿ ಮಾಡುತ್ತದೆ.
ಮೊಂದೊಂದು ದಿನ ಛೇ ಇದನ್ನು ಬಿಡೋಕೆ ಸಾಧ್ಯವೇ ಇಲ್ಲ ಎನ್ನುವ ಭಾವ ಹುಟ್ಟುತ್ತೆ, ಅಯ್ಯೋ ನಾನು ಎಷ್ಟು ಸ್ಟ್ರಾಂಗು ಬಿಡೋಕಾಗೋದಿಲ್ಲವಾ ಎಂದು ಮನಸ್ಸು ಹೇಳುತ್ತದೆ. ಆದರೆ ವಾಸ್ತವದಲ್ಲಿ ಬಿಡುಲು ಸಾಧ್ಯವಾಗದೆ ಇನ್ನಷ್ಟು ಜಾಸ್ತಿಯಾಗುತ್ತದೆ. ಒಂದು ಮುಗೀತು ಅನ್ನೋವಾಗಿ ಮತ್ತೊಂದು ಆರಂಭವಾಗುತ್ತೆ.
ಕೆಲವರಿಗೆ ಆಡುವ ಚಟ, ನಡೆಯೋ ಚಟ, ನೀವು ದಿನನಿತ್ಯ ಏನು ಮಾಡಬೇಕು ಅಂದುಕೊಂಡಿರುತ್ತೀರೋ ಅದನ್ನು ಮಾಡಲು ಬಿಡುವುದಿಲ್ಲ. ಕೆಲವು ಅಪಾಯಕಾರಿ ಚಟಗಳು ಕೂಡ ಇರುತ್ತವೆ, ಓದುವುದು, ಮಾತನಾಡುವುದರಿಂದ ಯಾವುದೇ ತೊಂದರೆಯಿಲ್ಲ.
ಆದರೆ ಮದ್ಯಪಾನ, ಧೂಮಪಾನ, ಮಾದಕವಸ್ತುಗಳ ಬಳಕೆ ಇವುಗಳು ನಿಮ್ಮ ಶರೀರದ ಮೇಲೂ ದುಷ್ಪರಿಣಾಮವನ್ನು ಬೀರುತ್ತವೆ. ಚಟವಿದ್ದರೆ ನಿಮಗೆ ಗುರಿ ತಲುಪಲು ಸಾಧ್ಯವಿಲ್ಲ, ಚಟ ನಿಮ್ಮತನವನ್ನು ಸಂಪೂರ್ಣವಾಗಿ ಬದಿಗಿರಿಸಿಬಿಡುತ್ತದೆ.
ಹಾಗಾದರೆ, ಚಟಗಳಿಂದ ದೂರವಾಗಲು ನೀವು ಏನು ಮಾಡಬೇಕು?:
ಮೊದಲು ನನಗೊಂದು ಅವಲಂಬನೆ ಶುರುವಾಗಿದೆ ಎಂದು ತಿಳಿಯುತ್ತಿದ್ದಂತೆಯೇ ತಜ್ಞರ ಸಲಹೆ ಪಡೆಯಬೇಕು. ಅವಲಂಬನೆ ವಸ್ತುವಿನ ಮೇಲೆ ಆಗಿರಬಹುದು ಅಥವಾ ವ್ಯಕ್ತಿಯ ಮೇಲೂ ಕೂಡ ಆಗಿರಬಹುದು.
ಒಂದು ಚಟವನ್ನು ನಿಮ್ಮಿಂದ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ, ಅಸಹಾಯಕತೆ ಹೆಚ್ಚಾಗುತ್ತಿದೆ ಎನ್ನುವಾಗ ತಡಮಾಡದೆ ತಜ್ಞರನ್ನು ಭೇಟಿ ಮಾಡಬೇಕು.
ಯಾವುದೇ ಮುಜುಗರಕ್ಕೆ ಒಳಗಾಗಿ ಚಟವನ್ನು ಮುಂದುವರೆಸಬೇಡಿ, ಮುಜುಗರದಿಂದ ನೀವು ಸಾಧಿಸುವುದು ಏನೂ ಇಲ್ಲ.
ಚಟದಿಂದ ಹೊರಬರಬೇಕು ಎಂದು ಯಾವುದೋ ಔಷಧಿ ತೆಗೆದುಕೊಳ್ಳಲೇಬೇಡಿ, ನಿಮಗೆ ನೀವೇ ವೈದ್ಯರಾಗಬೇಡಿ.
ಮೊಬೈಲ್, ಇಂಟರ್ನೆಟ್, ಮೆಸೇಜ್ ಯಾವುದೇ ಆದರೂ ದೀರ್ಘಾವಧಿ ಚಟವಾಗಿದ್ದರೆ ತಜ್ಞರ ಸಲಹೆ ಬೇಕೇಬೇಕು.
ಚಟ ಶುರು ಮಾಡಿಬಿಟ್ಟಿದ್ದೇನೆ ಅದು ನನ್ನಿಂದ ತಪ್ಪಿಸಿಕೊಂಡು ಹೋಗುವುದಿಲ್ಲ, ನಾನು ಬಿಡಲೂ ಸಾಧ್ಯವಿಲ್ಲ ಎನ್ನುವ ಭ್ರಮೆಯಲ್ಲಿರಬೇಡಿ. ಎಲ್ಲದಕ್ಕೂ ಪರಿಹಾರ ಇದ್ದೇ ಇದೆ.